Homeರಾಜ್ಯಸರ್ಕಾರಿ ನೌಕರರ ಚಲನವಲನಗಳ ಡಿಜಿಟಲ್‌ ದಾಖಲಾತಿ ಕಡ್ಡಾಯ

ಸರ್ಕಾರಿ ನೌಕರರ ಚಲನವಲನಗಳ ಡಿಜಿಟಲ್‌ ದಾಖಲಾತಿ ಕಡ್ಡಾಯ

ಬೆಂಗಳೂರು,ನ.18- ರಾಜ್ಯ ಸರ್ಕಾರಿ ನೌಕರರ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಹೆಚ್ಚಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಮಹತ್ವದ ಹೊಸ ನಿಯಮ ಜಾರಿಗೆ ಮುಂದಾಗಿದೆ.

ಡಿ.1ರಿಂದ ಸರ್ಕಾರಿ ನೌಕರರು ಕಚೇರಿಗೆ ಕರ್ತವ್ಯಕ್ಕೆ ಹಾಜರಾಗುವಾಗ ತಮ್ಮ ಬಳಿ ಇರುವ ಹಣದ ವಿವರವನ್ನು ಕಡ್ಡಾಯವಾಗಿ ಘೋಷಿಸಬೇಕು. ಅಲ್ಲದೆ, ಕಚೇರಿ ಸಮಯದಲ್ಲಿ ಹೊರಗೆ ತೆರಳುವಾಗ ಮತ್ತು ಮರಳಿ ಬರುವಾಗ ತಮ್ಮ ಚಲನವಲನಗಳನ್ನು ಡಿಜಿಟಲ್‌ ವ್ಯವಸ್ಥೆಯಲ್ಲಿ ದಾಖಲಿಸಬೇಕಾಗುತ್ತದೆ.

ಕರ್ನಾಟಕ ಅಡ್ವಾನ್ಸ್ಡ್ ಅಟೆಂಡೆನ್ಸ್ ಮ್ಯಾನೇಜ್‌ಮೆಂಟ್‌‍ ಸಿಸ್ಟಮ್‌ ಅಡಿಯಲ್ಲಿ ಡಿಜಿಟಲ್‌ ಚಲನವಲನ ರಿಜಿಸ್ಟರ್‌ ಮತ್ತು ನಗದು ಘೋಷಣೆ ರಿಜಿಸ್ಟರ್‌ಗಳನ್ನು ಕಡ್ಡಾಯಗೊಳಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿದೆ.

ಸೋಮವಾರ ಹೊರಡಿಸಿರುವ ಆದೇಶದಲ್ಲಿ ರಾಜ್ಯದ ಎಲ್ಲ ಇಲಾಖೆಗಳು, ನಿಗಮಗಳು ಮತ್ತು ಮಂಡಳಿಗಳು ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು ಹಾಗೂ ಇಲಾಖಾ ಮುಖ್ಯಸ್ಥರು ತಮ ಅಧೀನದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ಹೊಸ ನಿಯಮಗಳ ಕುರಿತು ಮಾಹಿತಿ ನೀಡಿ ಅನುಷ್ಠಾನಗೊಳಿಸುವ ಜವಾಬ್ದಾರಿ ವಹಿಸಿಕೊಳ್ಳುವಂತೆ ತಿಳಿಸಲಾಗಿದೆ.

ಹಿಂದಿನ ಸೂಚನೆಗಳಿದ್ದರೂ ಪಾಲನೆ ಇಲ್ಲ
ಸರ್ಕಾರಿ ನೌಕರರು ಕರ್ತವ್ಯಕ್ಕೆ ಹಾಜರಾಗುವಾಗ ತಮ ಬಳಿ ಇರುವ ನಗದಿನ ವಿವರವನ್ನು ದಾಖಲಿಸಬೇಕು ಎಂಬ ನಿಯಮ ಹೊಸದೇನಲ್ಲ. 2022ರ ಫೆಬ್ರವರಿಯಲ್ಲೇ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುವ ಸಂದರ್ಭದಲ್ಲಿ ನಗದು ಘೋಷಣೆ ಮಾಡುವಂತೆ ಸರ್ಕಾರ ಸುತ್ತೋಲೆ ಹೊರಡಿಸಿತ್ತು.

ಅದೇ ವರ್ಷದ ಜುಲೈ 25ರಂದು ಮತ್ತೊಂದು ಸುತ್ತೋಲೆ ಹೊರಡಿಸಿ, ಕಚೇರಿ ಸಮಯದಲ್ಲಿ ಅಧಿಕೃತ ಕೆಲಸದ ನಿಮಿತ್ತ ಅಥವಾ ವೈಯಕ್ತಿಕ ಕಾರಣಕ್ಕಾಗಿ ಹೊರಗೆ ತೆರಳುವ ಸಿಬ್ಬಂದಿ ತಮ್ಮ ಚಲನವಲನಗಳನ್ನು ದಾಖಲಿಸಬೇಕು. ಅಲ್ಲದೆ, ಕಚೇರಿಯಿಂದ ಹೊರಡುವ ಮೊದಲು ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯುವುದು ಕಡ್ಡಾಯ ಎಂದು ಸೂಚಿಸಲಾಗಿತ್ತು. ನಿಯಮ ಉಲ್ಲಂಘಿಸುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಲಾಗಿತ್ತು.

ಆದರೆ, ಈ ಹಿಂದಿನ ಸೂಚನೆಗಳನ್ನು ಬಹುತೇಕ ಕಡೆಗಳಲ್ಲಿ ಸಮರ್ಪಕವಾಗಿ ಪಾಲಿಸದಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಹೀಗಾಗಿ ಈಗ ಈ ಎರಡೂ ವ್ಯವಸ್ಥೆಗಳನ್ನು ಕೆಎಎಎಂಎಸ್‌‍ಡಿಜಿಟಲ್‌ ವೇದಿಕೆಯಲ್ಲೇ ಅಳವಡಿಸಿ ಕಡ್ಡಾಯಗೊಳಿಸಲಾಗಿದೆ.

ಏನಿದು ಕೆಎಎಎಂಎಸ್‌‍ ವ್ಯವಸ್ಥೆ?
ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿಯ ಹಾಜರಾತಿಯನ್ನು ಪಾರದರ್ಶಕವಾಗಿ ನಿರ್ವಹಿಸುವ ಉದ್ದೇಶದಿಂದ ಸೆಲ್ಫಿ ಆಧಾರಿತ ಹಾಜರಾತಿ ವ್ಯವಸ್ಥೆಯಾದ ಕೆಎಎಎಂಎಸ್‌‍ ಅನ್ನು 2022ರ ಏಪ್ರಿಲ್‌ 3ರಂದು ಪರಿಚಯಿಸಲಾಗಿತ್ತು. ಈ ವ್ಯವಸ್ಥೆಯ ಮೂಲಕ ನೌಕರರ ಹಾಜರಾತಿಯನ್ನು ಡಿಜಿಟಲ್‌ ರೂಪದಲ್ಲಿ ದಾಖಲಿಸಲಾಗುತ್ತಿದೆ.ಇದೀಗ ನಿರಂತರ ನಿಯಮ ಉಲ್ಲಂಘನೆಗಳನ್ನು ತಡೆಯಲು ನಗದು ಘೋಷಣೆ ಮತ್ತು ಚಲನವಲನ ದಾಖಲಾತಿ ವ್ಯವಸ್ಥೆಗಳನ್ನೂ ಇದೇ ವೇದಿಕೆಗೆ ಸೇರಿಸಲಾಗಿದೆ.

RELATED ARTICLES

Latest News