ಬೆಂಗಳೂರು,ನ.12- ಜೆಡಿಎಸ್‌ನಲ್ಲಿರುವ 18 ಶಾಸಕರಲ್ಲಿ 12 ಶಾಸಕರನ್ನು ಕೊಂಡುಕೊಂಡಿದ್ದೇನೆ ಎಂದು ಹೇಳುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನಮಗೆ ಒಳ್ಳೆಯದನ್ನು ಬಯಸಿದ್ದಾರೆಯೇ? ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಮುಗಿಸುತ್ತೇನೆ ಎಂದು ಮುಖ್ಯಮಂತ್ರಿ ಎಷ್ಟು ಬಾರಿ ಹೇಳಿಲ್ಲ. ನನಗೆ ಆ ವಿಚಾರದ ಬಗ್ಗೆ ಚರ್ಚೆ ಬೇಡ. ಮುಂದಿನ 2028ರ ವಿಧಾನಸಭಾ ಚುನಾವಣೆಯಲ್ಲಿ ಯಾರು ಅಧಿಕಾರದಲ್ಲಿರಬೇಕು ಎಂಬುದನ್ನು ರಾಜ್ಯದ ಜನ ತೀರ್ಮಾನ ಮಾಡುತ್ತಾರೆ ಎಂದರು.
ಮೈಸೂರಿನಲ್ಲಿ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆ ಬಗ್ಗೆ ಮೇಲಿನಂತೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಪಾಪ ಅವರು ನಿನ್ನೆ ಮಾತನಾಡಿರುವುದನ್ನು ನೋಡಿದ್ದೇನೆ. ಮುಖ್ಯಮಂತ್ರಿಗಳ ಮಾತಿಗೂ ಕೃತಿಗೂ ಚರ್ಚೆ ಬೇಡ. ನಾನು ಮುಖ್ಯಮಂತ್ರಿಯಾಗಿದ್ದಾಗ ಅವರು ನನಗೆ ಏನು ಸಹಾಯ ಮಾಡಿದ್ದಾರೆ. ನಾನು ಅವರಿಗೆ ಏನು ಸಹಾಯ ಮಾಡಿದ್ದೆ ಎಂಬುದರ ಬಗ್ಗೆ ಚರ್ಚೆ ಬೇಡ. ನಮ ಪಕ್ಷವನ್ನು ಮುಗಿಸಲು ಅವರು ಏನು ಮಾಡಿದ್ದಾರೆ ಎಂಬುದಕ್ಕೆಲ್ಲಾ ಚರ್ಚೆ ಮಾಡಿ ಪ್ರತಿಯೊಂದಕ್ಕೂ ಉತ್ತರ ಕೊಡಬೇಕೆ? ಎಂದು ಪ್ರಶ್ನಿಸಿದರು.
ಜೆಡಿಎಸ್‌ಗೆ ಅವರು ಬರುತ್ತಾರೆ, ಇವರು ಬರುತ್ತಾರೆ ಎಂದು ತಲೆಕೆಡಿಸಿಕೊಂಡಿಲ್ಲ. ಪಕ್ಷ ಸಂಘಟನೆಯನ್ನು ನನ್ನ ಕೈಲಾದ ಮಟ್ಟಿಗೆ ಮಾಡುತ್ತಿದ್ದೇನೆ ಎಂದು ಕಾಂಗ್ರೆಸ್‌ನಿಂದ ಜೆಡಿಎಸ್‌ಗೆ ಕೆಲವು ಮುಖಂಡರು ಬರಲು ಸಿದ್ಧತೆ ನಡೆಸಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಎನ್‌ಡಿಆರ್‌ಎಫ್ ಹಣವನ್ನು ಕೇಂದ್ರ ಸರ್ಕಾರ ನೀಡುತ್ತಿಲ್ಲ ಎಂಬ ರಾಜ್ಯ ಸರ್ಕಾರದ ಆರೋಪಕ್ಕೆ ಉತ್ತರಿಸಿದ ಅವರು, ಸರ್ಕಾರ ನಡೆಸುತ್ತಿರುವವರಿಗೆ ಜವಾಬ್ದಾರಿ ಇರಬೇಕು. ನಾನು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದೆ. ಯಾವತ್ತೂ ಕೇಂದ್ರ ಸರ್ಕಾರವನ್ನು ದೂರಲಿಲ್ಲ. ರಾಜ್ಯದ ಜನರು ಪಾವತಿಸಿವ ತೆರಿಗೆ ಹಣ ಖಜಾನೆಯಲ್ಲಿತ್ತು. ಆ ಹಣದಲ್ಲೇ ಹಲವು ಯೋಜನೆ ಕೊಟ್ಟಿದ್ದೇನೆ.
ರೈತರ ಸಾಲ ಮನ್ನಾ ಮಾಡಿದ್ದೇನೆ. ಕೇಂದ್ರ ಸರ್ಕಾರವನ್ನು ಟೀಕೆ ಮಾಡುವುದು ಬೇಡ ಎಂದರು. ಮೊದಲ ಬಾರಿ ನಾನು ಮುಖ್ಯಮಂತ್ರಿಯಾಗಿ ಬಿಜೆಪಿ ಜೊತೆ ಸರ್ಕಾರ ನಡೆಸಿದೆ. ಆಗ ಯುಪಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿತ್ತು. ಎರಡನೇ ಬಾರಿ ಮುಖ್ಯಮಂತ್ರಿಯಾದಾಗ ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿತ್ತು.
ನಾನು ಯಾವತ್ತೂ ಕೇಂದ್ರ ಸರ್ಕಾರವನ್ನ್ನು ದೂರಲಿಲ್ಲ. ಜನರ ತೆರಿಗೆ ಹಣವನ್ನು ದುಂದು ವೆಚ್ಚ ಮಾಡುವುದನ್ನು ಬಿಟ್ಟು ಸರಿಯಾಗಿ ಬಳಕೆ ಮಾಡಿಕೊಳ್ಳಲಿ. ರೈತರಿಗೆ ಒಂದೂವರೆ ಸಾವಿರ ರೂ. ಪರಿಹಾರ ನೀಡಲು ಅವರೇನು ಬಿಕ್ಷುಕರೆ? ಸರಿಪಡಿಸುವುದಾಗಿ ಹೇಳಿದ್ದಾರೆ, ಏನು ಸರಿಪಡಿಸುತ್ತಾರೋ ಕಾದು ನೋಡೋಣ ಎಂದು ಅವರು ಹೇಳಿದರು.
