ಬೆಂಗಳೂರು, ಫೆ.6- ಅತ್ಯಾಧುನಿಕ ತಂತ್ರಜ್ಞಾನವನ್ನು ಸಮಂಜಸವಾಗಿ ಬಳಸಿಕೊಳ್ಳುತ್ತಿರುವುದರಿಂದ ನಗರದ ಸಂಚಾರ ದಟ್ಟಣೆ ಗಣನೀಯವಾಗಿ ಸುಧಾರಿಸಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಒಂದೂವರೆ ವರ್ಷದಿಂದ ನಗರದ ಸಂಚಾರ ದಟ್ಟಣೆ ನಿರ್ವಹಣೆಗೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಅದರ ಪ್ರತಿಫಲ ಎಂಬಂತೆ ವಿದೇಶಿ ಸಂಸ್ಥೆಯಾದ ಟಾಮ್ ವರದಿ ಸಾಕ್ಷಿಯಾಗಿದೆ.
ಇದು ಕಾಕತಾಳೀಯವಲ್ಲ, ನಾವು ಕೈಗೊಂಡ ಆನೇಕ ಕ್ರಮಗಳಿಂದ ವಿಶ್ವದಲ್ಲೇ ಅತೀ ಹೆಚ್ಚು ಸಂಚಾರ ದಟ್ಟಣೆಯಲ್ಲಿ ಎರಡನೇ ಸ್ಥಾನ ಹೊಂದಿದ್ದ ಬೆಂಗಳೂರು ಈಗ 6ನೇ ಸ್ಥಾನಕ್ಕೆ ಬಂದಿದೆ ಎಂದರು. 2022ನೇ ವರ್ಷದಲ್ಲಿ ನಗರದಲ್ಲಿ ಪ್ರತಿ ಗಂಟೆಗೆ ಸರಾಸರಿ 14 ಕಿ.ಮೀ. ಸಂಚರಿಸಲಾಗುತ್ತಿತ್ತು. 2023ರಲ್ಲಿ ಅದು 18 ಕಿ.ಮೀ.ಗೆ ಹೆಚ್ಚಳವಾಗಿದೆ. ಈ ಮೂಲಕ ಪ್ರಯಾಣದ ವೇಗವೂ ಪ್ರತಿ ಗಂಟೆಗೆ 4 ಕಿ.ಮೀ. ಹೆಚ್ಚಳವಾಗಿದೆ.
ಸಂಚಾರ ದಟ್ಟಣೆಯ ವಿಶ್ವದ ಟಾಪ್ 10 ನಗರಗಳಲ್ಲಿ ಸಂಚಾರದ ವೇಗವನ್ನು 2023ರಲ್ಲಿ ಒಂದು ನಿಮಿಷ ಕಡಿಮೆ ಮಾಡಿರುವುದರಲ್ಲಿ ಬೆಂಗಳೂರು ನಗರ ಏಕೈಕವಾಗಿದೆ ಎಂದು ಆಯುಕ್ತರು ವಿವರಿಸಿದರು.
ಈ ಸಾಧನೆಗೆ ನಾವು ಕೈಗೊಂಡ ಸುಧಾರಣೆಗಳು ಕಾರಣವಾಗಿದ್ದು, ಅವುಗಳಲ್ಲಿ ಪ್ರಮುಖವಾಗಿ ಅತಾಧುನಿಕ ತಂತ್ರಜ್ಞಾನ ಬಳಕೆ, ಪೀಕ್ ಅವರ್ ಗೂಡ್ಸ್ ವಾಹನಗಳ ನಿಷೇಧ, ಜಂಕ್ಷನ್‍ಗಳ ಸುಧಾರಣೆ , ಬಸ್ ನಿಲ್ದಾಣಗಳ ಸ್ಥಳಾಂತರ, ರಸ್ತೆ ತಿರುವುಗಳ ಮುಚ್ಚುವಿಕೆ, ಟ್ರಾಫಿಕ್ ಸಿಗ್ನಲ್‍ಗಳ ಬದಲಾವಣೆ ಮುಖ್ಯವಾಗಿದೆ ಎಂದು ಹೇಳಿದರು.
ನಿವೃತ್ತ ಐಪಿಎಸ್ ಅಧಿಕಾರಿ ಜ್ಯೋತಿ ಪ್ರಕಾಶ್ ಮಿರ್ಜಿಗೆ ಜೆಡಿಎಸ್ ಉಪಾಧ್ಯಕ್ಷ ಸ್ಥಾನ
ಹೆಬ್ಬಾಳ ಜಂಕ್ಷನ್, ಟಿನ್ ಪ್ಯಾಕ್ಟರಿ, ಗೊರಗುಟ್ಟೆ ಪಾಳ್ಯ, ಸಾರಕ್ಕಿ ಯಂತಹ ಜಂಕ್ಷನ್‍ಗಳಲ್ಲಿ ನಿರ್ದಿಷ್ಟ ದಟ್ಟಣೆ ನಿರ್ವಹಣೆ ಮತ್ತು ಸುಧಾರಿತ ಮೆಟ್ರೋ ಸಂಪರ್ಕ ಜಾಲದ ವಿಸ್ತರಣೆ ಬಿಬಿಎಂಪಿಯಿಂದ ರಸ್ತೆ ಸೌಕರ್ಯ ಸುಧಾರಣೆ, ಟ್ರಾಫಿಕ್ ಡೆನ್ಸಿಟಿ ಕಾರಿಡಾರ್‍ಗಳ ರಚನೆ ಸಹಕಾರಿಯಾಗಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಮತ್ತಷ್ಟು ಸುಧಾರಣೆ ತರಲು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಎಐ) ಆಧಾರಿತ ಟ್ರಾಫಿಕ್ ಸಿಗ್ನಲ್ ಅಳವಡಿಕೆ, ಡಾಟಾ ಅನಲಿಟಿಕ್ಸ್ ಸೆಂಟರ್‍ನ ಸಹಾಯ ಮತ್ತು ಡ್ರೋಣ್ ಕ್ಯಾಮೆರಾಗಳ ಬಳಕೆ ಮಾಡಿಕೊಳ್ಳಲಾಗುವುದು. ಜೊತೆಗೆ ಪ್ರಮುಖ ಸಂಶೋಧನಾ ಸಂಸ್ಥೆಗಳು ಎನ್‍ಜಿಓಗಳ ಸಹಯೋಗವನ್ನು ಪಡೆಯಲಾಗುವುದೆಂದು ಆಯುಕ್ತರು ವಿವರಿಸಿದರು.