ಬೆಂಗಳೂರು, ಜೂ.27- ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿಯಾಗಿ, ಖ್ಯಾತ ಶಿಕ್ಷಣತಜ್ಞ, ವಿಜ್ಞಾನಿ ಹಾಗೂ ಆಡಳಿತ ಪರಿಣಿತರಾದ ಪ್ರೊ.ಎ.ಪಿ.ಜ್ಞಾನ ಪ್ರಕಾಶ್ ಅವರನ್ನು ರಾಜ್ಯಪಾಲರು ಹಾಗೂ ವಿಶ್ವವಿದ್ಯಾನಿಲಯಗಳ ಕುಲಾಧಿಪತಿ ಥಾವರ್ಚಂದ್ ಗೆಹ್ಲೋಟ್ ಅವರು ನೇಮಕ ಮಾಡಿದ್ದಾರೆ.
ಪ್ರೊ. ಎ.ಪಿ. ಜ್ಞಾನ ಪ್ರಕಾಶ್ ಅವರು ಪ್ರಸ್ತುತ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಭೌತಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕರಾಗಿ ಹಾಗೂ ವಿಭಾಗಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಅವರು ಗುಲ್ಬರ್ಗಾ ವಿಶ್ವವಿದ್ಯಾನಿಲಯದಿಂದ ಎಂಎಸ್ಸಿ ಹಾಗೂ ಎಂ.ಫಿಲ್ ಪದವಿ ಪಡೆದು, ಮಂಗಳೂರು ವಿಶ್ವವಿದ್ಯಾನಿಲಯದಿಂದ ಪಿಎಚ್ಡಿ ಪದವಿ ಗಳಿಸಿದ್ದಾರೆ.
ಅವರು ಅಮೆರಿಕದ Georgia Institute of Technology ಹಾಗೂ ತೈವಾನ್ನ National Dong Hwa Universityಯಲ್ಲಿ ಸಂಶೋಧಕರಾಗಿ ಕಾರ್ಯನಿರ್ವಹಿಸಿ ಅಂತಾರಾಷ್ಟ್ರೀಯ ಮಟ್ಟದ ಸಂಶೋಧನಾ ಅನುಭವ ಪಡೆದಿದ್ದಾರೆ.
ಪ್ರೊ. ಜ್ಞಾನ ಪ್ರಕಾಶ್ ಅವರು ಸಂಶೋಧನಾ ಕ್ಷೇತ್ರದಲ್ಲಿ ವಿಶಿಷ್ಟ ಕೊಡುಗೆ ನೀಡಿದ್ದು, 155ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಮೇಳನಗಳಲ್ಲಿ 175ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಮಂಡಿಸಿದ್ದು, 11 ಪಿಎಚ್ಡಿ ಸಂಶೋಧಕರಿಗೆ ಮಾರ್ಗದರ್ಶನ ನೀಡಿದ್ದಾರೆ. ಅವರ ಸಂಶೋಧನಾ ಕ್ಷೇತ್ರಗಳು ಅರೆವಾಹಕ ಸಾಧನಗಳು, ವಿಕಿರಣ ಭೌತಶಾಸ್ತ್ರ ಮತ್ತು ನ್ಯಾನೋಮಟೀರಿಯಲ್್ಸಗಳನ್ನು ಒಳಗೊಂಡಿವೆ.
ಅವರು ನ್ಯಾಕ್ ಪೀರ್ ಟೀಮ್ ಸದಸ್ಯರಾಗಿ, ವಿವಿಧ ವಿಶ್ವವಿದ್ಯಾನಿಲಯಗಳ ಮೌಲ್ಯಮಾಪನ ತಜ್ಞರಾಗಿ ಹಾಗೂ ಹಲವು ರಾಷ್ಟ್ರೀಯ ಸಂಶೋಧನಾ ಯೋಜನೆಗಳ ಮುಖ್ಯ ಸಂಶೋಧಕರಾಗಿ ಸೇವೆ ಸಲ್ಲಿಸಿದ್ದಾರೆ. ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರಕ್ಕೆ ನೀಡಿದ ಮಹತ್ವದ ಕೊಡುಗೆಗಾಗಿ ಕರ್ನಾಟಕ ಸರ್ಕಾರವು ಅವರಿಗೆ ಸರ್ ಸಿ.ವಿ. ರಾಮನ್ ಯುವ ವಿಜ್ಞಾನಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದೆ. ಅವರ ಈ ಮಹತ್ವದ ನೇಮಕಾತಿಗೆ ಶಿಕ್ಷಣತಜ್ಞರು, ಸಂಶೋಧಕರು, ವಿದ್ಯಾರ್ಥಿಗಳು ಹಾಗೂ ಶೈಕ್ಷಣಿಕ ವಲಯದ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.
