ಬೆಂಗಳೂರು, ನ.12- ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಇಂದು ಸಂಜೆಯೊಳಗೆ ವಾರ್ಡ್ವಾರು ಮತದಾರರ ಪಟ್ಟಿಯನ್ನು ಸಿದ್ಧಪಡಿಸಬೇಕಿದೆ.ಈ ಹಿಂದೆ ಜಿಬಿಎಗೆ ಪತ್ರ ಬರೆದಿದ್ದ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್ 2026ರ ಜುಲೈ 17ರಂದು ನೀಡಿರುವ ಆದೇಶದಂತೆ ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಸಾರ್ವತ್ರಿಕ ಚುನಾವಣೆಯನ್ನು ಡಿಸೆಂಬರ್ 2026ರೊಳಗೆ ಪೂರ್ಣಗೊಳಿಸಬೇಕಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಪ್ರಕ್ರಿಯೆಗೆ ಅಗತ್ಯವಾದ ಮತದಾರರ ಪಟ್ಟಿ ಸಿದ್ಧಪಡಿಸಿ ನ.12ರೊಳಗೆ ಮಾಹಿತಿ ನೀಡುವಂತೆ ಸೂಚನೆ ನೀಡಿತ್ತು.
ಆಯೋಗ ನೀಡಿರುವ ಗಡುವು ಇಂದು ಕೊನೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಗ್ರೇಟರ್ ಬೆಂಗಳೂರು ಆಡಳಿತ (ಮತದಾರರ ನೋಂದಣಿ) ನಿಯಮಗಳು, 2025ರ ನಿಯಮ 30ರ ಪ್ರಕಾರ, ಪ್ರಸ್ತುತ ಜಾರಿಯಲ್ಲಿರುವ ವಿಧಾನಸಭಾ ಮತದಾರರ ಪಟ್ಟಿಯನ್ನು ಆಧರಿಸಿ ಐದು ನಗರ ಪಾಲಿಕೆಗಳ ವಾರ್ಡ್ವಾರು ಮತದಾರರ ಪಟ್ಟಿ ಇಂದು ಸಂಜೆಯೊಳಗೆ ಸಿದ್ಧಪಡಿಸಬೇಕಿದೆ. ವಿಧಾನಸಭೆಯ ಅಂತಿಮ ಮತದಾರರ ಪಟ್ಟಿಯು ಅಕ್ಟೋಬರ್ 27ರಂದು ಪ್ರಕಟಗೊಂಡಿದ್ದು, ಅದರ ದತ್ತಾಂಶವನ್ನು ಒದಗಿಸುವಂತೆ ಭಾರತ ಚುನಾವಣಾ ಆಯೋಗಕ್ಕೆ ಈಗಾಗಲೇ ಪತ್ರ ಬರೆಯಲಾಗಿದೆ.
ದತ್ತಾಂಶ ಸ್ವೀಕೃತವಾದ ಕೂಡಲೇ ಮತದಾರರ ಪಟ್ಟಿ ಸಿದ್ಧಪಡಿಸುವುದು ಹಾಗೂ ಮುದ್ರಿಸುವ ಸಂಬಂಧ ಕಾರ್ಯಕ್ರಮದ ವೇಳಾಪಟ್ಟಿಯನ್ನು ನಿಗದಿಪಡಿಸಿ ಪ್ರತ್ಯೇಕ ಸುತ್ತೋಲೆ ಹೊರಡಿಸಲಾಗುವುದು ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ. ಆದರೆ, ಚುನಾವಣೆಗೆ ಲಭ್ಯವಿರುವ ಕಾಲಾವಕಾಶ ಕಡಿಮೆ ಇರುವುದರಿಂದ ಅಂತಿಮ ದತ್ತಾಂಶಕ್ಕಾಗಿ ಕಾಯದೆ ಪೂರ್ವಭಾವಿ ಸಿದ್ಧತೆಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ.
ಅಕ್ಟೋಬರ್ 27ರಂದು ಪ್ರಕಟವಾದ ಅಂತಿಮ ವಿಧಾನಸಭಾ ಮತದಾರರ ಪಟ್ಟಿಯ ಮುದ್ರಿತ ಪ್ರತಿಗಳನ್ನು ಆಧರಿಸಿ, ವಾರ್ಡ್ಗಳ ಪುನರ್ವಿಂಗಡಣೆ ಅಧಿಸೂಚನೆಯಲ್ಲಿನ ಗಡಿ ಸರಹದ್ದುಗಳಿಗೆ ಅನುಗುಣವಾಗಿ ಆಯಾ ವಾರ್ಡ್ ವ್ಯಾಪ್ತಿಗೆ ಒಳಪಡುವ ಮತದಾರರನ್ನು ಗುರುತಿಸಬೇಕು.
ಒಂದು ಮತಗಟ್ಟೆಯಲ್ಲಿ 1,200 ಮತದಾರರಿಗೆ ಮಿತಿ:ಪ್ರತಿ ವಾರ್ಡ್ನ ಮತಗಟ್ಟೆ ವ್ಯಾಪ್ತಿಯಲ್ಲಿ 1,200 ಮತದಾರರನ್ನು ಮೀರದಂತೆ ಪಟ್ಟಿ ಸಿದ್ಧಪಡಿಸಬೇಕು. ಗುರುತಿಸಲಾದ ಮತದಾರರ ವಿವರಗಳನ್ನು ನಿಗದಿತ ನಮೂನೆಯಂತೆ ಎಕ್ಸೆಲ್ ಮಾದರಿಯಲ್ಲಿ ನಗರ ಪಾಲಿಕೆವಾರು ನಮೂದಿಸಿ, ನವೆಂಬರ್ 12ರೊಳಗೆ ಸಿದ್ಧಪಡಿಸಿಟ್ಟುಕೊಳ್ಳಬೇಕು ಎಂದು ಆಯೋಗ ಸೂಚಿಸಿದೆ.
ಈ ಕಾರ್ಯವನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಸಂಬಂಧಪಟ್ಟ ಮತದಾರರ ನೋಂದಣಾಧಿಕಾರಿಗಳಿಗೆ ಅಗತ್ಯ ಸೂಚನೆ ಹಾಗೂ ನಿರ್ದೇಶನಗಳನ್ನು ನೀಡುವಂತೆ ಜಿಬಿಎ ಮುಖ್ಯ ಆಯುಕ್ತರಿಗೆ ಪತ್ರದಲ್ಲಿ ಮನವಿ ಮಾಡಲಾಗಿದೆ.
ಅಧಿಕಾರಿಗಳಿಗೆ ಈಗಾಗಲೇ ತರಬೇತಿ:ಐದು ನಗರ ಪಾಲಿಕೆಗಳ ವ್ಯಾಪ್ತಿಯ ಮತದಾರರ ನೋಂದಣಾಧಿಕಾರಿಗಳು ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿಗಳಿಗೆ ಮತದಾರರ ಪಟ್ಟಿ ಸಿದ್ಧಪಡಿಸುವ ಕುರಿತು ರಾಜ್ಯ ಚುನಾವಣಾ ಆಯೋಗವು ಅಕ್ಟೋಬರ್ 11 ಮತ್ತು 16ರಂದು ತರಬೇತಿ ನೀಡಿದೆ.ಒಟ್ಟಾರೆ, ಡಿಸೆಂಬರ್ ಅಂತ್ಯದೊಳಗೆ ಐದು ನಗರ ಪಾಲಿಕೆಗಳ ಚುನಾವಣೆ ಪೂರ್ಣಗೊಳಿಸಬೇಕಿರುವ ಹಿನ್ನೆಲೆಯಲ್ಲಿ ಮತದಾರರ ಪಟ್ಟಿ ಸಿದ್ಧಪಡಿಸುವ ಪ್ರಕ್ರಿಯೆಗೆ ವೇಗ ನೀಡಲು ಆಯೋಗ ಮುಂದಾಗಿದೆ. ವಾರ್ಡ್ವಾರು ಮತದಾರರನ್ನು ಗುರುತಿಸುವುದು, ಮತಗಟ್ಟೆ ವ್ಯಾಪ್ತಿಯನ್ನು ನಿಗದಿಪಡಿಸುವುದು ಹಾಗೂ ಮಾಹಿತಿಯನ್ನು ವ್ಯವಸ್ಥಿತವಾಗಿ ಸಂಗ್ರಹಿಸುವ ಕಾರ್ಯಗಳು ಇದೀಗ ಚುನಾವಣಾ ಸಿದ್ಧತೆಯ ಪ್ರಮುಖ ಹಂತಗಳಾಗಿವೆ.
