ವೆನೆಜುವೆಲಾ, ಜೂ.26- ವೆನೆಜುವೆಲಾದ ಉತ್ತರ ಭಾಗದಲ್ಲಿ ಬುಧವಾರ ಸಂಜೆ ಸಂಭವಿಸಿದ ಸತತ ಎರಡು ಪ್ರಬಲ ಭೂಕಂಪಗಳ ಪರಿಣಾಮ ಮೃತರ ಸಂಖ್ಯೆ 235ಕ್ಕೆ ಏರಿಕೆಯಾಗಿದೆ. ಸುಮಾರು 4,300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಸಾವಿರಾರು ಜನರು ಇನ್ನೂ ನಾಪತ್ತೆಯಾಗಿರುವ ಕಾರಣ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಆತಂಕ ವ್ಯಕ್ತವಾಗಿದೆ.
ವೆನೆಜುವೆಲಾದ ಆರೋಗ್ಯ ಸಚಿವ ಕಾರ್ಲೋಸ್ ಅಲ್ವಾರಾಡೊ ನೀಡಿದ ಮಾಹಿತಿ ಪ್ರಕಾರ, ರಕ್ಷಣಾ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದ್ದು, ಅವಶೇಷಗಳಡಿ ಸಿಲುಕಿರುವವರನ್ನು ಜೀವಂತವಾಗಿ ಹೊರತೆಗೆದು ರಕ್ಷಿಸಲು ಯತ್ನಿಸಲಾಗುತ್ತಿದೆ.
ಬುಧವಾರ ಸಂಜೆ ಸಂಭವಿಸಿದ 7.2 ಮತ್ತು 7.5 ರಷ್ಟು ಭೂಕಂಪ ತೀವ್ರತೆಯ ಎರಡು ಭೂಕಂಪಗಳು ಕಳೆದ ಶತಮಾನದಲ್ಲಿ ವೆನೆಜುವೆಲಾದಲ್ಲಿ ಸಂಭವಿಸಿದ ಅತ್ಯಂತ ಪ್ರಬಲ ಭೂಕಂಪಗಳಲ್ಲಿ ಒಂದಾಗಿದ್ದು, ದೇಶದ ಹಲವು ಭಾಗಗಳಲ್ಲಿ ಅದರ ಕಂಪನ ಅನುಭವಿಸಲಾಯಿತು.
ಧೂಳು ಹಾಗೂ ರಕ್ತದಲ್ಲಿ ಮುಳುಗಿದ್ದ ಗಾಯಾಳುಗಳನ್ನು ಅವಶೇಷಗಳಡಿಯಿಂದ ಹೊರತೆಗೆಯಲಾಗುತ್ತಿದ್ದು, ಮಕ್ಕಳೂ ಸೇರಿದಂತೆ ಸಾಕು ಪ್ರಾಣಿಗಳೂ ರಕ್ಷಣಾ ಕಾರ್ಯಾಚರಣೆಯಲ್ಲಿ ಪತ್ತೆಯಾಗುತ್ತಿವೆ. ಸರ್ಕಾರಿ ದೂರದರ್ಶನ ಪ್ರಸಾರ ಮಾಡಿದ ದೃಶ್ಯಗಳಲ್ಲಿ, ಕಾಂಕ್ರಿಟ್‌ಗಳ ಅಡಿ ಸಿಲುಕಿದ್ದ ಮಹಿಳೆಯೊಬ್ಬರನ್ನು ರಕ್ಷಣಾ ಸಿಬ್ಬಂದಿ ಜೀವಂತವಾಗಿ ಹೊರತೆಗೆದ ದೃಶ್ಯ ಗಮನ ಸೆಳೆಯಿತು.
ಲಾ ಗುವೈರಾದಲ್ಲಿ ಭಾರೀ ಹಾನಿ:
ರಾಜಧಾನಿ ಕಾರಕಾಸ್ ಉತ್ತರದಲ್ಲಿರುವ ಕರಾವಳಿ ಪ್ರದೇಶ ಲಾ ಗುವೈರಾ ಅತ್ಯಂತ ಹೆಚ್ಚು ಹಾನಿಗೊಳಗಾಗಿದೆ. ವೆನೆಜುವೆಲಾದ ಪ್ರಮುಖ ವಿಮಾನ ನಿಲ್ದಾಣವೂ ಇದೇ ಪ್ರದೇಶದಲ್ಲಿದ್ದು, ಭೂಕಂಪದಿಂದ ಹಾನಿಗೊಳಗಾದ ಕಾರಣ ಮುಚ್ಚಲಾಗಿದೆ. ಇದರಿಂದ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗೆ ಅಡಚಣೆ ಉಂಟಾಗಿದೆ.
ನಗರಗಳಲ್ಲಿ ಅನೇಕ ಕಟ್ಟಡಗಳು ನೆಲಸಮವಾಗಿದ್ದು, ರಸ್ತೆಗಳು ಬಿರುಕು ಬಿಟ್ಟಿವೆ. ಹಲವೆಡೆ ಕಟ್ಟಡಗಳ ಗೋಡೆಗಳು ಮಾತ್ರ ಉಳಿದು, ಮನೆಯೊಳಗಿನ ಪೀಠೋಪಕರಣಗಳು ಕಿಟಕಿಗಳ ಮೂಲಕ ಹೊರಗೆ ಕಾಣಿಸುತ್ತಿವೆ.ನಾಪತ್ತೆಯಾದವರಿಗಾಗಿ ಕುಟುಂಬಸ್ಥರು ಅವರ ಛಾಯಾಚಿತ್ರಗಳಿರುವ ಪೋಸ್ಟರ್‌ಗಳನ್ನು ಅಂಟಿಸಿ ಹುಡುಕಾಟ ನಡೆಸುತ್ತಿದ್ದಾರೆ. ವಿದೇಶದಲ್ಲಿರುವ ವೆನೆಜುವೆಲಾ ಮೂಲದ ಜನರು ದೂರವಾಣಿ ಸಂಪರ್ಕ ಕಡಿತಗೊಂಡಿರುವುದರಿಂದ ತಮ ಕುಟುಂಬದವರ ಸಂಪರ್ಕಕ್ಕೆ ಬರಲು ಹರ ಸಾಹಸ ಪಡುತ್ತಿದ್ದಾರೆ.
ಕಾರಕಾಸ್ ನಗರದಲ್ಲಿ ನೂರಾರು ಜನರು ಭೂಕಂಪದ ಭೀತಿಯಿಂದ ಉದ್ಯಾನಗಳು, ವಾಹನ ನಿಲುಗಡೆ ಪ್ರದೇಶಗಳು ಹಾಗೂ ತೆರೆದ ಸ್ಥಳಗಳಲ್ಲಿ ರಾತ್ರಿ ಕಳೆದಿದ್ದಾರೆ.
ನನ್ನ ಮಗ ಎಲ್ಲಿದ್ದಾನೆ? ತಾಯಿಯ ಕಣ್ಣೀರು:
ಮೂರು ಮಕ್ಕಳ ತಾಯಿ ಡಯಾನಾ ಡೆಲ್ಗಾಡೊ ತಮ ಎಂಟು ವರ್ಷದ ಮಗ ಕಾಣೆಯಾಗಿದ್ದು, ಅವನು ಅವಶೇಷಗಳಡಿ ಸಿಲುಕಿದ್ದಾನೆಯೋ ಅಥವಾ ಸುರಕ್ಷಿತ ಆಶ್ರಯ ಕೇಂದ್ರದಲ್ಲಿದ್ದಾನೆಯೋ ತಿಳಿಯುತ್ತಿಲ್ಲ. ಸರ್ಕಾರ ಭರವಸೆ ನೀಡಿದ್ದ ಭಾರೀ ಯಂತ್ರೋಪಕರಣಗಳು ಎಲ್ಲಿವೆ? ಎಂದು ಪ್ರಶ್ನಿಸಿದರು.
ಮತ್ತೊಬ್ಬ ತಾಯಿ ತನ್ನ 3 ಮತ್ತು 10 ವರ್ಷದ ಮಕ್ಕಳ ಮೃತದೇಹಗಳನ್ನು ಹೊದಿಕೆಯಲ್ಲಿ ಹೊತ್ತುಕೊಂಡು ಹೋಗುತ್ತಿದ್ದ ದೃಶ್ಯ ಕಂಡು ಕುಸಿದು ಅತ್ತರೆ, ಹಲವರು ತಮ ಪ್ರೀತಿಪಾತ್ರರ ಹೆಸರನ್ನು ಕೂಗಿ ಹುಡುಕುತ್ತಿರುವ ದೃಶ್ಯಗಳು ಮನಕಲಕುವಂತಿದ್ದವು.
ಹಂಗಾಮಿ ಅಧ್ಯಕ್ಷೆ ಡೆಲ್ಸಿರೊಡ್ರಿಗಸ್ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದು, ಹಾನಿಗೊಳಗಾದ ಆಸ್ಪತ್ರೆಗಳು ಮತ್ತು ಮನೆಗಳು ಪುನಃ ನಿರ್ಮಾಣಕ್ಕಾಗಿ 200 ಮಿಲಿಯನ್ ಅಮೆರಿಕನ್ ಡಾಲರ್‌ಗಳ ವಿಶೇಷ ನಿಧಿ ರಚಿಸಲಾಗುತ್ತಿದೆ ಎಂದು ಘೋಷಿಸಿದ್ದಾರೆ.ರಕ್ಷಣಾ ಕಾರ್ಯಾಚರಣೆಗೆ ಅಗತ್ಯವಿರುವ ಭಾರೀ ನಿರ್ಮಾಣ ಯಂತ್ರೋಪಕರಣಗಳನ್ನು ಒದಗಿಸುವಂತೆ ಖಾಸಗಿ ಸಂಸ್ಥೆಗಳಿಗೆ ಅವರು ಮನವಿ ಮಾಡಿದ್ದಾರೆ.
ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್‌ಜಿಎಸ್ ) ಪ್ರಕಾರ, ಎರಡೂ ಭೂಕಂಪಗಳ ಕೇಂದ್ರಬಿಂದು ಕ್ಯಾರಿಬಿಯನ್ ಕರಾವಳಿಯ ಮೊರೊನ್ ಸಮೀಪವಾಗಿದ್ದು, ಕಾರಕಾಸ್ನಿಂದ ಸುಮಾರು 170 ಕಿ.ಮೀ. ದೂರದಲ್ಲಿತ್ತು.ಬ್ರೆಜಿಲ್‌ನ ಭೂ ಭೌತಶಾಸ್ತ್ರಜ್ಞ ಮಾರ್ಕೋಸ್ ಫೆರೇರಾ ಅವರ ಪ್ರಕಾರ, ಸತತವಾಗಿ ಸಂಭವಿಸಿದ ಎರಡು ಪ್ರಬಲ ಭೂಕಂಪಗಳು ಹಾಗೂ ಭೂಪದರದ ಆಳ ಕಡಿಮೆ ಇದ್ದ ಕಾರಣ ವಿನಾಶದ ಪ್ರಮಾಣ ಮತ್ತಷ್ಟು ಹೆಚ್ಚಾಯಿತು.
ಭೂಕಂಪದ ಬಳಿಕ ತುರ್ತು ಮಾಹಿತಿ ಜನರಿಗೆ ತಲುಪುವ ಉದ್ದೇಶದಿಂದ ಸಾಮಾಜಿಕ ಜಾಲತಾಣಗಳ ಮೇಲಿನ ನಿರ್ಬಂಧ ತೆರವುಗೊಳಿಸುವಂತೆ ವಿಶ್ವಸಂಸ್ಥೆ ಮನವಿ ಮಾಡಿತ್ತು. ಇದರ ಬೆನ್ನಲ್ಲೇ, 2024ರ ಆಗಸ್ಟ್‌ನಿಂದ ನಿರ್ಬಂಧಿಸಲಾಗಿದ್ದ ಎಕ್ಸ್ ಸಾಮಾಜಿಕ ಜಾಲತಾಣವನ್ನು ವೆನೆಜುವೆಲಾದಲ್ಲಿ ಮತ್ತೆ ಬಳಸಲು ಅವಕಾಶ ನೀಡಲಾಗಿದೆ.
ಮೆಕ್ಸಿಕೊ, ಕತಾರ್, ಬ್ರೆಜಿಲ್, ಸ್ಪೇನ್, ಪೋರ್ಚುಗಲ್ ಹಾಗೂ ಕೆನಡಾ ಸೇರಿದಂತೆ ಹಲವು ದೇಶಗಳು ನೆರವು ಘೋಷಿಸಿದ್ದು, ಪರಿಹಾರ ಸಾಮಗ್ರಿಗಳ ರವಾನೆ ಈಗಾಗಲೇ ಆರಂಭವಾಗಿದೆ.
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಕೂಡ ವೆನೆಜುವೆಲಾಕ್ಕೆ ತಕ್ಷಣ ನೆರವು ಕಳುಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಮೆಕ್ಸಿಕೊ, ಎಲ್ ಸಾಲ್ವಡಾರ್ ಹಾಗೂ ಡೊಮಿನಿಕನ್ ಗಣರಾಜ್ಯದಿಂದ ರಕ್ಷಣಾ ತಂಡಗಳು ಮತ್ತು ಪರಿಹಾರ ಸಾಮಗ್ರಿಗಳು ವೆನೆಜುವೆಲಾಗೆ ತಲುಪಿವೆ.
ಭೂಕಂಪ ದುರಂತದ ನಡುವೆ ವಿದೇಶದಲ್ಲಿರುವ ವೆನೆಜುವೆಲಾ ಮೂಲದ ಸಮುದಾಯವೂ ಹಣ, ಆಹಾರ ಮತ್ತು ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ಸಂತ್ರಸ್ತರಿಗೆ ನೆರವು ನೀಡಲು ಮುಂದಾಗಿದೆ.
