Homeರಾಷ್ಟ್ರೀಯಗುವಾಹಟಿ ಹೋಟೆಲ್‌ನಲ್ಲಿ ಐವರ ಸಾವಿಗೆ ಕಾರಣವಾಗಿದ್ದ ಆರೋಪಿ ಎನ್‌ಕೌಂಟರ್‌ನಲ್ಲಿ ಫಿನಿಶ್‌

ಗುವಾಹಟಿ ಹೋಟೆಲ್‌ನಲ್ಲಿ ಐವರ ಸಾವಿಗೆ ಕಾರಣವಾಗಿದ್ದ ಆರೋಪಿ ಎನ್‌ಕೌಂಟರ್‌ನಲ್ಲಿ ಫಿನಿಶ್‌

ಗುವಾಹಟಿ, ನ.4- ಗುವಾಹಟಿಯ ಹೋಟೆಲ್‌ನಲ್ಲಿ ಐವರ ಸಾವಿಗೆ ಕಾರಣವಾಗಿದ್ದ ಗುಂಡಿನ ದಾಳಿ ಪ್ರಕರಣದ ಪ್ರಮುಖ ಆರೋಪಿ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ವೇಳೆ ಅಸ್ಸಾಂನ ಶಿವಸಾಗರ್ ಜಿಲ್ಲೆಯಲ್ಲಿ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ. ಮತ್ತೊಂದು ಪ್ರಕರಣದ ವಿಚಾರಣೆಗಾಗಿ ಆರೋಪಿಯನ್ನು ಶಿವಸಾಗರ್‌ಗೆ ಕರೆದೊಯ್ಯುತ್ತಿದ್ದಾಗ ಗೌರಿಸಾಗರ್ ಪ್ರದೇಶದಲ್ಲಿ ಎನ್‌ಕೌಂಟರ್ ನಡೆದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಾಪೋರಿ ಚೇಟಿಯಾ ತಿಳಿಸಿದ್ದಾರೆ.

ಘನಕಾಂತ ಗೊಗೊಯ್ (34) ಎಂಬಾತನನ್ನು 2024ರ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಸಾಗರ್ ಪೊಲೀಸರು ಬಂಧಿಸಿದ್ದರು. ಇದಕ್ಕೂ ಕೆಲವೇ ಗಂಟೆಗಳ ಮೊದಲು ಗುವಾಹಟಿಯ ಹೋಟೆಲ್ ಗುಂಡಿನ ದಾಳಿ ಪ್ರಕರಣದಲ್ಲಿ ನ್ಯಾಯಾಲಯ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.

ಆರೋಪಿಯು ತರಬೇತಿ ಪಡೆದ ಶೂಟರ್ ಆಗಿದ್ದು, ವಿವಿಧ ರೀತಿಯ ಶಸ್ತ್ರಾಸ್ತ್ರಗಳನ್ನು ಬಳಸುವ ಅನುಭವ ಹೊಂದಿದ್ದ. ಮೂತ್ರ ವಿಸರ್ಜನೆಗಾಗಿ ಪೊಲೀಸ್ ವಾಹನದಿಂದ ಕೆಳಗಿಳಿದಾಗ ತನಿಖಾಧಿಕಾರಿಯ ಸರ್ವಿಸ್ ಪಿಸ್ತೂಲ್ ಕಸಿದುಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ನಡೆದ ತಳ್ಳಾಟದಲ್ಲಿ ನಮ್ಮ ಅಧಿಕಾರಿಯೊಬ್ಬರು ತೀವ್ರವಾಗಿ ಗಾಯಗೊಂಡರು. ಅಧಿಕಾರಿಯ ಜೀವ ರಕ್ಷಣೆಗಾಗಿ ಶಿವಸಾಗರ್ ಸದರ್ ಪೊಲೀಸ್ ಠಾಣೆಯ ಠಾಣಾಧಿಕಾರಿಯ ವೈಯಕ್ತಿಕ ಭದ್ರತಾ ಸಿಬ್ಬಂದಿ ಗುಂಡು ಹಾರಿಸಬೇಕಾಯಿತು ಎಂದು ಪಾಪೋರಿ ಚೇಟಿಯಾ ವಿವರಿಸಿದ್ದಾರೆ.

ಪೊಲೀಸರ ಗುಂಡೇಟಿನಿಂದ ಗಾಯಗೊಂಡ ಗೊಗೊಯ್‌ನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಗಾಯಗೊಂಡ ಪೊಲೀಸ್ ಅಧಿಕಾರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಗೊಗೊಯ್ ಅಪರಾಧ ಹಿನ್ನೆಲೆಯ ವ್ಯಕ್ತಿಯಾಗಿದ್ದು, ಪೊಲೀಸರಿಗೂ ಅಪಾಯಕಾರಿಯಾಗಿದ್ದ. ಆತ್ಮರಕ್ಷಣೆಗಾಗಿ ಠಾಣಾಧಿಕಾರಿಯ ಭದ್ರತಾ ಸಿಬ್ಬಂದಿ ಗುಂಡು ಹಾರಿಸಬೇಕಾಯಿತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ.

ಅಕ್ಟೋಬರ್ 26ರಂದು ಗುವಾಹಟಿಯ ಬೋರಾ ಸರ್ವಿಸ್ ಪ್ರದೇಶದಲ್ಲಿರುವ ಬಿಲಾಸ್ ಇನ್ ಹೋಟೆಲ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಉದ್ಯಮಿಯ ಕುಟುಂಬದ ನಾಲ್ವರು ಸೇರಿದಂತೆ ಐವರು ಮೃತಪಟ್ಟಿದ್ದರು. ಮತ್ತೊಬ್ಬರು ಗಾಯಗೊಂಡಿದ್ದರು. ಹೋಟೆಲ್ ನಿರ್ವಹಣೆಯ ವಿಚಾರವಾಗಿ ಆಸ್ತಿಯ ಮಾಲೀಕರು ಮತ್ತು ಗುತ್ತಿಗೆದಾರನ ನಡುವೆ ಉಂಟಾಗಿದ್ದ ವಿವಾದವೇ ಗುಂಡಿನ ದಾಳಿಗೆ ಕಾರಣ ಎನ್ನಲಾಗಿದೆ.

ಹೋಟೆಲ್‌ನ ಗುತ್ತಿಗೆದಾರನಾಗಿದ್ದ ಗೊಗೊಯ್‌ನನ್ನು ಘಟನೆ ನಡೆದ ಕೆಲವೇ ಸಮಯದಲ್ಲಿ ಬಂಧಿಸಲಾಗಿತ್ತು. ಕೃತ್ಯಕ್ಕೆ ಬಳಸಲಾಗಿದೆ ಎನ್ನಲಾದ ಪರವಾನಗಿ ಹೊಂದಿದ್ದ .32 ಬೋರ್ ಪಿಸ್ತೂಲ್‌ನ್ನೂ ಆತನಿಂದ ವಶಪಡಿಸಿಕೊಳ್ಳಲಾಗಿತ್ತು.

RELATED ARTICLES

Latest News