Homeರಾಷ್ಟ್ರೀಯಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆ : ಮನ್‌ಕಿ ಬಾತ್‌ನಲ್ಲಿ ದೇಶಕ್ಕೆ ಮೋದಿ ಸಂದೇಶ

ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆ : ಮನ್‌ಕಿ ಬಾತ್‌ನಲ್ಲಿ ದೇಶಕ್ಕೆ ಮೋದಿ ಸಂದೇಶ

ನವದೆಹಲಿ, ಸೆ.27- ಭಯೋತ್ಪಾದಕರ ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸಿದ ಸರ್ಜಿಕಲ್‌ ಸ್ಟ್ರೈಕ್‌ ಮೂಲಕ ಭಾರತ ತನ್ನ ಭಯೋತ್ಪಾದನೆ ವಿರೋಧಿ ನೀತಿಯ ಹೊಸ ಮಾದರಿಯನ್ನು ಜಗತ್ತಿಗೆ ತೋರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಆಕಾಶವಾಣಿಯಲ್ಲಿ ಪ್ರಸಾರವಾದ ಮನ್‌ ಕಿ ಬಾತ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೆ.28ರಂದು ಸರ್ಜಿಕಲ್‌ ಸ್ಟ್ರೈಕ್‌ಗೆ ಹತ್ತು ವರ್ಷ ಪೂರ್ಣಗೊಳ್ಳಲಿದೆ. ನಿಯಂತ್ರಣ ರೇಖೆ ದಾಟಿ ಭಯೋತ್ಪಾದಕರ ವಿರುದ್ಧ ಭಾರತೀಯ ಯೋಧರು ನಡೆಸಿದ ಕಾರ್ಯಾಚರಣೆಯನ್ನು ಇಡೀ ಜಗತ್ತು ಅಚ್ಚರಿಯಿಂದ ಗಮನಿಸಿತ್ತು ಎಂದರು.

ದೇಶವು ಹಲವು ವರ್ಷಗಳಿಂದ ಎದುರಿ ಸುತ್ತಿದ್ದ ಭಯೋತ್ಪಾದಕ ದಾಳಿಗಳಿಗೆ ಸರ್ಜಿಕಲ್‌ ಸ್ಟ್ರೈಕ್‌ ನಿರ್ಣಾಯಕ ಉತ್ತರವಾಗಿತ್ತು. ಬಾಲಾಕೋಟ್‌ ವಾಯುದಾಳಿ ಸೇರಿದಂತೆ ಆಪರೇಷನ್‌ ಸಿಂಧೂರ್‌ ವರೆಗೆ ಭಾರತ ಹಲವು ಬಾರಿ ಭಯೋತ್ಪಾದಕ ದಾಳಿಗಳಿಗೆ ಸೂಕ್ತ ಪ್ರತಿಕ್ರಿಯೆ ನೀಡುವುದಾಗಿ ಸಂದೇಶ ಸಾರಿದೆ ಎಂದು ಮೋದಿ ಹೇಳಿದರು.

ಒಂದು ಕಾಲದಲ್ಲಿ ದೇಶದಲ್ಲಿ ಸರಣಿ ಸ್ಫೋಟಗಳು ಸಾಮಾನ್ಯವಾಗಿದ್ದವು. 2008ರ ಸೆ.13ರಂದು ದೆಹಲಿಯಲ್ಲಿ ನಡೆದ ಸರಣಿ ಸ್ಫೋಟಗಳಲ್ಲಿ ಅನೇಕರು ಮೃತಪಟ್ಟರು. ಕೆಲವೇ ವಾರಗಳ ಬಳಿಕ ಮುಂಬೈನಲ್ಲಿ 26/11 ಭಯೋತ್ಪಾದಕ ದಾಳಿ ನಡೆಯಿತು. ಆದರೆ ಇಂದು ಭಾರತ ಭಯೋತ್ಪಾದನೆ ವಿರುದ್ಧ ಶೂನ್ಯ ಸಹನೆ ನೀತಿಯನ್ನು ಅನುಸರಿಸುತ್ತಿದ್ದು, ಅದರ ಪರಿಣಾಮಗಳನ್ನು ದೇಶ ಕಾಣುತ್ತಿದೆ ಎಂದು ಹೇಳಿದರು.

ಈ ವರ್ಷ ಸೆಪ್ಟೆಂಬರ್‌ 11ರ ಭಯೋತ್ಪಾದಕ ದಾಳಿಗೂ 25 ವರ್ಷ ಪೂರ್ಣಗೊಂಡಿದೆ. ಅಮೆರಿಕದ ವಿಶ್ವ ವಾಣಿಜ್ಯ ಕೇಂದ್ರದ ಮೇಲಿನ ದಾಳಿಯಲ್ಲಿ ಅಮೆರಿಕನ್ನರ ನಂತರ ಅತಿ ಹೆಚ್ಚು ಬಲಿಯಾದವರು ಭಾರತೀಯರು ಎಂದು ಮೋದಿ ಸರಿಸಿದರು. 2014ರಲ್ಲಿ ಪ್ರಧಾನಿಯಾದ ಬಳಿಕ ಅಮೆರಿಕ ಪ್ರವಾಸದ ವೇಳೆ ಈ ದಾಳಿಯಲ್ಲಿ ಮೃತಪಟ್ಟವರಿಗೆ ಗೌರವ ಸಲ್ಲಿಸಿದ್ದಾಗಿ ತಿಳಿಸಿದರು.

ಜನಗಣತಿ ಕಾರ್ಯ ಪ್ರಗತಿ:
ದೇಶದಲ್ಲಿ ನಡೆಯುತ್ತಿರುವ ಜನಗಣತಿಯ ಮೊದಲ ಹಂತ ಬಹುತೇಕ ಪೂರ್ಣಗೊಂಡಿದ್ದು, ಇದುವರೆಗೆ 32 ಕೋಟಿಗೂ ಹೆಚ್ಚು ಕುಟುಂಬಗಳ ಮಾಹಿತಿಯನ್ನು ದಾಖಲಿಸಲಾಗಿದೆ ಎಂದು ಪ್ರಧಾನಿ ತಿಳಿಸಿದರು.ಲಡಾಖ್‌, ಹಿಮಾಚಲ ಪ್ರದೇಶ, ಜಮು-ಕಾಶೀರ ಮತ್ತು ಉತ್ತರಾಖಂಡದ ಹಿಮಾವೃತ ಹಾಗೂ ದೂರದ ಪ್ರದೇಶಗಳಲ್ಲಿಯೂ ಕಾರ್ಯ ಮುಂದುವರಿದಿದೆ. ಜನಗಣತಿ ಪ್ರತಿಯೊಬ್ಬರ ರಾಷ್ಟ್ರೀಯ ಜವಾಬ್ದಾರಿಯಾಗಿದೆ. ಮೊಬೈಲ್‌ ಮೂಲಕ ಸ್ವಯಂ ನೋಂದಣಿ ಮಾಡಿಕೊಳ್ಳುವ ಸೌಲಭ್ಯವಿದ್ದು, ಹಿಂದಿ ಸೇರಿದಂತೆ 16 ಭಾಷೆಗಳಲ್ಲಿ ಈ ವ್ಯವಸ್ಥೆ ಲಭ್ಯವಿದೆ. ಜನರು ಜನಗಣತಿ ಜಾಲತಾಣಕ್ಕೆ ತೆರಳಿ ಮೊಬೈಲ್‌ ಸಂಖ್ಯೆ ಬಳಸಿ ತಮ ಸ್ಥಳ ಹಾಗೂ ಕುಟುಂಬದ ವಿವರಗಳನ್ನು ದಾಖಲಿಸಿ ಸಲ್ಲಿಸಬಹುದು ಎಂದು ಹೇಳಿದರು.

ಈ ಪ್ರಕ್ರಿಯೆಗೆ ಸುಮಾರು 15ರಿಂದ 20 ನಿಮಿಷ ಮಾತ್ರ ಬೇಕಾಗುತ್ತದೆ. ಯಾವುದೇ ದಾಖಲೆಗಳನ್ನು ಅಪ್ಲೋಡ್‌ ಮಾಡುವ ಅಗತ್ಯವಿಲ್ಲ. ಮಾಹಿತಿ ಸಲ್ಲಿಸಿದ ಬಳಿಕ ವಿಶೇಷ ಗುರುತಿನ ಸಂಖ್ಯೆ ದೊರೆಯಲಿದ್ದು, ಜನಗಣತಿ ಸಿಬ್ಬಂದಿ ಮನೆಗೆ ಭೇಟಿ ನೀಡಿದಾಗ ಅದನ್ನು ನೀಡಬಹುದು. ಪರಿಶೀಲನೆಯ ಬಳಿಕ ಮಾಹಿತಿ ಜನಗಣತಿ ದಾಖಲೆಗಳ ಭಾಗವಾಗಲಿದೆ ಎಂದು ಮೋದಿ ವಿವರಿಸಿದರು. ಇದುವರೆಗೆ 2 ಕೋಟಿ 60 ಲಕ್ಷಕ್ಕೂ ಹೆಚ್ಚು ಮಂದಿ ಮೊಬೈಲ್‌ ಮೂಲಕ ಜನಗಣತಿ ಜಾಲತಾಣದಲ್ಲಿ ತಮ್ಮ ವಿವರಗಳನ್ನು ದಾಖಲಿಸಿದ್ದಾರೆ ಎಂದು ಅವರು ತಿಳಿಸಿದರು. ವಿಶ್ವ ಹಿಂದೂ ಪರಿಷತ್ನ ಮಾಜಿ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಅಶೋಕ್‌ ಸಿಂಘಾಲ್‌ ಅವರ 100ನೇ ಜನ ವರ್ಷಾಚರಣೆಯನ್ನು ಪ್ರಧಾನಿ ಸರಿಸಿದರು.

ಅಕ್ಟೋಬರ್‌ 2ರಂದು ಮಹಾತ ಗಾಂಧೀಜಿಯವರ ಜನದಿನ ಆಚರಿಸಲಾಗುತ್ತಿದ್ದು, ಸ್ವಚ್ಛತೆ ಬಾಪೂ ಅವರ ಜೀವನದ ಪ್ರಮುಖ ಸಂದೇಶಗಳಲ್ಲಿ ಒಂದಾಗಿದೆ. ಒಬ್ಬ ವ್ಯಕ್ತಿಯಿಂದ ಆರಂಭವಾಗುವ ಪ್ರಯತ್ನಕ್ಕೆ ಇತರರು ಕೈಜೋಡಿಸಿದಾಗ ಅದು ಜನಭಾಗೀದಾರಿ ಚಳವಳಿಯಾಗುತ್ತದೆ. ಸ್ವಚ್ಛತೆಯೇ ಮಹಾತ ಗಾಂಧೀಜಿಗೆ ದೇಶ ನೀಡಬಹುದಾದ ಅತ್ಯಂತ ಸುಂದರ ಗೌರವ ಎಂದು ಹೇಳಿದರು.

ಮಾದಕ ವಸ್ತು ಮುಕ್ತ ಯುವ ಅಭಿಯಾನದಡಿ ದೇಶದ ಕೋಟ್ಯಂತರ ಯುವಕರು ಮಾದಕ ವಸ್ತುಗಳಿಂದ ದೂರವಿರುವ ಸಂಕಲ್ಪ ಮಾಡಿದ್ದಾರೆ. 100 ವಾರಗಳ ಕಾಲ ನಡೆಯಲಿರುವ ಈ ಅಭಿಯಾನದಲ್ಲಿ ಮೈ ಭಾರತ್‌ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಯುವಕರು ಭಾಗವಹಿಸುತ್ತಿದ್ದಾರೆ. ಗ್ರಾಮಗಳು ಮತ್ತು ಪಟ್ಟಣಗಳಲ್ಲಿ ಅಡಗಿರುವ ಕ್ರೀಡಾ ಪ್ರತಿಭೆಗಳನ್ನು ಗುರುತಿಸುವ ಅಗತ್ಯವಿದೆ ಎಂದು ಪ್ರಧಾನಿ ಹೇಳಿದರು.

ಸೆಪ್ಟೆಂಬರ್‌ ತಿಂಗಳನ್ನು ಅಪೌಷ್ಟಿಕತೆ ವಿರುದ್ಧದ ಹೋರಾಟಕ್ಕೆ ಮೀಸಲಿಡಲಾಗಿದೆ ಎಂದು ಪ್ರಧಾನಿ ಹೇಳಿದರು. ಪೋಷಣ್‌ ಮಾಸದ ಅಂಗವಾಗಿ ವಿವಿಧ ರಾಜ್ಯಗಳಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಥಾಯ್ಲೆಂಡ್‌ನಲ್ಲೂ ಗಣೇಶ ಭಕ್ತಿ: ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಗಣೇಶನ ಮೇಲಿನ ಭಕ್ತಿ ಹೆಚ್ಚುತ್ತಿದೆ ಎಂದು ಪ್ರಧಾನಿ ಹೇಳಿದರು. ಥಾಯ್ಲೆಂಡ್‌ನ ಪಂಥೌನ್‌ ಥಿರ್ಖಾನೋನ್‌ ಅವರು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಗಣೇಶನಿಗೆ ಸಂಬಂಧಿಸಿದ ಪರಂಪರೆಗಳ ಅಧ್ಯಯನ ನಡೆಸಿದ್ದಾರೆ ಎಂದು ತಿಳಿಸಿದರು.

2002ರಲ್ಲಿ ಉತ್ತರ ಥಾಯ್ಲೆಂಡ್‌ನ ಚಿಯಾಂಗ್‌ ಮಾಯ್‌ನಲ್ಲಿ ಗಣೇಶ ಹಿಮಾಲಯ ವಸ್ತುಸಂಗ್ರಹಾಲಯ ಸ್ಥಾಪಿಸಿದ ಅವರು, ಭಾರತ ಮತ್ತು ನೇಪಾಳ ಸೇರಿದಂತೆ ಹಲವು ಏಷ್ಯಾ ರಾಷ್ಟ್ರಗಳಿಗೆ ಭೇಟಿ ನೀಡಿದ್ದಾರೆ. ವಸ್ತುಸಂಗ್ರಹಾಲಯದಲ್ಲಿ ಗಣೇಶನ 10 ಸಾವಿರಕ್ಕೂ ಹೆಚ್ಚು ವಿಗ್ರಹಗಳಿದ್ದು, ಭಾರತಕ್ಕೆ ಬರಲು ಸಾಧ್ಯವಾಗದ ಭಕ್ತರಿಗಾಗಿ ಅಷ್ಟವಿನಾಯಕ ವಿಗ್ರಹಗಳೂ ಇವೆ. ಪ್ರತೀ ಭಾನುವಾರ ಬೆಳಗ್ಗೆ ಗಣೇಶನ ಪೂಜೆ ನಡೆಯುತ್ತದೆ ಎಂದು ಮೋದಿ ಹೇಳಿದರು. ಭಾರತದ ನಂಬಿಕೆ, ಕಲೆ ಮತ್ತು ಸಾಂಸ್ಕೃತಿಕ ಪರಂಪರೆ ಇತರ ದೇಶಗಳಲ್ಲಿಯೂ ಜನಪ್ರಿಯವಾಗುತ್ತಿರುವುದಕ್ಕೆ ಇದು ಉದಾಹರಣೆಯಾಗಿದೆ ಎಂದು ಅವರು ಹೇಳಿದರು.

RELATED ARTICLES
spot_img

Latest News