ಮೈಸೂರು, ಜು.1- ತೋಟಕ್ಕೆ ನುಗ್ಗಿ ಅಡಕೆ, ತೆಂಗಿನಕಾಯಿ ಕಳವು ಮಾಡುವುದು ಸಾಮಾನ್ಯ. ಆದರೆ ಬರೋಬ್ಬರಿ 390ಕ್ಕೂ ಹೆಚ್ಚು ಅಡಕೆ ಹೊಂಬಾಳೆಯನ್ನು ಕದ್ದೊಯ್ದಿರುವ ಘಟನೆ ತಾಲೂಕಿನ ಕಳಲವಾಡಿ ಗ್ರಾಮದಲ್ಲಿ ನಡೆದಿದೆ.
ರವೀಂದ್ರ ರೆಡ್ಡಿ ಅವರಿಗೆ ಸೇರಿದ ಅಡಕೆ ತೋಟದಲ್ಲಿ ಕಳ್ಳರು ಸರಣಿ ಕೃತ್ಯ ಎಸಗಿದ್ದು, ಮೂರು ದಿನಗಳ ಅಂತರದಲ್ಲಿ 390ಕ್ಕೂ ಹೆಚ್ಚು ಹೊಂಬಾಳೆಗಳನ್ನು ಕತ್ತರಿಸಿ ಕೊಂಡೊಯ್ದಿದ್ದಾರೆ. ಈ ಸಂಬಂಧ ಮೈಸೂರು ದಕ್ಷಿಣ ಪೊಲೀಸ್ ಠಾಣೆಯ ಉಪನಿರೀಕ್ಷಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಪೊಲೀಸರ ಭೇಟಿ ಬಳಿಕವೂ ಕೂಡ ಕೃತ್ಯ ನಿಲ್ಲಿಸದ ದುಷ್ಕರ್ಮಿಗಳು ಮತ್ತೆ ತೋಟಕ್ಕೆ ನುಗ್ಗಿ 100 ಮರಗಳ ಹೊಂಬಾಳೆಯನ್ನು ಕದ್ದೊಯ್ದಿದ್ದಾರೆ.
ಒಟ್ಟು ಮೂರು ದಿನಗಳ ಅಂತರದಲ್ಲಿ 390 ಅಡಕೆ ಹೊಂಬಾಳೆಯನ್ನು ನಾಶ ಮಾಡಿದ್ದಾರೆ. ಇದರಿಂದ ರೈತ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.ಅಡಕೆ ಮರಗಳ ಬೆಳವಣಿಗೆ ಹಾಗೂ ಇಳುವರಿಗೆ ಹೊಂಬಾಳೆ ಪ್ರಮುಖವಾಗಿದ್ದು, ಇದನ್ನೇ ದುಷ್ಕರ್ಮಿಗಳು ಕತ್ತರಿಸಿರುವುದರಿಂದ ಮರಗಳ ಬೆಳವಣಿಗೆ ಕುಂಠಿತವಾಗಿ ಇಳುವರಿಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ರೈತ ಅಳಲು ತೋಡಿಕೊಂಡಿದ್ದಾರೆ.
ಸ್ಥಳೀಯರ ಪ್ರಕಾರ ಕಳ್ಳತನವಾಗಿರುವ ಹೊಂಬಾಳೆಯನ್ನು ಮದುವೆ ಸೇರಿದಂತೆ ಇತರೆ ಶುಭ ಸಂದರ್ಭದಲ್ಲಿ ಬಳಸಲಾಗುತ್ತದೆ. ಮಾರುಕಟ್ಟೆಯಲ್ಲಿ ಇದಕ್ಕೆ ಉತ್ತಮ ಬೆಲೆಯೂ ಇದೆ. ಸಾಮಾನ್ಯವಾಗಿ ಅಡಕೆ ಹೊಂಬು ಕಟ್ಟಿದ ಹೊಂಬಾಳೆಯನ್ನು ಯಾರೂ ಕೊಯ್ಲು ಮಾಡುವುದಿಲ್ಲ. ಹೊಂಬು(ಕಾಯಿ) ಇಲ್ಲದ ಹೊಂಬಾಳೆಗಳನ್ನು ಬಳಸಲಾಗುತ್ತದೆ. ಆದರೆ ಇಲ್ಲಿ ಫಲಭರಿತವಾಗಿದ್ದ ಹೊಂಬಾಳೆಗಳನ್ನು ಕತ್ತರಿಸಲಾಗಿದ್ದು, ಇದರಿಂದ ಭಾರೀ ನಷ್ಟವಾಗಿದೆ.
ಇದನ್ನು ಖರೀದಿಸುವವರು ಹಾಗೂ ಕೃತ್ಯ ಎಸಗಿರುವವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುವಂತೆ ರೈತರು ಒತ್ತಾಯಿಸಿದ್ದಾರೆ.ಪೊಲೀಸರ ಭೇಟಿ ಬಳಿಕವೂ ಸಹ ಸತತವಾಗಿ ಎರಡು ದಿನ ರಾತ್ರಿ ಕಳ್ಳತನ ನಡೆದಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
