ಕರಾಚಿ,ಜೂ.28 -ಪಾಕಿಸ್ತಾನದ ಕರಾಚಿಯಲ್ಲಿರುವ ಸಿಂಧ್ ರೇಂಜರ್ಸ್ ಕೇಂದ್ರದ ಮೇಲೆ ಉಗ್ರರು ನಡೆಸಿದ ದಾಳಿಯನ್ನು ಭದ್ರತಾ ಪಡೆಗಳು ವಿಫಲಗೊಳಿಸಿದ್ದು, ಈ ಸಂದರ್ಭದಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಆರು ಉಗ್ರರನ್ನು ಹತರಾಗಿದ್ದು, ನಾಲ್ವರು ಅರೆಸೇನಾ ಪಡೆ ಸಿಬ್ಬಂದಿ ಹುತಾತರಾಗಿದ್ದಾರೆ.
ಸ್ಥಳೀಯ ಕಾಲಮಾನ ರಾತ್ರಿ ಸುಮಾರು 8.30 ರಲ್ಲಿ ನಿಷೇಧಿತ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ)ಸಂಘಟನೆಯ ಅಂಗಸಂಸ್ಥೆಯಾದ ಜಮಾತ್-ಉಲ್-ಅಹ್ರಾರ್ ಸಂಘಟನೆಗೆ ಸೇರಿದ ಉಗ್ರರು ಕರಾಚಿಯ ಜನನಿಬಿಡ ಗುಲಿಸ್ತಾನ್-ಎ-ಜೌರ್ಹ ಪ್ರದೇಶದಲ್ಲಿರುವ ಭಿತ್ತೈ ವಿಂಗ್‌ಪ್ರಧಾನ ಕಚೇರಿಯ ಮೇಲೆ ದಾಳಿ ನಡೆಸಿದರು ಎಂದು ಭದ್ರತಾ ಮೂಲಗಳು ತಿಳಿಸಿವೆ.
ಸುಮಾರು 90 ನಿಮಿಷಗಳ ಕಾಲ ನಡೆದ ಗುಂಡಿನ ಚಕಮಕಿಯಲ್ಲಿ ವಿಶೇಷ ಭದ್ರತಾ ಘಟಕ ಮತ್ತು ಭಯೋತ್ಪಾದನೆ ನಿಗ್ರಹ ಪಡೆ ಕಮಾಂಡೋಗಳು ರೇಂಜರ್ಸ್ ಸಿಬ್ಬಂದಿಯೊಂದಿಗೆ ಸೇರಿ ಕಾರ್ಯಾಚರಣೆ ನಡೆಸಿ ಆರು ಉಗ್ರರನ್ನು ಹೊಡೆದುರುಳಿಸಿದರು. ಗಾಯಗೊಂಡಿದ್ದ ಮತ್ತೊಬ್ಬ ಉಗ್ರನನ್ನು ಬಂಧಿಸಲಾಗಿದೆ.
ವಾಹನದಿಂದ ಗೇಟ್ ಒಡೆದು ನುಗ್ಗಿದ ಉಗ್ರರು:
ಪ್ರಾಥಮಿಕ ತನಿಖೆಯ ಪ್ರಕಾರ, ಉಗ್ರರು ವಾಹನವನ್ನು ಮುಖ್ಯ ದ್ವಾರಕ್ಕೆ ಡಿಕ್ಕಿ ಹೊಡೆಸಿ ಒಳನುಗ್ಗಿ, ಬಳಿಕ ಹ್ಯಾಂಡ್ ಗ್ರೆನೇಡ್‌ಗಳನ್ನು ಎಸೆದ ಪರಿಣಾಮ ಹಲವು ಸ್ಫೋಟಗಳು ಸಂಭವಿಸಿವೆ.
ದಾಳಿಯ ನಂತರ ಭದ್ರತಾ ಪಡೆಗಳು ಕೇಂದ್ರ ಹಾಗೂ ಸುತ್ತಮುತ್ತಲಿನ ರಸ್ತೆಗಳನ್ನು ಸಂಪೂರ್ಣವಾಗಿ ಬಂದ್ ಮಾಡಿದ್ದವು. ಕಾರ್ಯಾಚರಣೆ ನಡೆಯುವ ವೇಳೆ ನಿವಾಸಿಗಳಿಗೆ ಮನೆಗಳಿಂದ ಹೊರಬರದಂತೆ ಸೂಚಿಸಲಾಗಿದ್ದು, ಕೆಲ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯೂ ಸ್ಥಗಿತಗೊಂಡಿತ್ತು.
ಈ ದಾಳಿಯ ಹೊಣೆಯನ್ನು ಜಮಾತ್-ಉಲ್-ಅರ್ಹ್ರಾ ಹೊತ್ತುಕೊಂಡಿದೆ. ಈ ಸಂಘಟನೆಯು ಟಿಟಿಪಿಯ ಒಂದು ಉಗ್ರ ಘಟಕವಾಗಿದ್ದು, ಅಫ್ಘಾನಿಸ್ತಾನ ಗಡಿಗೆ ಹೊಂದಿಕೊಂಡಿರುವ ಖೈಬರ್ ಪಖ್ತುನ್ಖಾ ಪ್ರಾಂತ್ಯದಲ್ಲಿ ನಾಗರಿಕರು, ಭದ್ರತಾ ಸಿಬ್ಬಂದಿ ಹಾಗೂ ಸರ್ಕಾರಿ ಅಧಿಕಾರಿಗಳ ಮೇಲೆ ದಾಳಿಗಳನ್ನು ನಡೆಸುತ್ತಿರುವುದು ತಿಳಿದುಬಂದಿದೆ.
ಕಳೆದ ಅಕ್ಟೋಬರ್ 2024ರಲ್ಲಿ ಕರಾಚಿ ವಿಮಾನ ನಿಲ್ದಾಣದ ಬಳಿ ನಡೆದ ಆತಾಹುತಿ ಬಾಂಬ್ ದಾಳಿಯಲ್ಲಿ ಇಬ್ಬರು ಚೀನಾ ಎಂಜಿನಿಯರ್‌ಗಳು ಮೃತಪಟ್ಟ ಬಳಿಕ, ಕರಾಚಿಯಲ್ಲಿ ನಡೆದ ಮೊದಲ ಪ್ರಮುಖ ಉಗ್ರ ದಾಳಿ ಇದಾಗಿದೆ.ಸಿಂಧ್ ಮುಖ್ಯಮಂತ್ರಿ ಮುರಾದ್ ಅಲಿ ಶಾ ಘಟನೆಯ ಕುರಿತು ಸಮಗ್ರ ವರದಿ ಸಲ್ಲಿಸುವಂತೆ ಪ್ರಾಂತೀಯ ಪೊಲೀಸ್ ಮಹಾನಿರ್ದೇಶಕರಿಗೆ ಹಾಗೂ ಕರಾಚಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಿದ್ದಾರೆ.
ಅಫ್ಘಾನಿಸ್ತಾನದೊಂದಿಗೆ ಉದ್ವಿಗ್ನತೆ:ಈ ದಾಳಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆಯೇ ನಡೆದಿದೆ. ಕಳೆದ ವರ್ಷಾಂತ್ಯದಿಂದ ಪಾಕಿಸ್ತಾನ, ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರವು ಟಿಟಿಪಿಗೆ ಸುರಕ್ಷಿತ ಆಶ್ರಯ ಒದಗಿಸುತ್ತಿದ್ದು, ಅಲ್ಲಿಂದ ಗಡಿ ದಾಟಿ ದಾಳಿ ನಡೆಸಲು ಅವಕಾಶ ಕಲ್ಪಿಸುತ್ತಿದೆ ಎಂದು ಆರೋಪಿಸುತ್ತಿದೆ.ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಸೇನೆಯು ಅಫ್ಘಾನಿಸ್ತಾನದೊಳಗಿನ ಟಿಟಿಪಿಯ ಅಡಗುತಾಣಗಳು ಮತ್ತು ತರಬೇತಿ ಕೇಂದ್ರಗಳ ಮೇಲೆ ಹಲವು ಬಾರಿ ದಾಳಿ ನಡೆಸಿದೆ ಎಂದು ಹೇಳಿಕೊಂಡಿದೆ.
