ಬೆಂಗಳೂರು, ನ.18- ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿನ ಸುಮಾರು 24 ಲಕ್ಷ ಆಸ್ತಿ ಮಾಲೀಕರಿಗೆ ಉಚಿತವಾಗಿ ವಾಟ್ಸ್ಯಾಪ್ ಮೂಲಕ ಇ-ಖಾತಾ ಪ್ರಮಾಣಪತ್ರ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಆಸ್ತಿ ಮಾಲೀಕರು ತಮ್ಮ ಇ-ಖಾತಾವನ್ನು ಪಿಡಿಎಫ್ ರೂಪದಲ್ಲಿ ಮನೆಯಲ್ಲೇ ಕುಳಿತು ಪಡೆದುಕೊಳ್ಳಬಹುದಾಗಿದ್ದು, ಸರ್ಕಾರಿ ಕಚೇರಿಗಳಿಗೆ ಅಲೆಯುವ ಹಾಗೂ ಮಧ್ಯವರ್ತಿಗಳನ್ನು ಅವಲಂಬಿಸುವ ಕಿರಿಕಿರಿ ತಪ್ಪಲಿದೆ.
ರಾಜ್ಯ ಸರ್ಕಾರದ ಆರನೇ ಗ್ಯಾರಂಟಿಯಾದ ಭೂ-ಗ್ಯಾರಂಟಿ: ನನ್ನ ಖಾತಾ, ನನ್ನ ಹಕ್ಕು ಅಭಿಯಾನದಡಿ ಈ ಉಪಕ್ರಮ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಶಯ ಮತ್ತು ನಿರ್ದೇಶನ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರ ಮಾರ್ಗದರ್ಶನದಲ್ಲಿ ಈ ಯೋಜನೆ ಅನುಷ್ಠಾನಗೊಳ್ಳುತ್ತಿದೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದ್ದಾರೆ.
ಇ-ಖಾತಾ ನೇರವಾಗಿ ವಾಟ್ಸಾಪ್‌ಗೆ:ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿನ ಸುಮಾರು 24 ಲಕ್ಷ ಆಸ್ತಿ ಮಾಲೀಕರಿಗೆ ಇ-ಖಾತಾ ಪ್ರಮಾಣಪತ್ರಗಳನ್ನು ವಾಟ್ಸಾಪ್ ಮೂಲಕ ನೇರವಾಗಿ ತಲುಪಿಸಲಾಗುತ್ತಿದೆ. ಪ್ರಮಾಣಪತ್ರವು ಪಿಡಿಎಫ್ ರೂಪದಲ್ಲಿರಲಿದ್ದು, ಪ್ರತಿಯೊಂದು ಆಸ್ತಿಗೂ ವಿಶಿಷ್ಟ ಇಪಿಐಡಿ ಸಂಖ್ಯೆಯನ್ನು ಹೊಂದಿರುತ್ತದೆ. ಇದನ್ನು ಡೌನ್‌ಲೋಡ್ ಮಾಡಿಕೊಂಡು ಡಿಜಿಟಲ್ ರೂಪದಲ್ಲಿ ಸುರಕ್ಷಿತವಾಗಿ ಉಳಿಸಿಕೊಳ್ಳಬಹುದು.
ಈ ವ್ಯವಸ್ಥೆಯಿಂದ ಇ-ಖಾತಾ ಪಡೆಯಲು ಸರ್ಕಾರಿ ಕಚೇರಿಗಳಿಗೆ ಖುದ್ದಾಗಿ ಭೇಟಿ ನೀಡುವ ಅಗತ್ಯ ಕಡಿಮೆಯಾಗಲಿದೆ. ಅಲ್ಲದೆ, ಪ್ರಮಾಣಪತ್ರ ಪಡೆಯಲು ಮಧ್ಯವರ್ತಿಗಳ ನೆರವು ಪಡೆಯಬೇಕಾದ ಅನಿವಾರ್ಯತೆಯೂ ಇರುವುದಿಲ್ಲ.
ತಿದ್ದುಪಡಿ, ಮ್ಯುಟೇಷನ್‌ಗೂ ಆನ್‌ಲೈನ್ ಅವಕಾಶ:
ಇ-ಖಾತಾ ವಿತರಣೆಯ ಜೊತೆಗೆ, ಆಸ್ತಿ ದಾಖಲೆಗಳಲ್ಲಿ ತಿದ್ದುಪಡಿ ಮಾಡಿಸುವುದು ಹಾಗೂ ಆಸ್ತಿ ಮಾಲೀಕತ್ವ ಬದಲಾವಣೆ ಪ್ರಕ್ರಿಯೆ (ಮ್ಯುಟೇಷನ್)ಗಾಗಿ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ವಾಟ್ಸಾಪ್ ಸಂದೇಶದೊಂದಿಗೆ ಜಿಬಿಎಯ ಅಧಿಕೃತ ಇ-ಆಸ್ತಿ ಪೋರ್ಟಲ್‌ನ ಲಿಂಕ್ ಕೂಡ ನೀಡಲಾಗುತ್ತದೆ. ಆಸ್ತಿ ಮಾಲೀಕರು ತಮ್ಮ ಇಪಿಐಡಿ ಸಂಖ್ಯೆಯನ್ನು ಬಳಸಿ ಪೋರ್ಟಲ್‌ನಲ್ಲಿ ಅಗತ್ಯ ಸೇವೆಗಳಿಗೆ ಅರ್ಜಿ ಸಲ್ಲಿಸಬಹುದು.
ಅಧಿಕೃತ ಪೋರ್ಟಲ್‌ಸಂಪೂರ್ಣ ಉಚಿತ ಸೇವೆ;
ಸರ್ಕಾರಿ ಸೇವೆಗಳನ್ನು ನಾಗರಿಕರ ಮನೆಬಾಗಿಲಿಗೆ ತಲುಪಿಸುವುದು, ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚಿಸುವುದು ಹಾಗೂ ಸಾರ್ವಜನಿಕರ ಸಮಯ ಮತ್ತು ಶ್ರಮ ಉಳಿಸುವುದು ಈ ಉಪಕ್ರಮದ ಉದ್ದೇಶವಾಗಿದೆ. ಇ-ಖಾತಾ ವಿತರಣೆಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ. ಹೀಗಾಗಿ ಸಾರ್ವಜನಿಕರು ಮಧ್ಯವರ್ತಿ ಗಳಿಗೆ ಹಣ ಪಾವತಿಸುವ ಅಗತ್ಯವಿಲ್ಲ.ಜಿಬಿಎ ವ್ಯಾಪ್ತಿಯ ಆಸ್ತಿ ಮಾಲೀಕರು ತಮ್ಮ ವಾಟ್ಸ್ಯಾಪ್ ಸಂದೇಶಗಳನ್ನು ಪರಿಶೀಲಿಸಿ, ಇ-ಖಾತಾ ಪ್ರಮಾಣಪತ್ರವನ್ನು ಪಡೆದುಕೊಳ್ಳುವಂತೆ ಮಹೇಶ್ವರ್ ರಾವ್ ಮನವಿ ಮಾಡಿದ್ದಾರೆ.
