Homeರಾಜ್ಯರಾಜ್ಯದಲ್ಲಿ ಇಂದಿನಿಂದ ಮತದಾರರ ಪಟ್ಟಿ ಪರಿಷ್ಕರಣೆ ಆರಂಭ

ರಾಜ್ಯದಲ್ಲಿ ಇಂದಿನಿಂದ ಮತದಾರರ ಪಟ್ಟಿ ಪರಿಷ್ಕರಣೆ ಆರಂಭ

Voter list revision begins in the state from today

ಬೆಂಗಳೂರು, ಜೂ.30- ರಾಜ್ಯದಾದ್ಯಂತ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌‍ಐಆರ್‌) ಪ್ರಕ್ರಿಯೆ ಇಂದಿನಿಂದ ಆರಂಭ ವಾಗಿದ್ದು, ಜುಲೈ 29ರವರೆಗೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದು, ರಾಜ್ಯಾ ದ್ಯಂತ ಬೂತ್‌ ಮಟ್ಟದ ಅಧಿಕಾರಿ ಗಳು (ಬಿಎಲ್‌ಒ) ಮನೆಮನೆಗೆ ಭೇಟಿ ನೀಡಿ ಮತದಾರರ ಮಾಹಿತಿ ಪರಿಶೀಲನೆ ನಡೆಸಲಿದ್ದಾರೆ.

ಪ್ರಸ್ತುತ ರಾಜ್ಯದಲ್ಲಿ 5,54,32,314 ಮತದಾರರಿದ್ದು, ಇವರಲ್ಲಿ 5,07,79,810 ಮತದಾರರು ಈಗಾಗಲೇ ಮ್ಯಾಪಿಂಗ್‌ಗೆ ಒಳಪಟ್ಟಿದ್ದಾರೆ. ಇದು ಒಟ್ಟು ಮತದಾರರ 91.61 ಶೇಕಡಾ ಆಗಿದ್ದು, 46,52,504 ಮತದಾರರು ಇನ್ನೂ ಮ್ಯಾಪಿಂಗ್‌ನಿಂದ ಹೊರಗಿದ್ದಾರೆ.

ಈ ಕಾರ್ಯಕ್ಕಾಗಿ ರಾಜ್ಯದಾದ್ಯಂತ 59,050 ಬಿಎಲ್‌ಒಗಳು, 31 ಜಿಲ್ಲಾ ಚುನಾವಣಾಧಿಕಾರಿಗಳು, 4 ಅಪರ ಜಿಲ್ಲಾ ಚುನಾವಣಾಧಿಕಾರಿಗಳು, 224 ಮತದಾರರ ನೋಂದಣಾಧಿಕಾರಿಗಳು, 336 ಸಹಾಯಕ ಮತದಾರರ ನೋಂದಣಾಧಿಕಾರಿಗಳು, 7,556 ಬಿಎಲ್‌ಒ ಮೇಲ್ವಿಚಾರಕರು ಹಾಗೂ ರಾಜಕೀಯ ಪಕ್ಷಗಳಿಂದ ನೇಮಕಗೊಂಡಿರುವ 1,15,112 ಬೂತ್‌ ಮಟ್ಟದ ಏಜೆಂಟ್‌ಗಳು ಕಾರ್ಯನಿರ್ವಹಿಸಲಿದ್ದಾರೆ. ಬಿಎಲ್‌ಒಗಳಿಗೆ ಈಗಾಗಲೇ ಸಮಗ್ರ ತರಬೇತಿ ನೀಡಲಾಗಿದೆ.

ಎಸ್‌‍ಐಆರ್‌ ಪ್ರಕ್ರಿಯೆ ಹೇಗೆ ನಡೆಯಲಿದೆ? ಬಿಎಲ್‌ಒಗಳು ಮನೆಗಳಿಗೆ ಭೇಟಿ ನೀಡಿ ಎರಡು ನಿಗದಿತ ಅರ್ಜಿ ನಮೂನೆಗಳನ್ನು ನೀಡಲಿದ್ದಾರೆ. ಮತದಾರರು ಎರಡೂ ಪ್ರತಿಗಳನ್ನು ಭರ್ತಿ ಮಾಡಿ, ಒಂದು ಪ್ರತಿಯನ್ನು ತಮ್ಮ ದಾಖಲೆಯಾಗಿ ಇಟ್ಟುಕೊಂಡು ಮತ್ತೊಂದನ್ನು ಬಿಎಲ್‌ಒಗಳಿಗೆ ಹಿಂತಿರುಗಿಸಬೇಕು. ಇದೇ ವೇಳೆ ಹೊಸ ಮತದಾರರ ಹೆಸರು ಸೇರ್ಪಡೆ, ಹೆಸರು ಅಥವಾ ವಿಳಾಸ ತಿದ್ದುಪಡಿ ಸೇರಿದಂತೆ ಅಗತ್ಯ ಬದಲಾವಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಬಿಎಲ್‌ಒಗಳೊಂದಿಗೆ ರಾಜಕೀಯ ಪಕ್ಷಗಳ ನೋಂದಾಯಿತ ಬೂತ್‌ ಮಟ್ಟದ ಏಜೆಂಟ್‌ಗಳೂ ಭೇಟಿ ನೀಡಲಿದ್ದಾರೆ. ಅರ್ಜಿ ವಿತರಿಸಿದ ಬಳಿಕ ಮನೆಗೆ ಬಿಳಿ ಮತ್ತು ನೇರಳೆ ಬಣ್ಣದ ಸ್ಟಿಕರ್‌ ಅಂಟಿಸಲಾಗುತ್ತದೆ. ಮನೆಗೆ ಯಾರೂ ಇಲ್ಲದಿದ್ದರೆ ಬಿಳಿ ಮತ್ತು ಕೆಂಪು ಬಣ್ಣದ ಸ್ಟಿಕರ್‌ ಅಂಟಿಸಿ ಮತ್ತೆ ಭೇಟಿ ನೀಡಲಾಗುತ್ತದೆ. ಬಳಿಕ ಬಿಎಲ್‌ಒಗಳು ಸಂಗ್ರಹಿಸಿದ ಅರ್ಜಿಗಳನ್ನು ಸ್ಕ್ಯಾನ್‌ ಮಾಡಿ ಡಿಜಿಟಲ್‌ ರೂಪದಲ್ಲಿ ಚುನಾವಣಾ ಆಯೋಗದ ವ್ಯವಸ್ಥೆಯಲ್ಲಿ ದಾಖಲಿಸಲಿದ್ದಾರೆ.

RELATED ARTICLES

Latest News