Homeರಾಜ್ಯಅಯ್ಯಪ್ಪ ಸನ್ನಿಧಿಯಲ್ಲಿ ನೀರಿನ ಸ್ವಚ್ಛತೆ ಕೊರತೆ : ಕೇರಳ ಹೈಕೋರ್ಟ್‌ ಗರಂ

ಅಯ್ಯಪ್ಪ ಸನ್ನಿಧಿಯಲ್ಲಿ ನೀರಿನ ಸ್ವಚ್ಛತೆ ಕೊರತೆ : ಕೇರಳ ಹೈಕೋರ್ಟ್‌ ಗರಂ

ಕೊಚ್ಚಿ,ನ.12- ಶಬರಿಮಲೆಯ ಸ್ವಾಮಿ ಅಯ್ಯಪ್ಪ ಸನ್ನಿಧಾನಕ್ಕೆ ತೆರಳುವ ಮಾರ್ಗದಲ್ಲಿರುವ ಕೇರಳ ಜಲ ಪ್ರಾಧಿ ಕಾರ ಸ್ಥಾಪಿಸಿರುವ ಕುಡಿಯುವ ನೀರಿನ ಘಟಕಗಳ ನಿರ್ವಹಣೆಯಲ್ಲಿ ಸ್ವಚ್ಛತೆ ಕೊರತೆ ಬಗ್ಗೆ ಕೇರಳ ಹೈಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಯಾತ್ರಾ ಋತುವಿನಾದ್ಯಂತ ನೀರಿನ ಘಟಕಗಳನ್ನು ಅತ್ಯಂತ ಸ್ವಚ್ಛ ಹಾಗೂ ನೈರ್ಮಲ್ಯಯುತ ಸ್ಥಿತಿಯಲ್ಲಿ ನಿರ್ವಹಿಸುವಂತೆ ಜಲ ಪ್ರಾಧಿಕಾರಕ್ಕೆ ಸೂಚಿಸಲಾಗಿದೆ.ನ್ಯಾಯಮೂರ್ತಿಗಳಾದ ರಾಜ ವಿಜಯರಾಘವನ್‌ ವಿ. ಮತ್ತು ಕೆ.ವಿ. ಜಯಕುಮಾರ್‌ ಅವರನ್ನೊಳಗೊಂಡ ಪೀಠವು, ನೀರಿನ ನಲ್ಲಿಗಳ ಕೆಳಗೆ ಕಸ ಮತ್ತು ತ್ಯಾಜ್ಯ ರಾಶಿ ಬಿದ್ದಿರುವ ಹಾಗೂ ಘಟಕಗಳು ಸರಿಯಾಗಿ ನಿರ್ವಹಣೆಯಾಗದಿರುವ ಛಾಯಾಚಿತ್ರಗಳನ್ನು ಪರಿಶೀಲಿಸಿದ ಬಳಿಕ ಈ ನಿರ್ದೇಶನ ನೀಡಿದೆ.

ಭಕ್ತರಿಗೆ ಸುರಕ್ಷಿತ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಸ್ಥಾಪಿಸಿರುವ ಘಟಕಗಳ ಇಂತಹ ದುಸ್ಥಿತಿ ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಎಂದು ನ್ಯಾಯಾಲಯ ಹೇಳಿದೆ.
ನೀರಿನ ಘಟಕಗಳ ಸ್ವಚ್ಛತೆ ಕಾಪಾಡಲು ಹಾಗೂ ಭಕ್ತರಿಗೆ ಸುರಕ್ಷಿತ ಕುಡಿಯುವ ನೀರು ಒದಗಿಸಲು ಕೈಗೊಂಡಿರುವ ಕ್ರಮಗಳ ಕುರಿತು ವಿವರವಾದ ವರದಿ ಸಲ್ಲಿಸುವಂತೆಯೂ ಸೂಚಿಸಿದೆ. ಸನ್ನಿಧಾನದಲ್ಲಿ ಈ ಘಟಕಗಳ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಯ ವಿವರಗಳನ್ನೂ ವರದಿಯಲ್ಲಿ ನೀಡುವಂತೆ ತಿಳಿಸಿದೆ.

ನೀರಿನ ಘಟಕಗಳ ನಿಯಮಿತ ಸ್ವಚ್ಛತೆ, ನಿರ್ವಹಣೆ ಮತ್ತು ದುರಸ್ತಿಗಾಗಿ ಸಾಕಷ್ಟು ಸಿಬ್ಬಂದಿಯನ್ನು ನಿಯೋಜಿಸಬೇಕು. ಅಲ್ಲದೆ, ಅವುಗಳ ಸ್ಥಿತಿಗತಿಯನ್ನು ಕಾಲಕಾಲಕ್ಕೆ ಪರಿಶೀಲಿಸಬೇಕು ಎಂದು ನ್ಯಾಯಪೀಠ ನಿರ್ದೇಶಿಸಿದೆ.ಕಳೆದ ಯಾತ್ರಾ ಋತುವಿನಲ್ಲಿ ನೀರಿನ ಘಟಕವೊಂದರಲ್ಲಿ ಸಡಿಲಗೊಂಡಿದ್ದ ವಿದ್ಯುತ್‌ ತಂತಿ ಸ್ಪರ್ಶಿಸಿ ಭಕ್ತರೊಬ್ಬರು ವಿದ್ಯುತ್‌ ಆಘಾತದಿಂದ ಮೃತಪಟ್ಟ ಘಟನೆಯನ್ನೂ ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ.

ಇಂತಹ ಘಟನೆ ಮರುಕಳಿಸಬಾರದು. ಎಲ್ಲ ನೀರಿನ ಘಟಕಗಳ ವಿದ್ಯುತ್‌ ಸಂಪರ್ಕ, ವೈರಿಂಗ್‌ ಮತ್ತು ಸಂಬಂಧಿತ ಉಪಕರಣಗಳನ್ನು ಸಮಗ್ರವಾಗಿ ಪರಿಶೀಲಿಸಿ, ತೆರೆದಿರುವ ಅಥವಾ ದೋಷಪೂರಿತ ತಂತಿಗಳನ್ನು ತಕ್ಷಣ ಸರಿಪಡಿಸಬೇಕು ಎಂದು ಸೂಚಿಸಿದೆ.ಮಂಡಲಕಾಲ-ಮಕರವಿಳಕ್ಕು ಯಾತ್ರಾ ಋತುವಿಗೆ ಮುನ್ನ ಶಬರಿಮಲೆಯಲ್ಲಿ ಕೈಗೊಳ್ಳಬೇಕಾದ ವ್ಯವಸ್ಥೆಗಳು ಮತ್ತು ಈಗಿರುವ ಸೌಲಭ್ಯಗಳ ಕುರಿತು ವಿಶೇಷ ಆಯುಕ್ತರು ಸಲ್ಲಿಸಿದ ವರದಿಯನ್ನು ಆಧರಿಸಿ ಹೈಕೋರ್ಟ್‌ ಸ್ವಯಂಪ್ರೇರಿತವಾಗಿ ವಿಚಾರಣೆ ನಡೆಸುತ್ತಿದೆ.

RELATED ARTICLES

Latest News