Homeರಾಜ್ಯಹಿರಿಯೂರು ಉಪಚುನಾವಣೆಗೆ ಸರ್ವಸಮ್ಮತ NDA ಅಭ್ಯರ್ಥಿ ಕಣಕ್ಕೆ : ಹೆಚ್ಡಿಕೆ

ಹಿರಿಯೂರು ಉಪಚುನಾವಣೆಗೆ ಸರ್ವಸಮ್ಮತ NDA ಅಭ್ಯರ್ಥಿ ಕಣಕ್ಕೆ : ಹೆಚ್ಡಿಕೆ

ತುಮಕೂರು.ಅ. 12 : ಹಿರಿಯೂರು ಉಪ ಚುನಾವಣೆಯಲ್ಲಿ ಸರ್ವ ಸಮ್ಮತ NDA ಅಭ್ಯರ್ಥಿ ಕಣಕ್ಕೆ ಇಳಿಯುತ್ತಾರೆ ಅವರು ಎಂದು ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದರು. ತುಮಕೂರು ಜಿಲ್ಲೆಯ ಕೋರಾ ಹೋಬಳಿಯ ವಸಂತಪುರ ಕೈಗಾರಿಕಾ ಸಮುಚ್ಚಯದಲ್ಲಿ ಹೊಸದಾಗಿ ನಿರ್ಮಾಣ ಆಗುತ್ತಿರುವ ಆದರ್ಶ ಸ್ಪೆಷಲಿ ಕೆಮಿಕಲ್ ಪ್ರೈವೇಟ್ ಲಿ. ಕಂಪನಿಯ ಶಿಲಾನ್ಯಾಸ ನೆರವೇರಿಸಿ ಅವರು ಸುದ್ದಿಗಾರರ ಜತೆ ಮಾತಾಡಿದರು.

ಹಿರಿಯೂರು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುತ್ತೀರಾ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವರು; ಜೆಡಿಎಸ್, ಬಿಜೆಪಿ ಎಂಬ ವಿಚಾರವಲ್ಲ. ನಮ್ಮೆಲ್ಲರ ಒಪ್ಪಿಗೆಯ NDA ಅಭ್ಯರ್ಥಿ ಕಣಕ್ಕೆ ಇಳಿಯುತ್ತಾರೆ. ಹಿರಿಯೂರಿನಲ್ಲಿ ಜೆಡಿಎಸ್ ಗೆ ಸೇರಿದ NDA ಅಭ್ಯರ್ಥಿ ಸ್ಪರ್ಧೆ ಮಾಡಬೇಕು ಎಂದು ಸಾಕಷ್ಟು ಒತ್ತಾಯ ಇದೆ. ಈ ಹಿಂದೆ ಹಿರಿಯೂರಿನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರಾನೇರ ಪೈಪೋಟಿ ನಡೆದಿತ್ತು.

ಕೇವಲ 1200 ಮತಗಳ ಅಂತರದಿಂದ ಜೆಡಿಎಸ್ ಅಭ್ಯರ್ಥಿ ಸೋಲು ಅನುಭವಿಸಿದ್ದರು. ಈ ಬಾರಿ ಮಾತುಕತೆ ನಡೆಸಿ ತೀರ್ಮಾನ ಮಾಡಲಾಗುತ್ತದೆ. ಅಲ್ಲಿ NDA ಅಭ್ಯರ್ಥಿ ಗೆಲ್ಲುವುದು ಗ್ಯಾರಂಟಿ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

ಸ್ಟಿಂಗ್; ಯಾರಿಗೆ ಕ್ಲಿನ್ ಚಿಟ್ ಕೊಡುತ್ತಾರೋ ನೋಡೋಣ

ರಾಜ್ಯದಲ್ಲಿ ನಡೆಯುತ್ತಿರುವ ಸ್ಟಿಂಗ್ ತನಿಖೆಗೆ ಸಂಬಂಧಿಸಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು; ಸ್ಟಿಂಗ್ ಆಪರೇಷನ್ ಮಾಡಿದವರಲ್ಲಿ ಒಬ್ಬರಾದ ಕ್ಲೀನ್ ಚಿಟ್ ಕೊಡುತ್ತಾರೋ ಅಥವಾ ಅದೇ ಕಾರ್ಯಾಚರಣೆಯಲ್ಲಿ ಇರುವ ಇನ್ನೊಬ್ಬ ವ್ಯಕ್ತಿಗೆ ಕೊಡುತ್ತಾರೋ ಕಾದು ನೋಡೋಣ. ಕೇರಳದ ಹೆಣ್ಣು ಮಗಳಿಗೆ ₹4 ಲಕ್ಷ ಯಾಕೆ ಕೊಟ್ಟಿದ್ದೀರಿ ಅನ್ನೋದು ಪೊಲೀಸರ ಪ್ರಶ್ನೆ. ಎಲ್ಲವನ್ನೂ ನಾನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ ಎಂದು ಸಚಿವರು ಹೇಳಿದರು.

ಹಾಲಿ ಮುಖ್ಯಮಂತ್ರಿ ಹೇಳಿದ್ದಾರೆ, ಅವರು ಬಹಳ ಕಷ್ಟಪಟ್ಟು ಸಿಎಂ ಆಗಿದ್ದಾರಂತೆ. ಅನೇಕರು ಮುಖ್ಯಮಂತ್ರಿಗಳು ಆಗುವುದಕ್ಕೆ ತಮ್ಮ ಶ್ರಮವನ್ನು ಧಾರೆ ಎರೆದಿದ್ದಾರಂತೆ! ನಾನು ಸಿಎಂ ಆಗಬೇಕಾದರೆ ಅವರ ಪಕ್ಷದ ಯಾರಿಗೂ ಸಿಎಂ ಮಾಡಿ ಎಂದು ಅರ್ಜಿ ಹಾಕಿರಲಿಲ್ಲ. ಅವರೇ ಬಂದು ಸಿಎಂ ಮಾಡಿಕೊಂಡರು. ನಾನು ಸಿಎಂ ಆಗಿದ್ದಾಗ ರೈತರ ಸಾಲ ಮನ್ನಾ ಮಾಡಿದೆ. ರೈತರ ಸಾಲ ಮನ್ನಾ ಮಾಡಿದೆ ಎಂದು ಸುಮ್ಮನೆ ಇರಲಿಲ್ಲ. ಅಭಿವೃದ್ಧಿ ಕೆಲಸಗಳನ್ನು ಮಾಡಿದೆ. ಒಂದು ಕ್ಷೇತ್ರಕ್ಕೆ ಸುಮಾರು ₹500 ಕೋಟಿ ಹಣವನ್ನ ಅಭಿವೃದ್ಧಿಗೆ ಕೊಟ್ಟಿದಿನಿ. ಇವರ ಮೇಲೆ ನಾನು ಯಾಕೆ ಅಸೂಯೆಪಡಲಿ ಎಂದು ಕೇಂದ್ರ ಸಚಿವರು ತಿರುಗೇಟು ಕೊಟ್ಟರು.

ಸಿಎಂ ಸ್ಥಾನ ನನ್ನಪ್ಪನ ಮನೆ ಆಸ್ತಿನಾ? ನನಗೆ ಸಿಎಂ ಸ್ಥಾನ ದೊರಕಿದಾಗ ಹೇಗೆ ಕೆಲಸ ಮಾಡಬಹುದು ಎಂದು ತೋರಿಸಿದ್ದೇನೆ. ನಾನು ಅನ್ಯಾಯ ಅಕ್ರಮ ವಿರುದ್ದ ಧ್ವನಿ ಎತ್ತದೆ ಇದ್ದರೆ ಹೇಗೆ? ಕುಮಾರಸ್ವಾಮಿಗೆ ಸುಳ್ಳೆ ಮನೆ ದೇವರು ಎಂದು ಹೇಳುತ್ತಾರೆ. ಹಾಗಾದರೆ ಅವರ ಮನೆ ದೇವರು ಯಾರು? ಮಂಗಳೂರಿಗೆ ಹೋಗಿ ₹32,000 ಕೋಟಿ ಘೋಷಣೆ ಮಾಡಿದ್ದು ನಿಜ ಅಲ್ಲವಾ? ಅದಕ್ಕೆ ಹಣ ಇದೆಯಾ? ಎಂದು ಅವರು ಪ್ರಶ್ನಿಸಿದರು.

ಮಂಡ್ಯದಲ್ಲಿ ಇವಿ ಟೆಸ್ಟಿಂಗ್ ಸೆಂಟರ್ ಮಾಡುವುದಕ್ಕೆ ಜಾಗ ಕೊಡಿ ಎಂದು ಕೇಳಿದೆ. 100 ಎಕರೆ ಕೊಟ್ಟಿದ್ದೇವೆ ಎಂದು ಸುಳ್ಳು ಹೇಳಿದರು. ಭೂಮಿ ಮಂಜೂರಾತಿಯ ಪತ್ರವನ್ನೇ ಕೊಡದೆ ಜಾಗ ಕೊಟ್ಟಿದ್ದೇವೆ ಎಂದು ಸುಳ್ಳು ಹೇಳಿ ಜನರಿಗೆ ತಪ್ಪು ಮಾಹಿತಿ ನೀಡಿದ್ದು ಯಾರು? ಎಂದು ಸಚಿವ ಕುಮಾರಸ್ವಾಮಿ ಅವರು ಕೇಳಿದರು.

ರಾಮನಗರದಲ್ಲಿ ಉಪ ತಹಶಿಲ್ದಾರ್ ₹15,000 ಲಂಚ ತೆಗೆದುಕೊಳ್ಳುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ರಾಜ್ಯದಲ್ಲಿ ಯಾವ ಮಟ್ಟಕ್ಕೆ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದನ್ನು ನೋಡಿ. ಈ ಮುಖ್ಯಮಂತ್ರಿ ನೋಡಿದರೆ ಯಾರಾದರೂ ಲಂಚ ಕೇಳಿದರೆ ದೂರು ಕೊಡಿ ಎಂದು ಹೇಳುತ್ತಾರೆ ಎಂದು ಅವರು ಲೇವಡಿ ಮಾಡಿದರು.

ನನ್ನ ಖಾತೆಯ ಬಗ್ಗೆ ಕಾಂಗ್ರೆಸ್ಸಿಗರಿಗೆ ತಿಳಿವಳಿಕೆ ಇಲ್ಲ

ಕಾಂಗ್ರೆಸ್ ನಾಯಕರಿಗೆ ಜ್ಞಾನವೇ ಇಲ್ಲ. ಕೇಂದ್ರದಲ್ಲಿ ನಾನು ನಿರ್ವಹಣೆ ಮಾಡುತ್ತಿರುವ ಖಾತೆಗಳ ಬಗ್ಗೆ ತಿಳಿವಳಿಕೆ ಇಲ್ಲ. ಕೇಂದ್ರ ಮಂತ್ರಿಯಾಗಿ ರಾಜ್ಯಕ್ಕೆ ಕುಮಾರಸ್ವಾಮಿ ರಾಜ್ಯ ಏನೂ ಕೊಡುಗೆ ನೀಡಿಲ್ಲ ಎಂದು ಕಾಂಗ್ರೆಸ್ ನಾಯಕರ ಆರೋಪ ಹಾಸ್ಯಾಸ್ಪದ. ಕೈಗಾರಿಕೆಗಳನ್ನು ತರುವುದು, ಹೂಡಿಕೆ ಆಕರ್ಷಿಸುವುದು ರಾಜ್ಯದ ಹೊಣೆಗಾರಿಕೆ. ಕೇಂದ್ರದ ಬೃಹತ್ ಕೈಗಾರಿಕೆ ಇಲಾಖೆಯ ಕೆಲಸ ನೀತಿಗಳನ್ನು ರೂಪಿಸುವುದು, ಉತ್ಪಾದನಾ ಉತ್ತೇಜಕ ಯೋಜನೆಗಳನ್ನು ಅನುಷ್ಠಾನಕ್ಕೆ ತರುವುದು. ಕೈಗಾರಿಕೆಗಳನ್ನು ತರುವುದಿಲ್ಲ, ಕೊಡುವುದಿಲ್ಲ. ಹೋಗಲಿ, ನಮಗೆ ಇಂತಹ ಸೌಲಭ್ಯ ಕೊಡಿ ಎಂದು ಇವರು ಯಾರೂ ಕೂಡ ಬಂದು ಕೇಳಿಲ್ಲ ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.

ನೆರೆ ರಾಜ್ಯಗಳಾದ ತಮಿಳುನಾಡು, ಆಂಧ್ರದಲ್ಲಿ ಕೈಗಾರಿಕಾ ನೀತಿಯನ್ನು ನೋಡಿ ಇವರು ಕಲಿಯಬೇಕಿದೆ. ₹100 ಕೋಟಿ ಹೂಡಿಕೆ ಮಾಡಿದ ಉದ್ಯಮಿಗಳಿಗೆ 50% ಸಬ್ಸಿಡಿ ಕೊಡುತ್ತಾರೆ. ರಾಜ್ಯದಲ್ಲಿ ಅಂತಹ ಸೌಲಭ್ಯವಿಲ್ಲ. ಇನ್ನು ಕೈಗಾರಿಕೆಗಳು ಬರಲಿಲ್ಲ ಎಂದರೆ ಹೇಗೆ? ಎಂದು ಅವರು ಪ್ರಶ್ನಿಸಿದರು. ಇದಕ್ಕೂ ಮೊದಲು ಸಚಿವ ಕುಮಾರಸ್ವಾಮಿ ಅವರು ಆದರ್ಶ ಸ್ಪೆಷಲಿ ಕೆಮಿಕಲ್ ಕಾರ್ಖಾನೆಗೆ ವಸಂತಪುರದ ಕೈಗಾರಿಕಾ ಪ್ರದೇಶದಲ್ಲಿ ಬಗ್ಗೆ ಭೂಮಿಪೂಜೆ ನೆರವೇರಿಸಿದರು.

RELATED ARTICLES

Latest News