ಬೆಂಗಳೂರು, ಜೂ. 28- ಪಾನ್ ಮಸಾಲ, ಗುಟ್ಕಾದಲ್ಲಿನ ನಶೆಯ ಅಂಶಗಳು ಸೇರ್ಪಡೆಯಾಗುತ್ತಿರುವುದಾಗಿ ಮಾಹಿತಿ ಇದೆ. ಮುಂದಿನ ದಿನಗಳಲ್ಲಿ ಪಾನ್ ಮಸಾಲ, ಗುಟ್ಕಾವನ್ನು ನಿಷೇಧಿಸಲು ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಚ್ಚರಿಸಿದ್ದಾರೆ.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯದ 31ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ನಶಾ ಮುಕ್ತ ಭಾರತ ಅಭಿಯಾನದಲ್ಲಿ ಮಾತನಾಡಿದ ಅವರು, ಇತ್ತೀಚಿನ ವರದಿಗಳಲ್ಲಿ ನಮಗೆ ಬಂದಿರುವ ಮಾಹಿತಿ ಪ್ರಕಾರ ಪಾನ್ ಮಸಾಲ, ಗುಟ್ಕಾದಲ್ಲಿ ನಶೆಗೆ ಸಂಬಂಧಿಸಿದ ಅಂಶಗಳಿರುವುದಾಗಿ ತಿಳಿದು ಬಂದಿದೆ.
ಇಂತಹ ಉತ್ಪನ್ನಗಳ ಮಾಲೀಕರುಗಳಿಗೆ ನಾನು ಎಚ್ಚರಿಕೆ ನೀಡುತ್ತಿದ್ದೇನೆ. ಕರ್ನಾಟಕ ಸರ್ಕಾರಕ್ಕೆ 100 ಕೋಟಿ ರೂ.ಗಳ ತೆರಿಗೆ ಕಡಿಮೆಯಾದರೂ ಚಿಂತೆಯಿಲ್ಲ. ಮುಂದಿನ ದಿನಗಳಲ್ಲಿ ಪಾನ್ ಮಸಾಲ ಮತ್ತು ಗುಟ್ಕಾ ಉತ್ಪನ್ನಗಳನ್ನು ನಿಷೇಧಿಸುವುದಾಗಿ ಹೇಳಿದರು.
ಭಾರತ ಮಾದಕ ವ್ಯಸನ ಮುಕ್ತವಾಗಬೇಕು. ಅದರ ಭಾಗವಾಗಿ ಕರ್ನಾಟಕವನ್ನು ಮಾದಕ ದ್ರವ್ಯಗಳ ಮುಕ್ತವನ್ನಾಗಿಸಲು ನಾವು ಸಂಕಲ್ಪತೊಟ್ಟಿದ್ದೇವೆ. ಮಾದಕ ವಸ್ತುಗಳಿಂದ ದೇಶಕ್ಕೆ ಭವಿಷ್ಯವಿಲ್ಲ, ಇದನ್ನು ಮಟ್ಟ ಹಾಕಲು ಪ್ರತಿಯೊಬ್ಬರ ಸಹಕಾರವೂ ಅಗತ್ಯ ಎಂದು ಹೇಳಿದರು.
ರಾಜೀವ್ ಗಾಂಧಿ ವಿಶ್ವವಿದ್ಯಾಲಯ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ತನ್ನ ಕಾರ್ಯ ಚಟುವಟಿಕೆಗಳನ್ನು ಶೀಘ್ರವೇ ಆರಂಭಿಸಲಿದೆ. ಹೊಸ ಧ್ಯೇಯ, ಹೊಸ ಆವರಣದಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ವಿಶ್ವವಿದ್ಯಾಲಯ ಕೆಲಸ ಮಾಡಲಿದೆ ಘೋಷಿಸಿದರು.
ಕರ್ನಾಟಕ ಮಾಹಿತಿ ತಂತ್ರಜ್ಞಾನ ಮತ್ತು ಆರೋಗ್ಯ ಸೇವೆಗಳಿಗೆ ಪ್ರಸಿದ್ಧಿ ಪಡೆದಿದೆ. ಇಲ್ಲಿನ ಹವಾಮಾನ ದೇಶದ ಯಾವ ರಾಜ್ಯದಲ್ಲೂ ಇಲ್ಲ. ಕರ್ನಾಟದಲ್ಲಿ 70ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳಿವೆ. ಪ್ರತಿ ವರ್ಷ 13,970 ವೈದ್ಯಕೀಯ ವಿದ್ಯಾರ್ಥಿಗಳು ತಯಾರಾಗುತ್ತಿದ್ದಾರೆ. ರಾಜೀವ್ ಗಾಂಧಿ ವಿಶ್ವವಿದ್ಯಾಲಯದಲ್ಲಿ ಈವರೆಗೂ 40 ಲಕ್ಷ ವಿದ್ಯಾರ್ಥಿಗಳು ವೈದ್ಯಕೀಯ ಪದವಿ ಪಡೆದಿದ್ದಾರೆ ಎಂದು ಹೇಳಿದರು.
ಉಪ ರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್, ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಆಂಧ್ರಪ್ರದೇಶದ ರಾಜ್ಯಪಾಲ ಅಬ್ದುಲ್ ನಜೀರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್, ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್, ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಉಪ ಕುಲಪತಿ ಬಿ.ಸಿ.ಭಗವಾನ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
