Homeಆರೋಗ್ಯ / ಜೀವನಶೈಲಿಡಿಜಿಟಲ್ ಹೆಲ್ತ್ ಕ್ಷೇತ್ರಕ್ಕೆ ಲಗ್ಗೆ ಇಟ್ಟ ಹ್ಯಾಪಿಯೆಸ್ಟ್ ಹೆಲ್ತ್, ಬರೋಬ್ಬರಿ ₹500 ಕೋಟಿ ಹೂಡಿಕೆ ಘೋಷಣೆ

ಡಿಜಿಟಲ್ ಹೆಲ್ತ್ ಕ್ಷೇತ್ರಕ್ಕೆ ಲಗ್ಗೆ ಇಟ್ಟ ಹ್ಯಾಪಿಯೆಸ್ಟ್ ಹೆಲ್ತ್, ಬರೋಬ್ಬರಿ ₹500 ಕೋಟಿ ಹೂಡಿಕೆ ಘೋಷಣೆ

ಬೆಂಗಳೂರು: ಆರೋಗ್ಯ ಮತ್ತು ಸ್ವಾಸ್ಥ್ಯ ಕ್ಷೇತ್ರದ ಪ್ರಮುಖ ಸಂಸ್ಥೆಯಾದ ಹ್ಯಾಪಿಯೆಸ್ಟ್ ಹೆಲ್ತ್ ತನ್ನ ಐದನೇ ಉದ್ಯಮ ಘಟಕವಾದ ‘ಹ್ಯಾಪಿಯೆಸ್ಟ್ ಡಿಜಿಟಲ್ ಹೆಲ್ತ್ʼಗೆ ನವೆಂಬರ್‌ 12ರಂದು ಗುರುವಾರ ಚಾಲನೆ ನೀಡಿದೆ. ಕ್ಲಿನಿಕ್‌ಗಳ ಹೊರತಾಗಿಯೂ ಜನರಿಗೆ ನಿರಂತರ ಮತ್ತು ಸಮಗ್ರ ಆರೋಗ್ಯ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಸಂಸ್ಥೆಯು ಮುಂದಿನ 18 ತಿಂಗಳಲ್ಲಿ 11 ಹೊಸ ಡಿಜಿಟಲ್ ಅಪ್ಲಿಕೇಶನ್‌ಗಳನ್ನು ಬಿಡುಗಡೆ ಮಾಡುವ ಯೋಜನೆಯನ್ನು ಘೋಷಿಸಿದೆ.

ತಂತ್ರಜ್ಞಾನಕ್ಕೆ 500 ಕೋಟಿ ರೂ. ಹೂಡಿಕೆ

ಡಿಜಿಟಲ್ ಆರೋಗ್ಯ ಕ್ಷೇತ್ರವನ್ನು ಬಲಪಡಿಸಲು ಸಂಸ್ಥೆಯು ಮುಂದಿನ 5 ವರ್ಷಗಳಲ್ಲಿ ಕೇವಲ ತಂತ್ರಜ್ಞಾನ ಮತ್ತು ಅದರ ಮೂಲಸೌಕರ್ಯಕ್ಕಾಗಿ ಬರೋಬ್ಬರಿ 500 ಕೋಟಿ ರೂ. ಹೂಡಿಕೆ ಮಾಡುವುದಾಗಿ ಘೋಷಿಸಿದೆ. ಇದರಲ್ಲಿ ಶೇ. 50ರಷ್ಟು ಹಣವನ್ನು ಡಿಜಿಟಲ್ ಹೆಲ್ತ್ ವಿಭಾಗಕ್ಕಾಗಿಯೇ ಮೀಸಲಿಡಲಾಗುವುದು ಎಂದು ಸಂಸ್ಥೆಯ ಸಹ-ಅಧ್ಯಕ್ಷ ಮತ್ತು ಸಿಒಒ ಡೇವಿಸ್ ಕರೆಡನ್ ತಿಳಿಸಿದರು.

ದೇಶದ ನಂಬರ್ ಒನ್ ಡಿಜಿಟಲ್ ಹೆಲ್ತ್ ಸಂಸ್ಥೆಯಾಗುವ ಗುರಿ

ಈ ಕುರಿತು ಮಾತನಾಡಿದ ಹ್ಯಾಪಿಯೆಸ್ಟ್ ಹೆಲ್ತ್‌ನ ಅಧ್ಯಕ್ಷ ಮತ್ತು ಮುಖ್ಯ ಕಾರ್ಯತಂತ್ರ ಅಧಿಕಾರಿ ಅಶೋಕ್ ಸೂಟಾ, “ಡಿಜಿಟಲ್ ಹೆಲ್ತ್ ಇಂದು ಆರೋಗ್ಯ ಕ್ಷೇತ್ರದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಿಭಾಗವಾಗಿದೆ. 2033ರ ವೇಳೆಗೆ ಜಾಗತಿಕವಾಗಿ ಇದರ ಮಾರುಕಟ್ಟೆ 1.8 ಟ್ರಿಲಿಯನ್ ಡಾಲರ್ ತಲುಪುವ ನಿರೀಕ್ಷೆಯಿದೆ. ಪ್ರಸ್ತುತ ಈ ಮಾರುಕಟ್ಟೆ ಹಲವು ಕಂಪನಿಗಳ ನಡುವೆ ಹಂಚಿಹೋಗಿದ್ದು, ಗ್ರಾಹಕರು ಪ್ರತಿಯೊಂದು ಸೇವೆಗೂ ಬೇರೆಬೇರೆ ವೇದಿಕೆಗಳನ್ನು ಅವಲಂಬಿಸಬೇಕಾಗಿದೆ. ಆದರೆ ನಾವು ಎಲ್ಲಾ ಸೇವೆಗಳನ್ನು ಒಂದೇ ಸೂರಿನಡಿ ತರುವ ಮೂಲಕ ದೇಶದ ನಂಬರ್ ಒನ್ ಡಿಜಿಟಲ್ ಹೆಲ್ತ್ ಸಂಸ್ಥೆಯಾಗುವ ಗುರಿ ಹೊಂದಿದ್ದೇವೆ,” ಎಂದರು.

ಹೊಸ ಆ್ಯಪ್‌ಗಳ ಕುರಿತು ಮಾಹಿತಿ ನೀಡಿದ ಡಿಜಿಟಲ್ ಹೆಲ್ತ್ ವಿಭಾಗದ ಅಧ್ಯಕ್ಷ ಮತ್ತು ಸಿಇಒ ರವಿ ಜೋಶಿ, ಭಾರತದಲ್ಲಿ ಸುಮಾರು 10 ಕೋಟಿ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಇದನ್ನು ನಿಯಂತ್ರಿಸಲು ವೈದ್ಯರ ಮಾರ್ಗದರ್ಶನ ಮತ್ತು ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಗ್ಲೂಕೋಸ್ ಮಾನಿಟರಿಂಗ್ ತಂತ್ರಜ್ಞಾನ ಹೊಂದಿರುವ ‘ಡಯಾಬೀಟರ್’ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದರು.

ಕೋಲೋನ್-ಇ (ColonE) ಎಂಬ ಮತ್ತೊಂದು ಆ್ಯಪ್ ಅನ್ನೂ ತಯಾರಿಸಲಾಗಿದೆ. ಇದರ ಬಗ್ಗೆ ವಿವರ ನೀಡಿದ ಅವರು, “ನಮ್ಮ ಕರುಳಿನಲ್ಲಿರುವ ಕೋಟ್ಯಂತರ ಸೂಕ್ಷ್ಮಾಣುಜೀವಿಗಳು ಜೀರ್ಣಕ್ರಿಯೆ ಮತ್ತು ರೋಗನಿರೋಧಕ ಶಕ್ತಿಯ ಮೇಲೆ ಪ್ರಭಾವ ಬೀರುತ್ತವೆ. ಇಂದಿನಿಂದ ದೇಶಾದ್ಯಂತ ಲಭ್ಯವಾಗುತ್ತಿರುವ ‘ಕೋಲೋನ್-ಇ’ ಪರೀಕ್ಷೆಯು ಕೇವಲ ಒಂದು ಸಣ್ಣ ಮಲದ ಮಾದರಿಯ ಮೂಲಕ ಕರುಳಿನ ಸೂಕ್ಷ್ಮಾಣುಜೀವಿಗಳ ಡಿಎನ್‌ಎ ವಿಶ್ಲೇಷಿಸುತ್ತದೆ. ಇದರಿಂದ ಸಂಗ್ರಹವಾಗುವ ಸುಮಾರು 5 ಜಿಬಿ ದತ್ತಾಂಶವನ್ನು ಸರಳ ವರದಿಯನ್ನಾಗಿ ಪರಿವರ್ತಿಸಿ, ಪೌಷ್ಠಿಕ ತಜ್ಞರ ಮೂಲಕ ಆಹಾರ ಮತ್ತು ಜೀವನಶೈಲಿಯ ಬದಲಾವಣೆಗೆ ಸಲಹೆ ನೀಡಲಾಗುತ್ತದೆ,” ಎಂದು ಮಾಹಿತಿ ನೀಡಿದರು.

ಇದು ಕೇವಲ ಸ್ವಾಸ್ಥ್ಯಕ್ಕೆ ಸಂಬಂಧಿಸಿದ ಪರೀಕ್ಷೆಯಾಗಿದ್ದು, ರೋಗನಿರ್ಣಯದ ಪರೀಕ್ಷೆಯಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. ಮುಂದಿನ ಹಂತದಲ್ಲಿ ಮಕ್ಕಳ ಆರೋಗ್ಯಕ್ಕಾಗಿ ‘ಪೀಡಿಯಾಟ್ರಿಕ್ ಎಕ್ಸ್‌ಪರ್ಟ್’ಮತ್ತು ಹೃದಯದ ಆರೋಗ್ಯಕ್ಕಾಗಿ ‘ಕಾರ್ಡಿಯೋ ಎಕ್ಸ್‌ಪರ್ಟ್’ ಎಂಬ ವಿಶೇಷ ಎಐ ಆಧಾರಿತ ಆ್ಯಪ್‌ಗಳನ್ನು ಪರಿಚಯಿಸಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಅಶೋಕ್ ಸೂಟಾ ಅವರಿಂದ ಸ್ಥಾಪಿಸಲ್ಪಟ್ಟ ಹ್ಯಾಪಿಯೆಸ್ಟ್ ಹೆಲ್ತ್ ಸಂಸ್ಥೆಯು ವಿಶಿಷ್ಟ ಕ್ಲಿನಿಕ್‌ಗಳು, ವೆಲ್‌ನೆಸ್ ಕೇಂದ್ರಗಳು, ಅತ್ಯಾಧುನಿಕ ಡಯಾಗ್ನೋಸ್ಟಿಕ್ಸ್, ಡಿಜಿಟಲ್ ಹೆಲ್ತ್ ಮತ್ತು ಆರೋಗ್ಯ ಜ್ಞಾನದ (ಮ್ಯಾಗಜೀನ್, ಪಾಡ್‌ಕಾಸ್ಟ್, ಹೆಲ್ತ್ ಸಮ್ಮಿಟ್) ಮೂಲಕ ಸಮಗ್ರ ಆರೋಗ್ಯ ಸೇವೆಗಳನ್ನು ನೀಡುತ್ತಿದೆ.

ಬೆಂಗಳೂರಿನ ಇಂದಿರಾನಗರ, ವೈಟ್‌ಫೀಲ್ಡ್, ಜಯನಗರ ಮತ್ತು ಕೋರಮಂಗಲದಲ್ಲಿ ಈಗಾಗಲೇ ವಿವಿಧ ಸೇವೆಗಳನ್ನು ನೀಡುತ್ತಿರುವ ಸಂಸ್ಥೆಯು, ಶೀಘ್ರದಲ್ಲೇ ಜೆ.ಪಿ. ನಗರದಲ್ಲಿ ಸರ್ಜಿಕಲ್ ಸ್ಪೆಷಾಲಿಟಿ ಸೆಂಟರ್ ಮತ್ತು ಕೋರಮಂಗಲದಲ್ಲಿ ನರವಿಜ್ಞಾನ ಹಾಗೂ ಮಾನಸಿಕ ಆರೋಗ್ಯಕ್ಕಾಗಿ ‘ಬ್ರೈನ್‌ಸ್ಪಿಯರ್’ ಕೇಂದ್ರವನ್ನು ಆರಂಭಿಸಲಿದೆ.

RELATED ARTICLES

Latest News