Homeರಾಜ್ಯನಾಳೆ ದೆಹಲಿಗೆ ಸಿಎಂ ಡಿಕೆಶಿ, ಸರ್ವಪಕ್ಷ ನಿಯೋಗ ಭೇಟಿಗೆ ಮೋದಿ-ಶಾಗೆ ಮನವಿ

ನಾಳೆ ದೆಹಲಿಗೆ ಸಿಎಂ ಡಿಕೆಶಿ, ಸರ್ವಪಕ್ಷ ನಿಯೋಗ ಭೇಟಿಗೆ ಮೋದಿ-ಶಾಗೆ ಮನವಿ

ಬೆಂಗಳೂರು, ಸೆ.27- ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಾಳೆ ದೆಹಲಿಗೆ ತೆರಳುತ್ತಿದ್ದು, ಸರ್ವಪಕ್ಷ ನಿಯೋಗ ಭೇಟಿಗೆ ಸಮಯ ನೀಡುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಮನವಿ ಸಲ್ಲಿಸಲಿದ್ದಾರೆ.

ರಾಜ್ಯದಲ್ಲಿ ಬರ ಪರಿಸ್ಥಿತಿ ತೀವ್ರವಾಗಿದ್ದು, 40 ಸಾವಿರ ಕೋಟಿ ರೂ.ಗಳಿಗೂ ಅಧಿಕವಾದ ಬೆಳೆ ನಷ್ಟವಾಗಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಈಗಾಗಲೇ ಪ್ರಧಾನ ಮಂತ್ರಿಯವರಿಗೆ ಪತ್ರ ಬರೆದು ಎನ್‌ಡಿಆರ್‌ಎಫ್‌ ನಿಯಮಾವಳಿಗಳ ಅನುಸಾರ 3,700 ಕೋಟಿ ರೂ.ಗಳಿಗೂ ಹೆಚ್ಚಿನ ಮಧ್ಯಂತರ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ. ಆದರೆ ಅದಕ್ಕೆ ಕೇಂದ್ರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ರಾಜ್ಯದಲ್ಲಿ 200ಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಇದ್ದು, ಪರಿಸ್ಥಿತಿ ಗಂಭೀರವಾಗಿದೆ. ಈ ಸಂದರ್ಭದಲ್ಲಿ ರೈತರ ನೆರವಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಧಾವಿಸಬೇಕು ಎಂಬ ಒತ್ತಾಯಗಳಿವೆ. ಕೃಷಿ ಸಾಲ ಮನ್ನಾ ಮಾಡಬೇಕೆಂಬುದು ಪ್ರಮುಖ ಬೇಡಿಕೆ. ಸಾಲ ಮನ್ನಾ ಮಾಡಲು ಅಸಾಧ್ಯ ಏನಲ್ಲ ಎಂದು ವಿಧಾನಸಭೆಯಲ್ಲೇ ಮುಖ್ಯಮಂತ್ರಿಯವರು ಪ್ರಸ್ತಾಪಿಸಿದ್ದಾರೆ. ಆದರೆ ಕೇಂದ್ರದ ಸಹಕಾರ ಅಗತ್ಯ ಎಂಬುದು ರಾಜ್ಯ ಸರ್ಕಾರದ ನಿಲುವು.

ದೇಶದಲ್ಲಿ 18 ರಾಜ್ಯಗಳಲ್ಲಿ ಬರ ಪರಿಸ್ಥಿತಿ ಇದೆ. ಈ ಬಾರಿಯ ಸೂಪರ್‌ ಎಲ್‌ ನಿನೊ ಎಲ್ಲಾ ಬರಗಳಿಗಿಂತಲೂ ಭಿನ್ನವಾಗಿದೆ. ವಿಶೇಷ ಪ್ರಕರಣ ಎಂದು ಪರಿಗಣಿಸಿ ಕೇಂದ್ರ ಸರ್ಕಾರ ರಾಜ್ಯಗಳಿಗೆ ತುರ್ತು ಪರಿಹಾರ ನೀಡಬೇಕು ಮತ್ತು ರೈತರ ಸಾಲ ಮನ್ನಾ ಮಾಡಲು ಸಹಕರಿಸಬೇಕೆಂಬುದು ರಾಜ್ಯ ಸರ್ಕಾರದ ಹಕ್ಕೊತ್ತಾಯ.

ಬರ ಮತ್ತು ಕಸ್ತೂರಿರಂಗನ್‌ ಕುರಿತು 4 ದಿನಗಳ ಕಾಲ ವಿಧಾನಮಂಡಲದಲ್ಲಿ ನಡೆದ ಚರ್ಚೆಯ ಬಳಿಕ ರಾಜ್ಯ ಸರ್ಕಾರ ಪ್ರತಿ ಎಕರೆ ಬೆಳೆ ನಷ್ಟಕ್ಕೆ 2,500 ರೂ.ಗಳ ನಷ್ಟ ಪಾವತಿಸುವುದಾಗಿ ಘೋಷಣೆ ಮಾಡಿದೆ. ಅದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ರಾಜ್ಯಕ್ಕೆ ಇನ್‌ಪುಟ್‌ ಸಬ್ಸಿಡಿ ನೀಡಬೇಕೆಂದು ರಾಜ್ಯದ ಆಗ್ರಹವಾಗಿದೆ.

ಜೊತೆಗೆ ಕಸ್ತೂರಿರಂಗನ್‌ ವರದಿ ಕುರಿತಂತೆ ರಾಜ್ಯ ಸರ್ಕಾರ ಪ್ರಬಲ ವಿರೋಧ ವ್ಯಕ್ತಪಡಿಸಿದೆ. ಶಾಸನ ಸಬೆಯಲ್ಲಿ ಪಕ್ಷಾತೀತವಾಗಿ ವರದಿಯ ಪರಿಣಾಮಗಳ ಬಗ್ಗೆ ಆತಂಕ ವ್ಯಕ್ತಪಡಿಸಲಾಗಿದೆ. ವರದಿಯನ್ನು ಯಥಾವತ್‌ ಜಾರಿಗೊಳಿಸುವ ಬದಲಾಗಿ ಪರಿಷ್ಕರಣೆ ಮಾಡಬೇಕೆಂಬುದು ಶಾಸನಸಭೆಯಲ್ಲಿ ಕೇಳಿ ಬಂದ ಹಕ್ಕೊತ್ತಾಯವಾಗಿತ್ತು.

ಈ ಕುರಿತು ವಿಧಾನಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಆದರೆ ಖುದ್ದಾಗಿ ಸರ್ವಪಕ್ಷ ನಿಯೋಗ ಪ್ರಧಾನಿಯವರನ್ನು ಮತ್ತು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವರನ್ನು ಭೇಟಿ ಮಾಡಿ ತನ್ನ ನಿಲುವನ್ನು ವ್ಯಕ್ತಪಡಿಸಲು ಮುಂದಾಗಿದೆ. ಇದಕ್ಕಾಗಿಯೂ ಸಮಯ ನೀಡುವಂತೆ ಕೇಳಲಾಗುತ್ತಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ಇತರೆಡೆಗಳಲ್ಲಿ ಮೂಲಭೂತ ಸೌಲಭ್ಯ ಅಭಿವೃದ್ಧಿಗಾಗಿ ಕೈಗೊಂಡಿರುವ ವಿವಿಧ ಯೋಜನೆಗಳಿಗೆ ಆರ್ಥಿಕ ನೆರವು, ರೈಲ್ವೆ ಯೋಜನೆಗಳಿಗೆ ಮೊದಲಿನಂತೆ ಶೇ.75:25ರ ಅನುಪಾತದ ನೆರವು ಒಳಗೊಂಡು ಮತ್ತಿತರ ಬೇಡಿಕೆಗಳನ್ನು ಮಂಡಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಈ ಎಲ್ಲಾ ವಿಚಾರಗಳನ್ನು ಚರ್ಚಿಸಲು ಸಮಯ ನೀಡುವಂತೆ ಪ್ರಧಾನಿ ಹಾಗೂ ಕೇಂದ್ರ ಸಚಿವರನ್ನು ಮುಖ್ಯಮಂತ್ರಿಯವರು ಒತ್ತಾಯಿಸುತ್ತಿದ್ದಾರೆ.ಎಐಸಿಸಿ ವತಿಯಿಂದ ನಾಳೆ ದೆಹಲಿಯಲ್ಲಿ ನಡೆಯುತ್ತಿರುವ ಕಾಂಗ್ರೆಸ್‌‍ ಕಾರ್ಯ ಕಾರಿಣಿಯಲ್ಲಿ ಭಾಗವಹಿಸಲು ದೆಹಲಿಗೆ ಭೇಟಿ ನೀಡುತ್ತಿರುವ ಡಿ.ಕೆ.ಶಿವಕುಮಾರ್‌ ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಪ್ರತಿನಿಧಿಗಳನ್ನು ಭೇಟಿ ಮಾಡಿ ಪ್ರಧಾನಿ ಹಾಗೂ ಕೇಂದ್ರ ಸಚಿವರ ಭೇಟಿಗೆ ಸಮಯ ನಿಗದಿ ಪಡಿಸುವಂತೆ ಲಾಬಿ ನಡೆಸಲಿದ್ದಾರೆ.

ವಿರೋಧ ಪಕ್ಷಗಳ ಪಟ್ಟು:
ಸರ್ವಪಕ್ಷ ನಿಯೋಗದಲ್ಲಿ ಆಗಮಿಸುವಂತೆ ಡಿ.ಕೆ.ಶಿವಕುಮಾರ್‌ ವಿರೋಧ ಪಕ್ಷಗಳಿಗೆ ಆಹ್ವಾನ ನೀಡಿದ್ದಾರೆ. ಆದರೆ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಹೆಚ್ಚು ಹೊಣೆಗಾರಿಯನ್ನು ವಹಿಸಿ ತಾನು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಹುನ್ನಾರ ನಡೆಸುತ್ತಿದೆ. ದೆಹಲಿಗೆ ನಿಯೋಗ ತೆರಳುವ ಮುನ್ನಾ ರಾಜ್ಯ ಸರ್ಕಾರ ಪ್ರತಿ ಎಕರೆ ಬೆಳೆ ನಷ್ಟಕ್ಕೆ 25 ಸಾವಿರ ರೂ. ಗಳ ಪರಿಹಾರ ಘೋಷಿಸಬೇಕು ಹಾಗೂ ಬೆಳೆ ಸಾಲವನ್ನು ಮನ್ನಾ ಮಾಡಬೇಕೆಂದು ಬಿಜೆಪಿ ಮತ್ತು ಜೆಡಿಎಸ್‌‍ ಪಕ್ಷಗಳು ಆಗ್ರಹಿಸಿವೆ.

ಬಹುಶಃ ಇದು ಕಷ್ಟಸಾಧ್ಯವಾಗಿರುವುದರಿಂದ ಸರ್ವಪಕ್ಷ ನಿಯೋಗದಲ್ಲಿ ತೆರಳಲು ಬಿಜೆಪಿ ನಿರಾಕರಿಸಬಹುದು ಎಂಬ ಚರ್ಚೆಗಳಿವೆ. ಕೊನೆಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯವರೇ ದೆಹಲಿಗೆ ಹೋಗಿ ಬರ ಪರಿಹಾರಕ್ಕೆ ನೆರವು ನೀಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲು ತಯಾರಿ ನಡೆಸುವ ಸಾಧ್ಯತೆಯೂ ಇದೆ.

RELATED ARTICLES
spot_img

Latest News