ಬೆಂಗಳೂರು, ಆ.12- ಕಾವೇರಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಪ್ರವೀಣ್ ಶೆಟ್ಟಿ ಬಣ ಕರೆ ನೀಡಿದ್ದ ಬಂದ್ ಅನ್ನು ಹಿಂಪಡೆಯಲಾಗಿದೆ. ರಾಜ್ಯದಲ್ಲಿ ಹಾಗೂ ಜಲಾನಯನ ಪ್ರದೇಶಗಳಲ್ಲಿ ಇತ್ತೀಚೆಗೆ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯಗಳಿಗೆ ಒಳಹರಿವು ಗಣನೀಯವಾಗಿ ಹೆಚ್ಚಾಗಿದೆ. ಇದರಿಂದ ಸದ್ಯದ ಮಟ್ಟಿಗೆ ನೀರಿನ ಅಭಾವದ ತೀವ್ರತೆ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಬಂದ್ ನಡೆಸುವ ನಿರ್ಧಾರದಿಂದ ಹಿಂದೆ ಸರಿಯಲು ಕರವೇ ನಿರ್ಧರಿಸಿದೆ.
ಇದೇ ವೇಳೆ, ರಾಜ್ಯದ ಹಿತಾಸಕ್ತಿಗೆ ಧಕ್ಕೆಯಾಗುವಂತೆ ತರಾತುರಿಯಲ್ಲಿ ನೀರು ಬಿಡುವುದಿಲ್ಲ ಎಂದು ಸರ್ಕಾರ ಕನ್ನಡಪರ ಸಂಘಟನೆಗಳಿಗೆ ಸ್ಪಷ್ಟ ಭರವಸೆ ನೀಡಿದೆ. ಅಲ್ಲದೆ, ಸರ್ಕಾರ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿ ಕಾನೂನಾತ್ಮಕವಾಗಿ ಹೋರಾಟ ನಡೆಸಲು ಮುಂದಾಗಿದೆ.
ಬಂದ್ ನಡೆಸುವುದರಿಂದ ದಿನಗೂಲಿ ನೌಕರರು, ಸಣ್ಣ ವ್ಯಾಪಾರಿಗಳು, ರೈತರು ಹಾಗೂ ಸಾರ್ವಜನಿಕರಿಗೆ ಮತ್ತಷ್ಟು ತೊಂದರೆಯಾಗುವ ಸಾಧ್ಯತೆ ಇರುವುದನ್ನು ಪರಿಗಣಿಸಿ ಬಂದ್ ಬೇಡ ಎಂಬ ತೀರ್ಮಾನಕ್ಕೆ ಬರಲಾಗಿದೆ ಎಂದು ಕರವೇ ಪ್ರವೀಣ್ ಶೆಟ್ಟಿ ಬಣ ತಿಳಿಸಿದೆ.
ರಾಜ್ಯದ ರೈತರ ಹಿತಾಸಕ್ತಿ ಹಾಗೂ ಕುಡಿಯುವ ನೀರಿನ ಅಗತ್ಯವನ್ನು ಕಾಪಾಡಲು ಸರ್ಕಾರದ ಮೇಲೆ ನಿರಂತರ ಒತ್ತಡ ಹೇರುವುದಾಗಿ ಸಂಘಟನೆ ಹೇಳಿದೆ. ಪರಿಸ್ಥಿತಿಗೆ ಅನುಗುಣವಾಗಿ ಬಂದ್ ಬದಲಿಗೆ ಧರಣಿ, ಪ್ರತಿಭಟನೆ ಹಾಗೂ ಜಾಗೃತಿ ಜಾಥಾದಂತಹ ಪರ್ಯಾಯ ಹೋರಾಟಗಳನ್ನು ಮುಂದುವರಿಸಲು ನಿರ್ಧರಿಸಲಾಗಿದೆ.
