ಬೆಂಗಳೂರು,ಫೆ.5- ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಒಂದೊಂದು ಕ್ಷೇತ್ರವು ಅತಿ ಮುಖ್ಯ ಎಂಬುದನ್ನು ಪರಿಗಣಿಸಿರುವ ಬಿಜೆಪಿ ಪಕ್ಷ ಬಿಟ್ಟು ಹೋಗಿದ್ದ ಹಲವರನ್ನು ಪುನಃ ಮಾತೃಪಕ್ಷದತ್ತ ಸೆಳೆಯಲು ಘರ್ ವಾಪ್ಸಿ ಕಾರ್ಯಾಚರಣೆಗೆ ಧುಮುಕಿದೆ. ಇದರ ಮೊದಲ ಪ್ರಯತ್ನವಾಗಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಸಿಗದೆ ಕಾಂಗ್ರೆಸ್ ಸೇರ್ಪಡೆಯಾಗಿದ್ದ ಗಾಣಿಗ ಲಿಂಗಾಯಿತ ಸಮುದಾಯದ ಪ್ರಭಾವಿ ನಾಯಕ ಮಾಜಿ ಡಿಸಿಎಂ ಹಾಗೂ ಹಾಲಿ ಶಾಸಕ ಲಕ್ಷ್ಮಣ್ ಸವದಿಯನ್ನು ಸೆಳೆಯಲು ಬಿಜೆಪಿ ಮುಂದಾಗಿದೆ.
ಇನ್ನೊಂದೆಡೆ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಲುಕಿ ಬಿಜೆಪಿಯಿಂದ ದೂರ ಉಳಿದಿದ್ದ ಮಾಜಿ ಶಾಸಕ ಜನಾರ್ಧನ ರೆಡ್ಡಿ ಕೂಡ ಬಿಜೆಪಿಯತ್ತ ಮುಖ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದ ಬೆನ್ನಲ್ಲೇ ಇದೀಗ ಹಲವರನ್ನು ಸಂಪರ್ಕಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪಕ್ಷದತ್ತ ಸೆಳೆದುಕೊಳ್ಳಲು ಸದ್ದಿಲ್ಲದೆ ಕಾರ್ಯಾಚರಣೆ ನಡೆಸಿದ್ದಾರೆ.
ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಮಹದೇವಪ್ಪ ಯದವಾಡ, ಎಸ್.ಐ.ಚಿಕ್ಕನಗೌಡರ್, ದೊಡ್ಡನಗೌಡ ಪಾಟೀಲ್ ನರಿಬೋಳ ಸೇರಿದಂತೆ ಅನೇಕರನ್ನು ಸೆಳೆಯುವಲ್ಲಿ ವಿಜಯೇಂದ್ರ ಯಶಸ್ವಿಯಾಗಿದ್ದಾರೆಂದು ತಿಳಿದುಬಂದಿದೆ. ಸ್ವಕ್ಷೇತ್ರದಲ್ಲೇ ಸ್ವಪಕ್ಷೀಯರಿಂದಲೇ ತೀವ್ರ ಭಿನ್ನಮತ ಎದುರಿಸುತ್ತಿರುವ ಹಾಲಿ ಕೇಂದ್ರ ಸಚಿವ ಭಗವಂತ ಕೂಬಾಗೆ ಟಿಕೆಟ್ ನೀಡಬಾರದೆಂದು ಪಕ್ಷದೊಳಗಿನ ಒಂದು ಬಣ ಪಟ್ಟು ಹಿಡಿದಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ವಪಕ್ಷೀಯರ ವಿರುದ್ಧವೇ ಕೆಲಸ ಮಾಡಿರುವ ಭಗವಂತ ಕೂಬಾಗೆ ಟಿಕೆಟ್ ನೀಡದೆ ಬೇರೊಬ್ಬರನ್ನು ಅಭ್ಯರ್ಥಿಯನ್ನಾಗಿ ಮಾಡಬೇಕೆಂದು ಜಿಲ್ಲಾ ಬಿಜೆಪಿ ಘಟಕ ಒತ್ತಾಯ ಮಾಡಿದೆ. ಹಾಗೊಂದು ವೇಳೆ ತೀವ್ರ ವಿರೋಧ ವ್ಯಕ್ತವಾದರೆ ಲಕ್ಷ್ಮಣ್ ಸವದಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ.
ದ್ವೇಷ ಭಾಷಣ ಮಾಡಿದ್ದ ಮುಫ್ತಿ ಸಲ್ಮಾನ್ ಅರೆಸ್ಟ್, ಬೆಂಬಲಿಗರ ಹೈಡ್ರಾಮಾ
ಮೂಲಗಳ ಪ್ರಕಾರ ಸವದಿ ತಮ್ಮ ಪುತ್ರನಿಗೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ನೀಡಿದರೆ ಬಿಜೆಪಿಗೆ ಹಿಂತಿರುಗುವ ಬಗ್ಗೆ ಚಿಂತನೆ ನಡೆಸುವ ಆಶ್ವಾಸನೆಯನ್ನು ಕೊಟ್ಟಿದ್ದಾರೆ. ಆದರೆ ಹಾಲಿ ಸಂಸದ ಅಣ್ಣ ಸಾಹೇಬ್ ಜೊಲ್ಲೆ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವುದರಿಂದ ಟಿಕೆಟ್ ಪಡೆಯುವುದು ತುಸು ಕಷ್ಟಕರ. ಹಾಗಾಗಿ ಸವದಿ ಬೀದರ್‍ನಿಂದ ಸ್ಪರ್ಧೆ ಮಾಡುವ ಸಂಭವವಿದೆ.
ಇನ್ನು ಗಾಲಿ ಜನಾರ್ಧನ ರೆಡ್ಡಿಯನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರೆ ಕೊಪ್ಪಳ, ರಾಯಚೂರು ಹಾಗೂ ಬಳ್ಳಾರಿ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಬಹುದು ಎಂಬ ಹಿನ್ನಲೆಯಲ್ಲಿ ಅವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುವ ಲಕ್ಷಣಗಳು ಗೋಚರಿಸಿವೆ. ಒಂದು ವೇಳೆ ಜನಾರ್ಧನ ರೆಡ್ಡಿ ಬಿಜೆಪಿಗೆ ಪುನಃ ವಾಪಸ್ ಆದರೆ ಬರುವ ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳದಿಂದ ಸ್ಪರ್ಧೆ ಮಾಡಬಹುದು. ಹಾಲಿ ಸಂಸದ ಕರಡಿ ಸಂಗಣ್ಣ ಅವರಿಗೆ ವಯಸ್ಸಿನ ಕಾರಣ ಟಿಕೆಟ್ ಕೈ ತಪ್ಪಬಹುದು.
ಇನ್ನೂ ಬುದ್ದಿ ಕಲಿಯದ ಮಾಲ್ಡಿವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು
ಚಾಮರಾಜನಗರ ಕ್ಷೇತ್ರದಿಂದ ಹಾಲಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಪುನಃ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿರುವುದರಿಂದ ಶೀಘ್ರದಲ್ಲೇ ಅವರ ಅಳಿಯ ಹಾಗೂ ಸರ್ಕಾರಿ ಸೇವೆಗೆ ಗುಡ್ ಬಾಯ್ ಹೇಳಿರುವ ಡಾ.ರವಿಕುಮಾರ್ ಕಮಲವನ್ನು ಮುಡಿಗೇರಿಸಿಕೊಳ್ಳಲಿದ್ದಾರೆ. ಇನ್ನು ಮೂಡಿಗೆರೆಯ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಆಯನೂರು ಮಂಜುನಾಥ್ ಹೆಸರುಗಳು ಕೂಡ ಕೇಳಿಬರುತ್ತಿದೆ. ಒಂದು ಕಾಲದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಪರಮಾಪ್ತರಾಗಿದ್ದ ಅಯನೂರು ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕಾಂಗ್ರೆಸ್ ಸೇರ್ಪಡೆಯಾಗಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಭಾವಿ ನಾಯಕರಾಗಿರುವ ಸಂಘ ಪರಿವಾರ ಹಿನ್ನಲೆಯಲ್ಲಿ ಅರುಣ್ ಪುತ್ತೀಲ ಅವರು ಕೂಡ ಸದ್ಯದಲ್ಲೇ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಹೀಗೆ ಪಕ್ಷದಿಂದ ವಿಮುಖರಾಗಿದ್ದ ಒಬ್ಬೊಬ್ಬರನ್ನೇ ಬಿಜೆಪಿಗೆ ಸೆಳೆಯಲು ಖುದ್ದು ಮಾಜಿ ಸಿಎಂ ಯಡಿಯೂರಪ್ಪ ಹಾಗೂ ವಿಜಯೇಂದ್ರ ಸದ್ದಿಲ್ಲದೆ ಅಖಾಡಕ್ಕೆ ಧುಮುಕಿದ್ದಾರೆ.