Homeರಾಜ್ಯಬರ ಪರಿಹಾರ ವಿತರಣೆಯಲ್ಲೂ ರೈತರಿಗೆ ವಂಚನೆ : ಆರ್‌.ಅಶೋಕ್‌ ಆಕ್ರೋಶ

ಬರ ಪರಿಹಾರ ವಿತರಣೆಯಲ್ಲೂ ರೈತರಿಗೆ ವಂಚನೆ : ಆರ್‌.ಅಶೋಕ್‌ ಆಕ್ರೋಶ

ಬೆಂಗಳೂರು,ನ.11- ಬರದ ಸಂಕಷ್ಟದಲ್ಲಿರುವ ರೈತರಿಗೆ 5,000 ಪರಿಹಾರ ನೀಡುವುದಾಗಿ ಘೋಷಿಸಿ, ಮೊದಲ ಕಂತಿನಲ್ಲಿ 2,500 ಜಮೆ ಮಾಡುವುದಾಗಿ ಹೇಳಿದ್ದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರೇ, ಕೆಲ ರೈತರ ಬ್ಯಾಂಕ್‌ ಖಾತೆಗಳಿಗೆ 1,500, 2,000 ಮಾತ್ರ ಜಮೆಯಾಗಿದೆ ಏಕೆ? ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಪ್ರಶ್ನಿಸಿದ್ದಾರೆ.

ಸಂಕಷ್ಟದ ಸಮಯದಲ್ಲೂ ಪರಿಹಾರದ ಹಣದಲ್ಲಿ ಇಂಥ ತಾರತಮ್ಯ ಏಕೆ ನಡೆಯುತ್ತಿದೆ? ಸರ್ಕಾರ ಘೋಷಿಸಿದ ಮೊತ್ತವನ್ನೇ ಅನ್ನದಾತರ ಬ್ಯಾಂಕ್‌ ಖಾತೆಗೆ ತಲುಪಿಸಲು ಸಾಧ್ಯವಾಗದಿರುವುದು ಆಡಳಿತ ವೈಫಲ್ಯವಲ್ಲವೇ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ರೈತರಿಗೆ ಪರಿಹಾರ ಬೇಕೇ ಹೊರತು ಪ್ರಚಾರದ ಭಾಷಣಗಳಲ್ಲ. ಸರ್ಕಾರ ಘೋಷಿಸಿರುವ 5,000 ಪರಿಹಾರದಲ್ಲಿ ಕಡಿಮೆ ಮೊತ್ತ ಜಮೆಯಾಗಿರುವ ಬಗ್ಗೆ ಮುಖ್ಯಮಂತ್ರಿಗಳು ರಾಜ್ಯದ ರೈತರಿಗೆ ಸ್ಪಷ್ಟ ಉತ್ತರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಅಲ್ಲದೆ ರೈತರಿಗೆ ಬಾಕಿ ಉಳಿದಿರುವ ಪರಿಹಾರದ ಮೊತ್ತವನ್ನು ಕೂಡಲೇ ಬಿಡುಗಡೆ ಮಾಡಬೇಕು. ಅನ್ನದಾತರನ್ನು ಕೇವಲ ಘೋಷಣೆಗಳ ಮೂಲಕ ವಂಚಿಸುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ. ರೈತರ ಖಾತೆಗೆ ಘೋಷಿಸಿದ ಸಂಪೂರ್ಣ ಪರಿಹಾರ ತಲುಪಿಸುವಲ್ಲಿ ಸರ್ಕಾರ ವಿಫಲವಾದರೆ, ಕಾಂಗ್ರೆಸ್‌‍ ಸರ್ಕಾರದ ಈ ಬೇಜವಾಬ್ದಾರಿತನಕ್ಕೆ ರಾಜ್ಯದ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಆರ್‌.ಅಶೋಕ್‌ ಎಚ್ಚರಿಕೆ ನೀಡಿದ್ದಾರೆ.

RELATED ARTICLES

Latest News