Homeರಾಷ್ಟ್ರೀಯದೀಪಾವಳಿ ಉಡುಗೊರೆಯಾಗಿ ಉದ್ಯೋಗಿಗಳಿಗೆ ಐಫೋನ್‌ 16 ನೀಡಿದ ದೆಹಲಿ ಕಂಪನಿ : ವಿಡಿಯೋ ವೈರಲ್

ದೀಪಾವಳಿ ಉಡುಗೊರೆಯಾಗಿ ಉದ್ಯೋಗಿಗಳಿಗೆ ಐಫೋನ್‌ 16 ನೀಡಿದ ದೆಹಲಿ ಕಂಪನಿ : ವಿಡಿಯೋ ವೈರಲ್

ನವದೆಹಲಿ, ನ.4- ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ದೆಹಲಿ ಮೂಲದ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ಐಫೋನ್‌ 16 ಸ್ಮಾರ್ಟ್‌ಫೋನ್‌ಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ಗಮನ ಸೆಳೆದಿದೆ. ಕಂಪನಿಯ ಈ ವಿಶೇಷ ಉಡುಗೊರೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ನವದೆಹಲಿಯ ರೋಹಿಣಿ ಪ್ರದೇಶದಲ್ಲಿರುವ ಕಂಪನಿಯು ತನ್ನ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದೆ. ಕೇವಲ 15 ಸೆಕೆಂಡ್‌ಗಳ ಈ ವಿಡಿಯೋದಲ್ಲಿ ಉದ್ಯೋಗಿಗಳ ಮೇಜುಗಳ ಮೇಲೆ ವಿವಿಧ ಬಣ್ಣಗಳ ಐಫೋನ್‌ 16 ಮೊಬೈಲ್‌ಗಳನ್ನು ರಿಬ್ಬನ್‌ಗಳಿಂದ ಅಲಂಕರಿಸಿ ಇಡಲಾಗಿದೆ.

ಸಾಮಾನ್ಯವಾಗಿ ದೀಪಾವಳಿ ಸಂದರ್ಭದಲ್ಲಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಸಿಹಿತಿಂಡಿ, ಉಡುಗೊರೆಗಳ ಹ್ಯಾಂಪರ್‌ ಅಥವಾ ದಿನಬಳಕೆಯ ವಸ್ತುಗಳನ್ನು ನೀಡುವುದು ವಾಡಿಕೆ. ಆದರೆ ಈ ಕಂಪನಿಯು ದುಬಾರಿ ಸ್ಮಾರ್ಟ್‌ಫೋನ್‌ಗಳನ್ನು ಉಡುಗೊರೆಯಾಗಿ ನೀಡಿರುವುದು ಎಲ್ಲರ ಗಮನ ಸೆಳೆದಿದೆ.

ವಿಡಿಯೋ ಹಂಚಿಕೊಂಡಿರುವ ಕಂಪನಿಯು, ‘ಯಾವುದೇ ಸ್ಪರ್ಧೆಯಿಲ್ಲ, ನಿಮಗೆ ಏನು ಸಿಕ್ಕಿತು?’ ಎಂಬ ಅರ್ಥದ ಶೀರ್ಷಿಕೆ ನೀಡಿದೆ. ಈ ಪೋಸ್ಟ್‌ ಕೆಲವೇ ಸಮಯದಲ್ಲಿ ವೈರಲ್‌ ಆಗಿದ್ದು, ಕಂಪನಿಯ ಔದಾರ್ಯಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ವಿಡಿಯೋ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳು ನಡೆದಿವೆ. ಆರಂಭದಲ್ಲಿ ಕೆಲವರು ಇದು ನೈಜ ವಿಡಿಯೋವೇ ಅಥವಾ ಕೃತಕ ಬುದ್ಧಿಮತ್ತೆ (ಎಐ) ಮೂಲಕ ಸೃಷ್ಟಿಸಿದ್ದೇ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕಂಪನಿ, ವಿಡಿಯೋವನ್ನು ಮತ್ತೊಮ್ಮೆ ವೀಕ್ಷಿಸುವಂತೆ ಹೇಳಿ, ಇದು ಎಐ ಮೂಲಕ ಸೃಷ್ಟಿಸಿದ್ದಲ್ಲ ಎಂದು ಸ್ಪಷ್ಟಪಡಿಸಿದೆ.

ಇನ್ನು ಕೆಲವರು ಕಂಪನಿಯಲ್ಲಿ ಉದ್ಯೋಗಾವಕಾಶಗಳಿವೆಯೇ ಎಂದು ಪ್ರಶ್ನಿಸಿ, ತಮಗೂ ಅಲ್ಲಿ ಕೆಲಸ ಮಾಡಲು ಆಸೆಯಿದೆ ಎಂದು ತಮಾಷೆ ಮಾಡಿದ್ದಾರೆ. ಮತ್ತೊಬ್ಬರು ದೀಪಾವಳಿ ಸಂದರ್ಭದಲ್ಲಿ ಇಂತಹ ಉಡುಗೊರೆಗಳ ವಿಡಿಯೋಗಳನ್ನು ನೋಡಿದರೆ ಅಸೂಯೆಯಾಗುತ್ತದೆ. ಹೀಗಾಗಿ ಹಬ್ಬದ ಸಮಯದಲ್ಲಿ ಇನ್‌ಸ್ಟಾಗ್ರಾಂ ಬಳಸದಿರುವುದೇ ಉತ್ತಮ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.

RELATED ARTICLES

Latest News