Homeರಾಜ್ಯರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಶ್ವನಾಥ್‌ ಸುವರ್ಣರಿಗೆ ಅಭಿನಂದನೆ

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಶ್ವನಾಥ್‌ ಸುವರ್ಣರಿಗೆ ಅಭಿನಂದನೆ

ಬೆಂಗಳೂರು,ನ.18- ಸುವರ್ಣ ರಾಜ್ಯೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಹಿರಿಯ ವನ್ಯಜೀವಿ ಹಾಗೂ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅವರಿಗೆ ನಗರದ ಪ್ರೆಸ್‌‍ ಕ್ಲಬ್‌ನಲ್ಲಿ ಸಮಾನ ಮನಸ್ಕ ಪತ್ರಕರ್ತ ಮಿತ್ರರು ಅಭಿನಂದಿಸಿದರು.

ಕರುನಾಡ ಕೋಟೆಗಳ ಸುವರ್ಣ ನೋಟ, ಗೋಲ್ಡನ್‌ ವ್ಯೂ ಆಫ್‌ ಕರ್ನಾಟಕ ಆಂಗ್ಲಭಾಷೆ ಹಾಗೂ ಕನ್ನಡ ನಾಡಿನ ಬಣ್ಣದ ಬಾನಾಡಿಗಳು ಎಂಬ ಅಮೂಲ್ಯ ಕೃತಿಗಳ ಮೂಲಕ ನಾಡಿನಲ್ಲಿ ಮನೆಮಾತಾಗಿರುವ ವಿಶ್ವನಾಥ್‌ ಸುವರ್ಣ ಅವರು ಕರ್ನಾಟಕ ಕಂಡಿರುವ ಅತ್ಯಂತ ಅಪರೂಪದ ಫೋಟೋ ಜರ್ನಲಿಸ್ಟ್‌.

ಕರಾವಳಿಯ ಈ ಪ್ರತಿಭೆ ಒಂದು ಕಾಲದಲ್ಲಿ ವರನಟ ಡಾ.ರಾಜ್‌ಕುಮಾರ್‌, ಖ್ಯಾತ ನಟ ಶಂಕರ್‌ನಾಗ್‌, ರೆಬಲ್‌ ಸ್ಟಾರ್‌ ಅಂಬರೀಷ್‌, ವಿಷ್ಣುವರ್ಧನ್‌ ಸೇರಿದಂತೆ ಮೇರು ನಟರೊಂದಿಗೆ ಬಹಳ ಹತ್ತಿರದ ಒಡನಾಟ ಹೊಂದಿದ್ದ ಛಾಯಾಗ್ರಾಹಕ. ನೇರ, ನಿಷ್ಠುರ ನುಡಿ ಹಾಗೂ ಪತ್ರಿಕೋದ್ಯಮದಲ್ಲಿ ತಾವು ಹೊಂದಿದ್ದ ಪ್ರಾಮಾಣಿಕತೆಯೇ ಅವರ ಪಾಲಿಗೆ ಸಾಕಷ್ಟು ಬಾರಿ ಮುಳುವಾಗಿಯೂ ಪರಿಣಮಿಸಿತ್ತು ಎಂದು ಅವರ ಒಡನಾಡಿಗಳು ಸರಿಸಿಕೊಂಡಿದ್ದಾರೆ.

ಸಿದ್ದರಾಮಯ್ಯ, ಎಸ್‌‍.ಎಂ.ಕೃಷ್ಣ ಅವರಿಂದ ಹಿಡಿದು ಇತ್ತೀಚಿನವರೆಲ್ಲ ಘಟಾನುಘಟಿ ರಾಜಕಾರಣಗಳನ್ನು ಕೂಡ ಬಹಳ ಹತ್ತಿರದಿಂದ ನೋಡಿದವರು. ಛಾಯಾಚಿತ್ರಕಾರ ಹಾಗೂ ಫೋಟೋ ಜರ್ನಲಿಸ್ಟ್‌ ಆಗಿ ಸುವರ್ಣ ಅವರು ಇಡೀ ಕರ್ನಾಟಕದಲ್ಲಿ ಸುತ್ತಾಡಿ ಅಪರೂಪದ ಕೋಟೆಗಳನ್ನು ತಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

ಒಬ್ಬ ಛಾಯಾಗ್ರಾಹಕನಾಗಿ ಸುವರ್ಣ ಅವರು ಕರ್ನಾಟಕದ ಬಹಳಷ್ಟು ಆಗು-ಹೋಗುಗಳಿಗೆ ಸಾಕ್ಷಿಪ್ರಜ್ಞೆ ಅಂದರೂ ತಪ್ಪಾಗಲಾರದು. ಹೀಗೆ, ಸದ್ದಿಲ್ಲದೆ ದಶಕಗಳ ಕಾಲ ಕ್ಯಾಮೆರಾ ಕೈಯಲ್ಲಿ ಹಿಡಿದುಕೊಂಡು ನಾಡಿನ ಮೂಲೆ-ಮೂಲೆ ಓಡಾಡಿರುವ ವಿಶ್ವನಾಥ ಸುವರ್ಣ ಅವರಿಗೆ ಇದೀಗ 2026ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ಅವರ ಅಭಿಮಾನಿಗಳು, ಹಿರಿಯ ಮತ್ತು ಕಿರಿಯ ಸ್ನೇಹಿತರಿಗೆ ಸಂತಸ ತಂದಿದೆ. ಇಂದು ಸುವರ್ಣ ಅವರ ಸರಳ, ನೇರ ನಡೆ, ನುಡಿ, ಪ್ರಾಮಾಣಿಕತೆಯನ್ನು ಕೊಂಡಾಡಿದರು.

ಕರ್ನಾಟಕ ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷರಾದ ಎಂ.ಎ.ಪೊನ್ನಪ್ಪ, ಮಾಧ್ಯಮ ಅಕಾಡೆಮಿ ಸದಸ್ಯರಾದ ಕೆ. ವೆಂಕಟೇಶ್‌, ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷರಾದ ರಮೇಶ್‌ ಪಾಳ್ಯ, ಬೆಂಗಳೂರು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಯಕುಮಾರ್‌ ಗೌಡ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿಯ ವಿಶೇಷ ಆಹ್ವಾನಿತರಾದ ವೈ.ಎಸ್‌‍.ಎಲ್‌‍. ಸ್ವಾಮಿ, ಬಿಯುಡಬ್ಲ್ಯುಜೆ ಕಾರ್ಯಕಾರಿ ಸಮಿತಿ ಸದಸ್ಯರಾದ ಗಂಡಸಿ ಸದಾನಂದ ಸ್ವಾಮಿ, ಹಿರಿಯ ಪತ್ರಕರ್ತರ ವೇದಿಕೆಯ ಉಪಾಧ್ಯಕ್ಷರಾದ ಸೋಮಸುಂದರ ರೆಡ್ಡಿ, ಹಿರಿಯ ಪತ್ರಕರ್ತರಾದ ಗಿರೀಶ್‌ ಕೋಟೆ, ಮಂಜುನಾಥ್‌ ಅದ್ದೆ, ನಂಜುಂಡಪ್ಪ.ವಿ, ಧ್ಯಾನ್‌ ಪೂಣಚ್ಚ, ಅಭಿಮನ್ಯು ರಮೇಶ್‌ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

Latest News