ಬೆಂಗಳೂರು,ಫೆ.9- ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ 50 ಸಾವಿರಕ್ಕೂ ಹೆಚ್ಚು ದಂಡದ ಮೊತ್ತವನ್ನು ಬಾಕಿ ಉಳಿಸಿಕೊಂಡಿರುವ ವಾಹನ ಮಾಲೀಕರ ವಿಳಾಸ ಪತ್ತೆ ಮಾಡಿ ದಂಡ ವಸೂಲಿ ಮಾಡಲಾಗುವುದು ಎಂದು ನಗರ ಸಂಚಾರ ವಿಭಾಗದ ಜಂಟಿ ಆಯುಕ್ತ ಎಂ.ಎನ್. ಅನುಚೇತ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರ ವ್ಯಾಪ್ತಿಯ ಎಲ್ಲ ಪೊಲೀಸ್ ಠಾಣೆಗಲ್ಲಿ ದಾಖಲಾಗಿರುವ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಪರಿಶೀಲಿಸಿ ಅತಿ ಹೆಚ್ಚು ಬಾರಿ ನಿಯಮ ಉಲ್ಲಂಘನೆ ಮತ್ತು 50 ಸಾವಿರಕ್ಕೂ ಹೆಚ್ಚು ಮೊತ್ತದ ದಂಡ ಬಾಕಿ ಉಳಿಸಿಕೊಂಡವರ ಮನೆಗೆ ಪೊಲೀಸರು ಭೇಟಿ ನೀಡಿ ದಂಡ ವಸೂಲಿ ಮಾಡಲಿದ್ದಾರೆ.
ರಾಜ್ಯದಲ್ಲಿ 42.15 ಕೋಟಿ ರೂ. ಮೌಲ್ಯದ ಮಾದಕ ವಸ್ತು ನಾಶ
ಈ ಕಾರ್ಯಾಚರಣೆ ಭಾಗವಾಗಿ ನಗರದಲ್ಲಿ 2,681 ವಾಹನಗಳ ಮೇಲೆ ಐವತ್ತು ಸಾವಿರಕ್ಕೂ ಅಧಿಕ ದಂಡ ಇರುವುದು ತಿಳಿದುಬಂದಿದೆ. ಕಳೆದ 10 ದಿನಗಳಲ್ಲಿ 120ಕ್ಕೂ ಹೆಚ್ಚು ವಾಹನಗಳಿಗೆ ನೋಟಿಸ್ ನೀಡಿದ್ದೇವೆ ಎಂದು ಮಾಹಿತಿ ನೀಡಿದರು. ಅನೇಕ ಸಂದರ್ಭಗಳಲ್ಲಿ ವಾಹನಗಳ ಮಾಲೀಕರು ದಂಡ ಪಾವತಿಸದೇ ಇತರರಿಗೆ ಮಾರಾಟ ಮಾಡಿರುವುದು ತಿಳಿದುಬಂದಿದೆ. ಅಂಥವರಿಗೆ ಕಾಲಾವಕಾಶ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ದಂಡ ಪಾವತಿಸದೇ ಇದ್ದರೆ ಕಾನೂನಾತ್ಮಕವಾಗಿ ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಲಾಗುತ್ತದೆ ಎಂದು ಅನುಚೇತ್ ತಿಳಿಸಿದ್ದಾರೆ.
ಆರು ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಹಲ್ಮೆಟ್ ಧರಿಸುವ ಅಗತ್ಯವಿಲ್ಲ. ಆದರೆ ಶಾಲಾ ಮಕ್ಕಳು ಎಂದು ಎರಡರಿಂದ ಮೂವರನ್ನು ದ್ವಿಚಕ್ರ ವಾಹನದಲ್ಲಿ ಕರೆದೊಯ್ಯುವುದು ಸರಿಯಲ್ಲ. ಸುರಕ್ಷಿತವೂ ಅಲ್ಲ ಎಂದು ಅವರು ಸಲಹೆ ನೀಡಿದರು.