ಬೆಂಗಳೂರು,ನ.18- ಕಾರು ಮತ್ತು ದ್ವಿಚಕ್ರ ವಾಹನ ಮಾಲೀಕರಿಗೆ ಡಿ.15ರಿಂದ ಮೋಟಾರು ವಿಮಾ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ಜಾರಿಗೆ ಬರಲಿದೆ. ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಖಾಸಗಿ ಕಾರುಗಳು ಮತ್ತು ದ್ವಿಚಕ್ರ ವಾಹನಗಳ ವಿಮಾ ಪಾಲಿಸಿಗಳಿಗೆ ನಾಲ್ಕು ವಿಭಾಗಗಳ ಹೊಸ ರಚನೆಯನ್ನು ಜಾರಿಗೆ ತರಲು ನಿರ್ದೇಶನ ನೀಡಿದೆ.
ಇದರಡಿ ವಿಮಾ ಪಾಲಿಸಿಯಲ್ಲಿ ಯಾವ ಕವರ್ಗೆ ಎಷ್ಟು ಪ್ರೀಮಿಯಂ ಪಾವತಿಸಲಾಗುತ್ತಿದೆ ಎಂಬುದನ್ನು ಪ್ರತ್ಯೇಕವಾಗಿ ಸ್ಪಷ್ಟಪಡಿಸಬೇಕಾಗುತ್ತದೆ. ಸುಪ್ರೀಂ ಕೋರ್ಟ್ನ ನಿರ್ದೇಶನಗಳನ್ನು ಆಧರಿಸಿ IRDAI ನವೆಂಬರ್ 2ರಂದು ಈ ಕುರಿತು ಸುತ್ತೋಲೆ ಹೊರಡಿಸಿದ್ದು, ಡಿಸೆಂಬರ್ 15ರಿಂದ ಹೊಸದಾಗಿ ನೀಡಲಾಗುವ ಎಲ್ಲಾ ಖಾಸಗಿ ಕಾರು ಮತ್ತು ದ್ವಿಚಕ್ರ ವಾಹನಗಳ ಪಾಲಿಸಿಗಳು ಹೊಸ ವ್ಯವಸ್ಥೆಯನ್ನು ಅನುಸರಿಸಬೇಕಾಗುತ್ತದೆ.
ನಾಲ್ಕು ವಿಭಾಗಗಳಲ್ಲಿ ವಿಮಾ ರಕ್ಷಣೆ
1.ಮೂರನೇ ವ್ಯಕ್ತಿಯ ಹೊಣೆಗಾರಿಕೆ ಕಡ್ಡಾಯ
ಅಪಘಾತದಲ್ಲಿ ಮೂರನೇ ವ್ಯಕ್ತಿಗೆ ಗಾಯ, ಸಾವು ಅಥವಾ ಆಸ್ತಿಗೆ ಹಾನಿಯಾದ ಸಂದರ್ಭದಲ್ಲಿ ವಾಹನ ಮಾಲೀಕರಿಗೆ ಉಂಟಾಗುವ ಕಾನೂನುಬದ್ಧ ಹೊಣೆಗಾರಿಕೆಯನ್ನು ಈ ವಿಮೆ ಒಳಗೊಂಡಿರುತ್ತದೆ. ಇದು ಕಡ್ಡಾಯ ಕವರ್ ಆಗಿರುತ್ತದೆ.
2.ಪ್ರಯಾಣಿಕರು ಮತ್ತು ಹಿಂಬದಿ ಸವಾರರ ಹೊಣೆಗಾರಿಕೆ ಐಚ್ಛಿಕ
ಕಾರು ಪ್ರಯಾಣಿಕರು ಅಥವಾ ದ್ವಿಚಕ್ರ ವಾಹನದ ಹಿಂಬದಿ ಸವಾರರಿಗೆ ಅಪಘಾತದಿಂದ ಹಾನಿಯಾದ ಸಂದರ್ಭದಲ್ಲಿ ಮಾಲೀಕರಿಗೆ ಉಂಟಾಗುವ ಕಾನೂನು ಹೊಣೆಗಾರಿಕೆಯನ್ನು ಈ ವಿಭಾಗ ಒಳಗೊಂಡಿರುತ್ತದೆ. ಅಗತ್ಯವಿದ್ದಲ್ಲಿ ವಿಮೆದಾರರ ಉದ್ಯೋಗಿಗಳಿಗೂ ಈ ರಕ್ಷಣೆ ವಿಸ್ತರಿಸಬಹುದು. ಈ ಕವರ್ ಐಚ್ಛಿಕವಾಗಿರುತ್ತದೆ.
3.ವೈಯಕ್ತಿಕ ಅಪಘಾತ ವಿಮೆ
ಮಾಲೀಕರು-ಚಾಲಕರಿಗೆ ವೈಯಕ್ತಿಕ ಅಪಘಾತ ವಿಮೆ ಕಡ್ಡಾಯವಾಗಿರುತ್ತದೆ. ಆದರೆ ಮಾಲೀಕರು-ಚಾಲಕರನ್ನು ಹೊರತುಪಡಿಸಿ ಇತರ ಪ್ರಯಾಣಿಕರು, ಹಿಂಬದಿ ಸವಾರರು ಅಥವಾ ಚಾಲಕರಿಗೆ ಹೆಚ್ಚುವರಿ ವೈಯಕ್ತಿಕ ಅಪಘಾತ ಕವರ್ ಪಡೆಯುವುದು ಐಚ್ಛಿಕವಾಗಿರುತ್ತದೆ.
4.ಸ್ವಂತ ವಾಹನದ ನಷ್ಟ ಅಥವಾ ಹಾನಿ ಐಚ್ಛಿಕ
ಅಪಘಾತ, ಇತರ ಕಾರಣಗಳಿಂದ ಕಾರು ಅಥವಾ ದ್ವಿಚಕ್ರ ವಾಹನಕ್ಕೆ ಉಂಟಾಗುವ ನಷ್ಟ ಅಥವಾ ಹಾನಿಯನ್ನು ಈ ವಿಭಾಗದಡಿ ವಿಮೆ ಮಾಡಬಹುದು. ಇದು ಐಚ್ಛಿಕ ಕವರ್ ಆಗಿರುತ್ತದೆ.
ಗ್ರಾಹಕರಿಗೆ ಏನು ಬದಲಾವಣೆ?
ಹೊಸ ವ್ಯವಸ್ಥೆಯ ಪ್ರಮುಖ ಉದ್ದೇಶ ವಿಮಾ ಪಾಲಿಸಿಯಲ್ಲಿ ಹೆಚ್ಚಿನ ಪಾರದರ್ಶಕತೆ ತರುವುದು. ಇನ್ನು ಮುಂದೆ ವಿಮಾ ಕಂಪನಿಗಳು ಪ್ರತಿಯೊಂದು ವಿಭಾಗದ ಕವರೇಜ್ ಹಾಗೂ ಅದಕ್ಕೆ ಸಂಬಂಧಿಸಿದ ಪ್ರೀಮಿಯಂ ಅನ್ನು ಪಾಲಿಸಿ ವೇಳಾಪಟ್ಟಿಯಲ್ಲಿ ಪ್ರತ್ಯೇಕವಾಗಿ ನಮೂದಿಸಬೇಕಾಗುತ್ತದೆ.
ಅಂದರೆ, ವಾಹನ ಮಾಲೀಕರು ಒಟ್ಟು ಪ್ರೀಮಿಯಂ ಎಷ್ಟು ಎಂಬುದಷ್ಟೇ ಅಲ್ಲದೆ, ಮೂರನೇ ವ್ಯಕ್ತಿಯ ಹೊಣೆಗಾರಿಕೆ, ಪ್ರಯಾಣಿಕರ ರಕ್ಷಣೆ, ವೈಯಕ್ತಿಕ ಅಪಘಾತ ಹಾಗೂ ಸ್ವಂತ ವಾಹನದ ಹಾನಿ ಕವರ್ಗಳಿಗೆ ಪ್ರತ್ಯೇಕವಾಗಿ ಎಷ್ಟು ಹಣ ಪಾವತಿಸುತ್ತಿದ್ದಾರೆ ಎಂಬುದನ್ನೂ ತಿಳಿದುಕೊಳ್ಳಲು ಸಾಧ್ಯವಾಗಲಿದೆ.
ಆನ್ಲೈನ್ ಅಥವಾ ಆಫ್ಲೈನ್ ಮೂಲಕ ವಿಮೆ ಖರೀದಿಸಿದರೂ ಗ್ರಾಹಕರಿಗೆ ನಾಲ್ಕು ವಿಭಾಗಗಳನ್ನು ವಿವರಿಸುವ ಆಯ್ಕೆ ಫಾರ್ಮ್ ನೀಡಬೇಕು. ಗ್ರಾಹಕರು ತಮ ಅಗತ್ಯಕ್ಕೆ ಅನುಗುಣವಾಗಿ ಬೇಕಾದ ಕವರ್ಗಳನ್ನು ಆಯ್ಕೆ ಮಾಡಬಹುದು. ಇದರ ಜೊತೆಗೆ ಗ್ರಾಹಕ ಮಾಹಿತಿ ಹಾಳೆ ಕೂಡ ನೀಡುವುದು ವಿಮಾದಾರರಿಗೆ ಕಡ್ಡಾಯವಾಗಲಿದೆ.
ಹಾಲಿ ಪಾಲಿಸಿದಾರರಿಗೆ ಅವಕಾಶ
ಈಗಾಗಲೇ ಮೂರನೇ ವ್ಯಕ್ತಿಯ ವಿಮಾ ಪಾಲಿಸಿ ಹೊಂದಿರುವ ವಾಹನ ಮಾಲೀಕರು ಪಾಲಿಸಿ ಅವಧಿಯಲ್ಲೇ ಹೆಚ್ಚುವರಿ ಪ್ರೀಮಿಯಂ ಪಾವತಿಸಿ ಎರಡನೇ ವಿಭಾಗದ ಕವರ್ ಸೇರಿಸಿಕೊಳ್ಳಬಹುದು. ಇದಕ್ಕಾಗಿ ಹಾಲಿ ಮೂರನೇ ವ್ಯಕ್ತಿಯ ವಿಮಾ ಪಾಲಿಸಿಯನ್ನು ರದ್ದುಗೊಳಿಸುವ ಅಗತ್ಯವಿಲ್ಲ.
ಆದರೆ ಹೆಚ್ಚುವರಿ ಕವರ್ ವಿಮಾದಾರರು ನೀಡುವ ಅನುಮೋದನೆಯಲ್ಲಿ ನಮೂದಿಸಿರುವ ದಿನಾಂಕ ಮತ್ತು ಸಮಯದಿಂದ ಮಾತ್ರ ಜಾರಿಗೆ ಬರಲಿದೆ ಎಂದು IRDAI ಸ್ಪಷ್ಟಪಡಿಸಿದೆ. ಈ ಹೆಚ್ಚುವರಿ ಕವರ್ ಅನ್ನು ಪ್ರಸ್ತುತ ಮೂರನೇ ವ್ಯಕ್ತಿಯ ವಿಮಾ ಪಾಲಿಸಿ ನೀಡಿರುವ ಅದೇ ವಿಮಾ ಕಂಪನಿಯಿಂದ ಪಡೆಯಬೇಕಾಗುತ್ತದೆ.
ಡಿ.15ರಿಂದ ಕಡ್ಡಾಯ
ನಾಲ್ಕು ವಿಭಾಗಗಳ ಮೋಟಾರು ವಿಮಾ ರಚನೆ, ಏಕರೂಪದ ಪಾಲಿಸಿ ನಿಯಮಗಳು ಮತ್ತು ಕಡ್ಡಾಯ ಆಯ್ಕೆ ಫಾರ್ಮ್ 2026ರ ಡಿ.15ರಿಂದ ಜಾರಿಗೆ ಬರಲಿದೆ. ಆ ದಿನಾಂಕದಿಂದ ಹೊಸದಾಗಿ ನೀಡಲಾಗುವ ಖಾಸಗಿ ಕಾರು ಮತ್ತು ದ್ವಿಚಕ್ರ ವಾಹನ ವಿಮಾ ಪಾಲಿಸಿಗಳು ಈ ಹೊಸ ವ್ಯವಸ್ಥೆಯನ್ನು ಅನುಸರಿಸಬೇಕಾಗುತ್ತದೆ.
ಒಟ್ಟಾರೆ, ಹೊಸ ನಿಯಮಗಳಿಂದ ವಾಹನ ಮಾಲೀಕರಿಗೆ ವಿಮಾ ಪಾಲಿಸಿಯಲ್ಲಿರುವ ಪ್ರತಿಯೊಂದು ರಕ್ಷಣೆಯ ವೆಚ್ಚ ಮತ್ತು ವ್ಯಾಪ್ತಿಯ ಬಗ್ಗೆ ಹೆಚ್ಚಿನ ಸ್ಪಷ್ಟತೆ ದೊರೆಯಲಿದೆ. ಅಗತ್ಯವಿಲ್ಲದ ಕವರ್ಗಳಿಗೆ ಹಣ ಪಾವತಿಸುವುದನ್ನು ತಪ್ಪಿಸುವ ಜೊತೆಗೆ, ತಮ ಅಗತ್ಯಕ್ಕೆ ತಕ್ಕಂತೆ ವಿಮಾ ರಕ್ಷಣೆಯನ್ನು ಆಯ್ಕೆ ಮಾಡಿಕೊಳ್ಳಲು ಗ್ರಾಹಕರಿಗೆ ಹೆಚ್ಚಿನ ಅವಕಾಶ ಸಿಗಲಿದೆ.
