ಬೆಂಗಳೂರು, ನ.18- ನೂರಾರು ಅಮಾಯಕರ ಆಸ್ತಿ ತೆರಿಗೆ ಹಣ ತಿಂದು ತೇಗಿದ್ದ ಇಬ್ಬರು ಜಿಬಿಎ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಲಾಗಿದೆ.ಹಿಂದಿನ ಬೃಹತ್ ಬೆಂಗ ಳೂರು ಮಹಾನಗರ ಪಾಲಿಕೆಯ ದಕ್ಷಿಣ ವಲಯದ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಂದಾಯ ಪರಿವೀಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಹೆಚ್. ರಾಮಯ್ಯ ಮತ್ತು ಕಂದಾಯ ವಸೂಲಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಿ. ಶ್ರೀನಿವಾಸ್ ಸೇವೆಯಿಂದ ವಜಾಗೊಂಡ ಅಧಿಕಾರಿಗಳು.
ಈ ಇಬ್ಬರು ಹಲವಾರು ವರ್ಷಗಳಿಂದ ಆಸ್ತಿ ತೆರಿಗೆ ಪಾವತಿಸದೇ ಇದ್ದ ಅಮಾಯಕ ಜನರಿಂದ ಬಡ್ಡಿ ಹಣವನ್ನು ಮನ್ನಾ ಮಾಡುವುದಾಗಿ ಹೇಳಿ, ನಗದು ರೂಪದಲ್ಲಿ ಲಕ್ಷಾಂತರ ರೂಪಾಯಿಗಳನ್ನು ಪಡೆದು ನಕಲಿ ಆಸ್ತಿ ತೆರಿಗೆ ರಸೀದಿಗಳನ್ನು ನೀಡಿ ಲಕ್ಷಾಂತರ ರೂ.ಗಳನ್ನು ವಂಚಿಸಿದ್ದರು.
ಖತರ್ನಾಕ್ ಅಧಿಕಾರಿಗಳಿಂದ ಈ ರೀತಿಯ 17 ಕ್ಕೂ ಹೆಚ್ಚು ಪ್ರಕರಣಗಳು ನಡೆದಿದ್ದು, ಈ ಸಂಬಂಧ ಜಯನಗರ ಪೋಲೀಸ್ ಠಾಣೆ ಮತ್ತು ಬನಶಂಕರಿ ಪೋಲೀಸ್ ಠಾಣೆಗೆ ವಂಚನೆಗೊಳಗಾದ ಅಮಾಯಕರಿಂದ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ದೂರುಗಳನ್ನು ಕೊಡಿಸಿದ್ದರು.
ಹಾಗೆಯೇ, ಪಾಲಿಕೆಯ ಆಯುಕ್ತರಿಗೆ ದಾಖಲೆಗಳ ಸಹಿತ ದೂರನ್ನು ನೀಡಿ, ಅವರಿಬ್ಬರ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದರು. ನಕಲಿ ಆಸ್ತಿ ತೆರಿಗೆ ರಸೀದಿ ನೀಡಿ ಕೋಟ್ಯಂತರ ರೂಪಾಯಿ ಹಣವನ್ನು ಅಮಾಯಕ ನಾಗರಿಕರಿಗೆ ವಂಚಿಸಿದ್ದ ಇವರಿಬ್ಬರ ವಂಚನೆ ಪ್ರಕರಣವು ದಾಖಲೆಗಳ ಸಹಿತ ನ್ಯಾಯಾಲಯದಲ್ಲಿ ರುಜುವಾತಾದ ಹಿನ್ನೆಲೆಯಲ್ಲಿ, ಅವರನ್ನು ಪಾಲಿಕೆಯ ಸೇವೆಯಿಂದ ವಜಾಗೊಳಿಸಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಜಂಟಿ ಆಯುಕ್ತರು ಆದೇಶಿಸಿದ್ದಾರೆ.
