ಗುವಾಹಟಿ, ನ.11- ಅಸ್ಸಾಂನ ಗುವಾಹಟಿ ಸಮೀಪದ ದಿಗಾರು ಪ್ರದೇಶದಲ್ಲಿ ಇಂದು ಬೆಳಿಗ್ಗೆ ಸೈರಾಂಗ್-ಕೋಲ್ಕತ್ತಾ ಎಕ್ಸ್ಪ್ರೆಸ್ ರೈಲಿನ ಆರು ಬೋಗಿಗಳು ಹಾಗೂ ಎಂಜಿನ್ ಹಳಿ ತಪ್ಪಿವೆ. ಸದ್ಯದ ಮಾಹಿತಿಯ ಪ್ರಕಾರ, ಯಾವುದೇ ಸಾವು ಸಂಭವಿಸಿರುವ ವರದಿಗಳಿಲ್ಲ. ಆದರೆ ಹಲವಾರು ಪ್ರಯಾಣಿಕರು ಗಾಯಗೊಂಡಿರುವ ಶಂಕೆ ವ್ಯಕ್ತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಿಜೋರಾಂನ ಐಜ್ವಾಲ್ ಸಮೀಪದ ಸೈರಾಂಗ್ನಿಂದ ಕೋಲ್ಕತ್ತಾಗೆ ತೆರಳುತ್ತಿದ್ದ ರೈಲು, ಬೆಳಿಗ್ಗೆ ಸುಮಾರು 6.54ರ ವೇಳೆಗೆ ಕಾಮರೂಪ್ ಜಿಲ್ಲೆಯ ದಿಗಾರು ರೈಲು ನಿಲ್ದಾಣದ ಸಮೀಪ ಹಳಿ ತಪ್ಪಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಲವಾರು ಪ್ರಯಾಣಿಕರು ಗಾಯಗೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆದರೆ ಗಾಯಗೊಂಡವರ ನಿಖರ ಸಂಖ್ಯೆ ಹಾಗೂ ರೈಲು ಹಳಿ ತಪ್ಪಲು ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ ಎಂದು ಅವರು ಹೇಳಿದ್ದಾರೆ. ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲು ಹಾಗೂ ಹಳಿ ತೆರವುಗೊಳಿಸಲು ಅಪಘಾತ ಸ್ಥಳಕ್ಕೆ ಪರಿಹಾರ ರೈಲನ್ನು ಕಳುಹಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
