ಬೆಂಗಳೂರು,ಸೆ.27- ಸಂಕಷ್ಟದಲ್ಲಿ ರುವ ರೈತರ ಸಮಸ್ಯೆಗಳನ್ನು ಆಲಿಸುವುದು ಹಾಗೂ ಸರ್ಕಾರವನ್ನು ಎಚ್ಚರಿಸುವ ಉದ್ದೇಶದಿಂದ ಜೆಡಿಎಸ್ ನಾಳೆಯಿಂದ ರೈತ ಸ್ವಾಭಿಮಾನಿ ಯಾತ್ರೆಯನ್ನು ಹಮಿಕೊಳ್ಳಲಿದೆ. ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಈ ಸ್ವಾಭಿಮಾನಿ ಯಾತ್ರೆಯನ್ನು ನಡೆಸಲು ಉದ್ದೇಶಿಸಿದ್ದು, ನಾಳೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ತವರು ಕ್ಷೇತ್ರ ಕನಕಪುರದಲ್ಲಿ ಈ ಯಾತ್ರೆಗೆ ಅಧಿಕೃತ ಚಾಲನೆ ನೀಡಲು ಉದ್ದೇಶಿಸಿದೆ.
ಸಂಕಷ್ಟದಲ್ಲಿರುವ ರೈತರ ಸಂಪೂರ್ಣ ಕೃಷಿ ಸಾಲಮನ್ನಾ ಮಾಡಬೇಕು. ಪ್ರತಿ ಎಕರೆಗೆ 25 ಸಾವಿರ ರೂ. ಪರಿಹಾರ ಧನ ಬಿಡುಗಡೆ ಮಾಡಬೇಕು, ಕೃಷಿ ಪಂಪ್‌ಸೆಟ್‌ಗಳಿಗೆ 8 ಗಂಟೆ ಉಚಿತ ವಿದ್ಯುತ್ ಪೂರೈಸಬೇಕು. ಜಾನುವಾರುಗಳಿಗೆ ಉಚಿತ ಮೇವು ಹಾಗೂ ಕುಡಿಯುವ ನೀರು ಒದಗಿಸಬೇಕು ಎಂಬ ಬೇಡಿಕೆಗಳನ್ನು ಈಡೇರಿಸುವಂತೆ ಜೆಡಿಎಸ್ ರೈತ ಸ್ವಾಭಿಮಾನಿ ಯಾತ್ರೆಯನ್ನು ಕೈಗೊಳ್ಳಲಿದೆ.
ರೈತರ ಪರವಾಗಿ ಜೆಡಿಎಸ್ ಪಕ್ಷ ಇದ್ದು ಅವರ ಸಮಸ್ಯೆ ಪರಿಹಾರಕ್ಕೆ ಸದಾ ಹೋರಾಟ ಮಾಡಲಿದೆ ಎಂಬ ಸಂದೇಶವನ್ನು ನೀಡಲಿದೆ. ಪ್ರತಿ ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿ ಈ ಯಾತ್ರೆ ನಡೆಸಲಿದ್ದು, ಸ್ಥಳೀಯ ಸಮಸ್ಯೆ ಹಾಗೂ ಪರಿಸ್ಥಿತಿಗೆ ಅನುಗುಣವಾಗಿ ಪಾದಯಾತ್ರೆ, ಬಹಿರಂಗ ಸಮಾವೇಶ, ರ್ಯಾಲಿ ನಡೆಸುವುದು ಅಗತ್ಯಬಿದ್ದರೆ ಪ್ರತಿಭಟನೆ ಮಾಡುವ ಮೂಲಕ ರೈತರಿಗೆ ರೈತರಿಗೆ ಧೈರ್ಯ ತುಂಬುವ ಕೆಲಸವನ್ನು ಜೆಡಿಎಸ್ ಮಾಡಲಿದೆ.
ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಈ ಯಾತ್ರೆ ನಡೆಯಲಿದ್ದು, ರೈತರೊಂದಿಗೆ ಸಂವಾದ ನಡೆಸಿ ಅವರ ಸಮಸ್ಯೆಗಳನ್ನು ಆಲಿಸುವ ಉದ್ದೇಶ ಇಟ್ಟುಕೊಳ್ಳಲಾಗಿದೆ.
ನಾಳೆ ಬೆಳಿಗ್ಗೆ 9.30ಕ್ಕೆ ಕನಕಪುರದ ರೈಸ್‌ಮಿಲ್ ವೃತ್ತದಿಂದ ಚನ್ನಬಸಪ್ಪ ವೃತ್ತದವರೆಗೆ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಪಾದಯಾತ್ರೆ ನಡೆಸಲಾಗುತ್ತದೆ. ಬಳಿಕ ಬಹಿರಂಗ ಸಮಾವೇಶ ನಡೆಸುವ ಮೂಲಕ ರೈತರ ಪರವಾದ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಲಿದೆ. ಈ ಯಾತ್ರೆಯಲ್ಲಿ ಜೆಡಿಎಸ್ ನಾಯಕರು, ಸ್ಥಳೀಯ ನಾಯಕರು, ಕಾರ್ಯಕರ್ತರು ರೈತರೊಂದಿಗೆ ಭಾಗವಹಿಸಲಿದ್ದಾರೆ.
