ಬೆಂಗಳೂರು,ಜೂ.30- ಮಾದಕ ದ್ರವ್ಯಗಳ ಅಕ್ರಮ ಸಾಗಾಣಿಕೆ ತಡೆಗಟ್ಟುವ ವಿಶೇಷ ಅಭಿಯಾನವನ್ನು ತೀವ್ರಗೊಳಿಸಿರುವ ಪೊಲೀಸರು, ಕಳೆದ ಐದು ತಿಂಗಳಿನಲ್ಲಿ 184 ಕೋಟಿ ರೂ.ಮೌಲ್ಯದ ಡ್ರಗ್‌್ಸ ಸೀಜ್ ಮಾಡಿ 6651 ಪ್ರಕರಣಗಳನ್ನು ದಾಖಲಿಸಿ ಸಾಧನೆ ಮಾಡಿದ್ದಾರೆ. ನಗರದ ಕಂಠೀರವ ಕ್ರೀಡಾಂಗಣದಲ್ಲಿ ಅಂತರಾಷ್ಟ್ರೀಯ ಮಾದಕ ವಸ್ತುಗಳ ದುರುಪಯೋಗ ಮತ್ತು ಕಳ್ಳ ಸಾಗಾಣೆ ವಿರೋಧಿ ದಿನಾಚರಣೆ ಅಂಗವಾಗಿ ರಾಜ್ಯ ಸರ್ಕಾರವು ಆಪರೇಷನ್ ರೈಸ್
ಹಾಗೂ ಬೇಡ ಬ್ರೋ ಎಂಬ ಎರಡು ಮಹತ್ವದ ಉಪಕ್ರಮಗಳಿಗೆ ಚಾಲನೆ ನೀಡಿದೆ.
ಮಾದಕ ವಸ್ತು ಮಾರಾಟಗಾರರ ವಿರುದ್ಧ 1406 ಪ್ರಕರಣಗಳು ದಾಖಲಾದರೆ, ಖರೀದಿಸಿದ ಗ್ರಾಹಕರ ವಿರುದ್ಧ 5090 ಪ್ರಕರಣಗಳು ಹಾಗೂ ತಯಾರಕರ ವಿರುದ್ಧ 17 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಕಳೆದ ಜನವರಿಯಿಂದ ಮೇ 31 ರವರೆಗೆ ರಾಜ್ಯಾದ್ಯಂತ ಕಾರ್ಯಾಚರಣೆ ನಡೆಸಿ ಈ ದಾಖಲೆ ಮೊತ್ತದ ಮಾದಕ ವಸ್ತುಗಳನ್ನು ಜಪ್ತಿ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಅದೇ ರೀತಿ 2025 ರಲ್ಲಿ 216.93 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಆರೋಪಿಗಳ ವಿರುದ್ಧ 9064 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದರು. ಮಾರಾಟಗಾರರ ವಿರುದ್ಧ 2611 ಪ್ರಕರಣಗಳು ದಾಖಲಾದರೆ, ಗ್ರಾಹಕರ ವಿರುದ್ಧ 6455 ಪ್ರಕರಣಗಳು ಹಾಗೂ ತಯಾರಕರ ವಿರುದ್ಧ 41 ಪ್ರರಕಣಗಳು ದಾಖಲಾಗಿದ್ದವು.
ರಾಜ್ಯ ಸರ್ಕಾರವು ಡ್ರಗ್‌್ಸ ಮಾಫಿಯಾದ ವಿರುದ್ಧ ಶೂನ್ಯ ಸಹಿಷ್ಣತೆ ನೀತಿಯನ್ನು ಘೋಷಿಸಿದ್ದು, ರಾಜ್ಯವನ್ನು ಮಾದಕ ವಸ್ತು ಮುಕ್ತ ರಾಜ್ಯವನ್ನಾಗಿಸುವವರೆಗೆ ಈ ಹೋರಾಟ ನಿರಂತರವಾಗಿ ಮುಂದುವರೆಯಲಿದೆ ಎಂಬ ಸ್ಪಷ್ಟ ಸಂದೇಶ ರವಾನಿಸಿದೆ.
ವಿದ್ಯಾರ್ಥಿಗಳು, ಉದ್ಯೋಗಸ್ಥರು, ಯುವಜನತೆ, ರಾತ್ರಿ ಜೀವನ, ವಿದೇಶಿ ಪ್ರಜೆಗಳ ನೆಲೆಸುವಿಕೆ ಹಾಗೂ ಡಿಜಿಟಲ್ ಜಾಲಗಳ ಬಳಕೆ ಹೆಚ್ಚಿರುವ ಕಾರಣದಿಂದ ನಗರ ಪ್ರದೇಶಗಳು ಮಾದಕ ವಸ್ತುಗಳ ಚಟುವಟಿಕೆಗಳಿಗೆ ಹೆಚ್ಚು ತುತ್ತಾಗುತ್ತಿರುವ ಪ್ರದೇಶಗಳಾಗಿವೆ.
ಕಾನೂನು ಜಾರಿ ಸಂಸ್ಥೆಗಳ ವರದಿಗಳ ಪ್ರಕಾರ, ಕೃತಕ ಮಾದಕ ವಸ್ತುಗಳು, ಕೊರಿಯರ್ ಸೇವೆಗಳ ಮೂಲಕ ನಡೆಯುವ ಅಕ್ರಮ ಸಾಗಾಣೆ ಹಾಗೂ ವಿದೇಶಿ ಪ್ರಜೆಗಳ ಭಾಗವಹಿಸುವಿಕೆ ಸಂಬಂಧಿಸಿದ ಅನೇಕ ಪ್ರಕರಣಗಳು ಬೆಳಕಿಗೆ ಬಂದಿವೆ.
ಏನೀದು ಆಪರೇಷನ್ ರೈಸ್: ರೈಸ್ (ಆರ್‌ಐಎಸ್‌ಇ) ಎಂಬುವುದು ಆರ್-ರೆಫ್ಯೂಸ್(ನಿರಾಕರಣೆ), ಐ-ಇನ್‌ಫಾರ್ಮ್( ಮಾಹಿತಿ ನೀಡುವಿಕೆ), ಎಸ್-ಸಪೋರ್ಟ್(ಬೆಂಬಲ ನೀಡುವಿಕೆ), ಇ-ಎಮ್‌ಪವರ್(ಸಬಲೀಕರಣ) ಎಂಬ ತತ್ವಗಳ ಆಧಾರದ ಮೇಲೆ ರೂಪಿಸಲಾದ ವಿಶೇಷ ಉಪಕ್ರಮವಾಗಿದೆ.
ಇದು ಮಾದಕ ವಸ್ತುಗಳ ಮಾರಾಟ ಹಾಗೂ ಮಾದಕ ವ್ಯಸನವನ್ನು ಸಮಗ್ರ, ಸಂಘಟಿತ ಮತ್ತು ಸಮನ್ವಯಿತ ಕಾರ್ಯತಂತ್ರದ ಮೂಲಕ ಪರಿಣಾಮಕಾರಿಯಾಗಿ ನಿಯಂತ್ರಿಸುವ ಉದ್ದೇಶ ಹೊಂದಿದೆ.
ಮಾದಕ ವಸ್ತುಗಳ ಅಕ್ರಮ ಜಾಲಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು ಹಾಗೂ ಆರೋಗ್ಯಕರ , ಸುರಕ್ಷಿತ ಮತ್ತು ಮಾದಕ ವಸ್ತು ಮುಕ್ತ ಸಮಾಜ ನಿರ್ಮಿಸುವುದು ಆಪರೇಷನ್ ರೈಸ್‌ನ ಪ್ರಮುಖ ಧ್ಯೇಯವಾಗಿದೆ.
ಬೇಡಾ ಬ್ರೋ ಜಾಗೃತಿ ಅಭಿಯಾನ: ಮಾದಕ ವ್ಯಸನವನ್ನು ತಡೆಗಟ್ಟುವ ಮೂಲಕ ಯುವ ಜನರನ್ನು ಸಕ್ರಿಯವಾಗಿ ಶಿಕ್ಷಣ ಮತ್ತು ಸಮುದಾಯದ ಸಹಭಾಗಿತ್ವದಲ್ಲಿ ಜಾಗೃತಿ ಮೂಡಿಸುವುದೇ ಬೇಡಾ ಬ್ರೋ ಎಂಬ ಅಭಿಯಾನದ ಪ್ರಮುಖ ಧ್ಯೇಯವಾಗಿದೆ.
ಯುವ ಜನರಿಗೆ ಸುಲಭವಾಗಿ ಅರ್ಥವಾಗುವ, ಅವರ ಮನಸ್ಸಿಗೆ ಹತ್ತಿರವಾಗುವ ಹಾಗೂ ಯುವಸ್ನೇಹಿ ಸಂದೇಶಗಳ ಮೂಲಕ ಅರಿವು ಮೂಡಿಸುವುದರ ಜೊತೆಗೆ ಸ್ನೇಹಿತರ ಒತ್ತಡಕ್ಕೆ ಮಣಿಯದೆ ಮಾದಕ ವ್ಯಸನವನ್ನು ದೃಢವಾಗಿ ನಿರಾಕರಿಸುವ ಮನೋಭಾವವನ್ನು ಬೆಳೆಸಲು ಈ ಅಭಿಯಾನ ಪ್ರೇರೇಪಿಸುತ್ತದೆ.
ಯುವಜನರನ್ನು ಮಾದಕ ವ್ಯಸನ ವಿರೋಧಿ ರಾಯಭಾರಿಗಳಾಗಿ ಸಬಲೀಕರಣಗೊಳಿಸುವ ಮೂಲಕ ಆರೋಗ್ಯಕರ, ಸುರಕ್ಷಿತ ಹಾಗೂ ಮಾದಕ ವಸ್ತು ಮುಕ್ತ ಸಮಾಜ ನಿರ್ಮಿಸುವುದು ಬೇಡಾ ಬ್ರೋ ಅಭಿಯಾನದ ಪ್ರಮುಖ ಉದ್ದೇಶವಾಗಿದೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಾಯಕತ್ವದಲ್ಲಿ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಮಾರ್ಗದರ್ಶನದಲ್ಲಿ ಈ ಎರಡು ಉಪಕ್ರಮಗಳು ಜಾರಿಗೊಳ್ಳುತ್ತಿವೆ.
ಈ ದಿನಾಚರಣೆ ಅಂಗವಾಗಿ ನ್ಯಾಯಾಲಯದ ಅನುಮತಿ ಪಡೆದು ರಾಜ್ಯ ಪೊಲೀಸ್ ಇಲಾಖೆಯು ವಶಪಡಿಸಿಕೊಂಡಿರುವ 97.90 ಲಕ್ಷ ಮೌಲ್ಯದ 4276.405 ಕಿಲೋ ಗ್ರಾಂ ಮಾದಕ ವಸ್ತುಗಳನ್ನು ನಿಯಮಾನುಸಾರ ನಾಶಪಡಿಸಲಿದೆ.
ಮಾದಕ ಪಿಡುಗು ಮುಕ್ತ ಸಮಾಜಕ್ಕೆ ದೃಢ ನಿಶ್ಚಯ :ಸಮಾಜವನ್ನು ಮಾದಕ ದ್ರವ್ಯಗಳಿಂದ ಮುಕ್ತಗೊಳಿಸುವವರೆಗೂ ಈ ಸಮರವು ನಿಲ್ಲದು. ಈ ಪಿಡುಗನ್ನು ಎದುರಿಸಲು ಸರ್ಕಾರ ದೃಢ ನಿಶ್ಚಯಿಸಿದೆ.
ಮಾದಕ ವಸ್ತುಗಳ ಮಾರಾಟದಲ್ಲಿ ಭಾಗಿಯಾಗಿರುವ ಹಾಗೂ ವೀಸಾ ಅವಧಿ ಮುಗಿದರೂ ಅಕ್ರಮವಾಗಿ ರಾಜ್ಯದಲ್ಲಿ ನೆಲೆಸಿರುವ ವಿದೇಶಿ ಪ್ರಜೆಗಳ ಮೇಲೆ ಪರಿಣಾಮಕಾರಿ ನಿಗಾ ವಹಿಸುವ ಉದ್ದೇಶದಿಂದ ವಿಶೇಷ ಶೋಧ ಮತ್ತು ಪತ್ತೆಕಾರ್ಯಾಚರಣೆ ನಡೆಸಲಾಗಿದೆ.ಈ ಪರಿಣಾಮವಾಗಿ ವಿದೇಶಿಯರ ಕಾಯ್ದೆ ಉಲ್ಲಂಘನೆಗೆ ಸಂಬಂಧಿಸಿದಂತೆ 24 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಈ ಕ್ರಮವು ಮಾದಕ ವಸ್ತುಗಳ ಅಕ್ರಮ ಜಾಲಗಳನ್ನು ನಿರ್ಮೂಲನೆಗೊಳಿಸುವಲ್ಲಿ ಹಾಗೂ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯನ್ನು ಮತ್ತಷ್ಟು ಬಲ ಪಡಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ.
