Homeರಾಜ್ಯಕನ್ನಡ ಮಾತೃಭಾಷೆ ಎಂಬ ಕಾರಣಕ್ಕೆ ಉದ್ಯೋಗ ನಿರಾಕರಿಸುವಂತಿಲ್ಲ : ಸಚಿವ ತಂಗಡಗಿ ಎಚ್ಚರಿಕೆ

ಕನ್ನಡ ಮಾತೃಭಾಷೆ ಎಂಬ ಕಾರಣಕ್ಕೆ ಉದ್ಯೋಗ ನಿರಾಕರಿಸುವಂತಿಲ್ಲ : ಸಚಿವ ತಂಗಡಗಿ ಎಚ್ಚರಿಕೆ

ಬೆಂಗಳೂರ, ನ.4- ಕನ್ನಡ ಭಾಷೆಯನ್ನು ನಿರ್ಲಕ್ಷಿಸಿದರೆ ಸಹಿಸುವುದಿಲ್ಲ. ಕನ್ನಡ ಕೇವಲ ಮಾತನಾಡುವ ಭಾಷೆಯಾಗದೆ, ಉದ್ಯೋಗ ಹಾಗೂ ಬದುಕಿಗೆ ಆಸರೆಯಾಗುವ ಅನ್ನದ ಭಾಷೆಯಾಗಬೇಕು. ಕನ್ನಡ ಮಾತೃಭಾಷೆ ಎಂಬ ಕಾರಣಕ್ಕೆ ಉದ್ಯೋಗ ನಿರಾಕರಿಸುವ ಘಟನೆಗಳು ನಡೆದರೆ ಅಂತಹವರ ವಿರುದ್ಧ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಶಿವರಾಜ್‌ ಎಸ್‌‍. ತಂಗಡಗಿ ಎಚ್ಚರಿಕೆ ನೀಡಿದ್ದಾರೆ.

ಇತ್ತೀಚೆಗೆ ಮಹಿಳೆಯೊಬ್ಬರು ಕನ್ನಡ ಭಾಷೆಯಲ್ಲಿ ತಮ ವ್ಯಕ್ತಿ ಪರಿಚಯ ನೀಡಿದ ಕಾರಣಕ್ಕೆ ಉದ್ಯೋಗ ನೀಡಲು ನಿರಾಕರಿಸಲಾಗಿದೆ ಎಂದು ಆರೋಪಿಸಿರುವ ಘಟನೆ ಗಮನಕ್ಕೆ ಬಂದಿದೆ. ನಮ ಸರ್ಕಾರ ಇಂತಹ ಘಟನೆಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ.

ಮುಂದಿನ ದಿನಗಳಲ್ಲಿ ಕನ್ನಡ ಭಾಷೆಯನ್ನು ನಿರ್ಲಕ್ಷಿಸಿ ಕನ್ನಡಿಗರಿಗೆ ಉದ್ಯೋಗ ನಿರಾಕರಿಸುವ ಘಟನೆಗಳು ಮರುಕಳಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ಜಾನಪದ ಪರಂಪರೆಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ತಲುಪಿಸುವುದು ಸರ್ಕಾರದ ಬದ್ಧತೆಯಾಗಿದೆ.

ನಾಡಿನ ಮೂಲೆಮೂಲೆಗಳಲ್ಲಿರುವ ಕಲಾವಿದರು, ಸಾಹಿತಿಗಳು ಹಾಗೂ ಪ್ರತಿಭಾವಂತರಿಗೆ ಸೂಕ್ತ ವೇದಿಕೆ ಕಲ್ಪಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದು ತಿಳಿಸಿದ್ದಾರೆ.ರಾಜ್ಯೋತ್ಸವದಂದು ಕನ್ನಡದ ಬಾವುಟ ಹಾರಿಸಿ, ಘೋಷಣೆಗಳನ್ನು ಕೂಗುವುದಷ್ಟೇ ಕನ್ನಡಾಭಿಮಾನಕ್ಕೆ ಸೀಮಿತವಾಗಬಾರದು. ವರ್ಷದ 365 ದಿನಗಳೂ ಕನ್ನಡವನ್ನು ಪ್ರೀತಿಸಬೇಕು, ಬಳಸಬೇಕು ಹಾಗೂ ಬೆಳೆಸಬೇಕು. ಜಾತಿ, ಧರ್ಮ ಮತ್ತು ಪ್ರದೇಶದ ಭೇದಭಾವಗಳನ್ನು ಮರೆತು ಕನ್ನಡದ ಬಂಧದಲ್ಲಿ ನಾವೆಲ್ಲರೂ ಒಂದಾಗಬೇಕು ಎಂದು ಶಿವರಾಜ್‌ ತಂಗಡಗಿ ಕರೆ ನೀಡಿದ್ದಾರೆ.

RELATED ARTICLES

Latest News