ಬೆಂಗಳೂರು,ಫೆ.5- ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಯಾವುದೊಂದು ಕ್ಷೇತ್ರಕ್ಕೂ ಪಕ್ಷದ ವರಿಷ್ಠರು ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿರುವುದು ನಿಜ. ಈವರೆಗೂ ಯಾವುದೇ ಕ್ಷೇತ್ರಕ್ಕೂ ಹೆಸರು ಅಂತಿಮಗೊಂಡಿಲ್ಲ. ಇದು ಹಾಲಿ ಸಂಸದರಿಗೂ ಅನ್ವಯವಾಗುತ್ತದೆ ಎಂದು ತಿಳಿಸಿದರು.
ಯಾವ ಕ್ಷೇತ್ರಕ್ಕೆ ಯಾವ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂಬುದರ ಕುರಿತು ಕಾರ್ಯಕರ್ತರ ಅಭಿಪ್ರಾಯ ಪಡೆದು, ರಾಜ್ಯ ಘಟಕ ಶಿಫಾರಸ್ಸು ಮಾಡಿದ ನಂತರ ವರಿಷ್ಠರು ಅಂತಿಮಗೊಳಿಸುತ್ತಾರೆ. ಈ ಕ್ಷಣದ ವರೆಗೂ ನಾವು 28 ಕ್ಷೇತ್ರಗಳಿಗೂ ಅಭ್ಯರ್ಥಿಗಳ ಹೆಸರನ್ನು ಅಂತಿಮ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ನನ್ನನ್ನೇ ಅಭ್ಯರ್ಥಿ ಮಾಡಿದ್ದಾರೆಂಬ ಮಾಜಿ ಸಚಿವ ಡಾ.ಕೆ.ಸುಧಾಕರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಎಲ್ಲರೂ ಕೂತು ಚರ್ಚೆ ಮಾಡುತ್ತೇವೆ. ಅಂತಿಮವಾಗಿ ಯಾರು ಅಭ್ಯರ್ಥಿ ಆಗಬೇಕೆಂಬುದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ ಎಂದು ಪರೋಕ್ಷವಾಗಿ ತಿರುಗೇಟು ನೀಡಿದರು.
ಇದೇ ತಿಂಗಳ 9 ಮತ್ತು 10ರಂದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. 10ರಂದು ಅವರು ಬೆಂಗಳೂರಿಗೆ ಬರುತ್ತಿದ್ದು, ಸಭೆ ನಡೆಸಲಿದ್ದಾರೆ ಎಂದು ತಿಳಿಸಿದರು.
ದ್ವೇಷ ಭಾಷಣ ಮಾಡಿದ್ದ ಮುಫ್ತಿ ಸಲ್ಮಾನ್ ಅರೆಸ್ಟ್, ಬೆಂಬಲಿಗರ ಹೈಡ್ರಾಮಾ
ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಅಮಿತ್ ಷಾ ಅವರು ಕ್ಲಸ್ಟರ್ ಸಭೆ ನಡೆಸಲಿದ್ದಾರೆ. ನಾವು ರಾಜ್ಯದ ಸ್ಥಿತಿಗತಿಗಳ ಬಗ್ಗೆ ಮಾಹಿತಿ ನೀಡುತ್ತೇವೆ ಇದನ್ನು ವರಿಷ್ಠರ ಗಮನಕ್ಕೆ ತರಲಾಗುತ್ತದೆ. ಬಳಿಕವಷ್ಟೇ ಯಾರು ಎಲ್ಲಿಗೆ ಸ್ಪರ್ಧೆ ಎಂಬುದು ಅಂತಿಮವಾಗಲಿದೆ ಎಂದು ಹೇಳಿದರು.