Friday, May 17, 2024
Homeರಾಜ್ಯಅಭ್ಯರ್ಥಿಗಳ ಆಯ್ಕೆ ಹೈಕಮಾಂಡ್ ತೀರ್ಮಾನ : ಅನಗತ್ಯ ಗೊಂದಲಕ್ಕೆ ಕಡಿವಾಣ

ಅಭ್ಯರ್ಥಿಗಳ ಆಯ್ಕೆ ಹೈಕಮಾಂಡ್ ತೀರ್ಮಾನ : ಅನಗತ್ಯ ಗೊಂದಲಕ್ಕೆ ಕಡಿವಾಣ

ಬೆಂಗಳೂರು,ಫೆ.11- ಅಭ್ಯರ್ಥಿಗಳ ಆಯ್ಕೆ ಹಾಗೂ ಜೆಡಿಎಸ್‍ಗೆ ಎಷ್ಟು ಸ್ಥಾನಗಳನ್ನು ನೀಡಬೇಕು ಎಂಬುದನ್ನು ವರಿಷ್ಠರು ತೀರ್ಮಾನಿಸುತ್ತಾರೆ. ಈ ಬಗ್ಗೆ ಸ್ಥಳೀಯ ನಾಯಕರು ಅನಗತ್ಯವಾಗಿ ಗೊಂದಲ ಸೃಷ್ಟಿಸಬಾರದು ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ. ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ನಡೆದ ಸಭೆಯಲ್ಲಿ ಯಾವ ಸಂದರ್ಭದಲ್ಲಿ ಯಾವ ಕ್ಷೇತ್ರಕ್ಕೆ ಅಭ್ಯರ್ಥಿಗಳ ಆಯ್ಕೆ ಮಾಡಬೇಕು ಎಂಬುದನ್ನು ಪಕ್ಷ ತೀರ್ಮಾನಿಸುತ್ತದೆ. ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟಗಳನ್ನು ನಡೆಸಿ ಪಕ್ಷವನ್ನು ಬಲಪಡಿಸುವುದು ಹಾಗೂ ಸಂಘಟನೆಗೆ ಹೆಚ್ಚು ಒತ್ತು ಕೊಡಿ ಎಂದು ರಾಜ್ಯ ಬಿಜೆಪಿ ನಾಯಕರಿಗೆ ಕಿವಿಮಾತು ಹೇಳಿದ್ದಾರೆ.

ಹಾಲಿ ಸಂಸದರು ಸೇರಿದಂತೆ ಆಕಾಂಕ್ಷಿಗಳು ಕೂಡ ನಾನೇ ಅಭ್ಯರ್ಥಿ ಎಂದು ಕ್ಷೇತ್ರದಲ್ಲಿ ಹೇಳಿಕೊಂಡು ಪ್ರಚಾರ ನಡೆಸುವ ಅಗತ್ಯವಿಲ್ಲ. ಪ್ರತಿಯೊಂದು ಕ್ಷೇತ್ರಗಳ ಬಗ್ಗೆ ನಾವು ಆಂತರಿಕ ಸಮೀಕ್ಷೆ ನಡೆಸಿ ಕಾರ್ಯಕರ್ತರ ಅಭಿಪ್ರಾಯ ಪಡೆದು ನಂತರ ರಾಜ್ಯಘಟಕ ಶಿಫಾರಸ್ಸು ಮಾಡುವ ಅಭ್ಯರ್ಥಿಗಳ ಪಟ್ಟಿಯನ್ನು ಪರಿಶೀಲಿಸಿ ಅಂತಿಮಗೊಳಿಸುತ್ತೇವೆ. ಇದರ ಬಗ್ಗೆ ಯಾರೂ ಕೂಡ ತಲೆಕೆಡಿಸಿಕೊಳ್ಳಬಾರದೆಂದು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.

ರಾಮ ಮತ್ತು ರಾಷ್ಟ್ರದ ವಿಚಾರದಲ್ಲಿ ರಾಜಿ ಇಲ್ಲ : ರಾಹುಲ್‍ಗೆ ಕಿಚಾಯಿಸಿದ ಪ್ರಮೋದ್ ಕೃಷ್ಣಂ

ಕರ್ನಾಟಕದ 28 ಸೇರಿದಂತೆ ಒಟ್ಟು 543 ಲೋಕಸಭಾ ಕ್ಷೇತ್ರಗಳಿಗೂ ಅಭ್ಯರ್ಥಿಗಳ ಆಯ್ಕೆಯನ್ನು ಕೇಂದ್ರ ಸಂಸದೀಯ ಮಂಡಳಿಯಲ್ಲಿ ಚರ್ಚಿಸಿ ನಂತರ ಚುನಾವಣಾ ಸಮಿತಿ ಪರಿಶೀಲಿಸಿದ ಬಳಿಕ ಅಂತಿಮಗೊಳ್ಳುತ್ತದೆ. ಯಾರೂ ಕೂಡ ಅಧಿಕೃತ ಘೋಷಣೆಗೂ ಮುನ್ನವೇ ನಾನೇ ಅಭ್ಯರ್ಥಿ ಎಂದು ಹೇಳಬಾರದು. ಒಂದು ವೇಳೆ ಯಾರಾದರೂ ಆ ರೀತಿ ಹೇಳಿದರೆ ಅದನ್ನು ಅಶಿಸ್ತು ಎಂದು ಪರಿಗಣಿಸಬೇಕಾಗುತ್ತದೆ. ವರೀಷ್ಠರ ಸೂಚನೆಯಿಲ್ಲದೆ ಅಭ್ಯರ್ಥಿಗಳು ನಾನೇ ಎಂದು ನೀವೇ ಹೇಗೆ ಹೇಳುತ್ತೀರಿ ಎಂದು ಅಮಿತ್ ಶಾ ಸಭೆಯಲ್ಲಿ ಪ್ರಶ್ನೆ ಮಾಡಿದ್ದಾರೆ.

ನಮಗೆ ರಾಜ್ಯದ ಎಲ್ಲಾ ಕ್ಷೇತ್ರಗಳ ಬಗ್ಗೆಯೂ ನಮ್ಮದೇ ಆದ ಆಂತರಿಕ ಮಾಹಿತಿಯಿದೆ. ಯಾರಿಗೆ ಯಾವ ಕ್ಷೇತ್ರದಲ್ಲಿ ಟಿಕೆಟ್ ನೀಡಿದರೆ ಗೆಲ್ಲಬಹುದೆಂದು ಮಾಹಿತಿಯನ್ನು ಇಟ್ಟುಕೊಂಡಿದ್ದೇವೆ. ಅನಗತ್ಯವಾಗಿ ಗೊಂದಲ ಸೃಷ್ಟಿಸಬಾರದು ಎಂದು ಹೇಳಿದ್ದಾರೆ.

ಜೆಡಿಎಸ್ ಬಗ್ಗೆ ಚಿಂತೆ ಬೇಡ :
ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಬಗ್ಗೆ ಯಾರೊಬ್ಬರೂ ತಲೆಕೆಡಿಸಿಕೊಳ್ಳಬೇಡಿ. ಅವರಿಗೆ ಎಷ್ಟು ಸ್ಥಾನಗಳನ್ನು ನೀಡಬೇಕು ಎಂಬುದರ ಬಗ್ಗೆ ಖುದ್ದು ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ, ನಾನು ಮಾಜಿ ಪ್ರಧಾನಿಗಳಾದ ಎಚ್.ದೇವೇಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಜೊತೆ ಚರ್ಚಿಸಿ ಅಂತಿಮಗೊಳಿಸುತ್ತೇವೆ. ಅದರ ಬಗ್ಗೆ ಹೆಚ್ಚಿನ ಗಮನ ನೀಡಬೇಕಾದ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಅನ್ನು ಸೋಲಿಸಬೇಕಾದರೆ ಕೆಲವು ಕಡೆ ಜೆಡಿಎಸ್ ಸಹಾಯ ಅಗತ್ಯವಿದೆ. ವಿಶೇಷವಾಗಿ ಹಳೆ ಮೈಸೂರು ಭಾಗದಲ್ಲಿ ಬಿಜೆಪಿ-ಜೆಡಿಎಸ್ ಒಂದಾದರೆ ಕಾಂಗ್ರೆಸ್ ಗೆಲುವು ಅಷ್ಟು ಸುಲಭವಲ್ಲ. ಅನಗತ್ಯವಾಗಿ ಆ ಪಕ್ಷದ ಬಗ್ಗೆ ಗೊಂದಲ ಸೃಷ್ಟಿಸುವ ಹೇಳಿಕೆಗಳನ್ನು ಕೊಡಬಾರದು ಎಂದು ತಾಕೀತು ಮಾಡಿದ್ದಾರೆ.

ಒಂದೇ ಶಾಲೆಯಲ್ಲಿ 150ಕ್ಕೂ ಹೆಚ್ಚು ಮಕ್ಕಳಲ್ಲಿ ಮಂಗನ ಬಾವು ಕಾಯಿಲೆ

ಈಗಾಗಲೇ ಹಲವು ಬಾರಿ ಔಪಚಾರಿಕವಾಗಿ ನಡೆಸಿರುವ ಮಾತುಕತೆಯಲ್ಲಿ ಜೆಡಿಎಸ್‍ಗೆ ಎಷ್ಟು ಸ್ಥಾನ ನೀಡಬೇಕೆಂಬುದರ ಬಗ್ಗೆ ಒಂದು ಸ್ಪಷ್ಟ ಚಿತ್ರಣ ಸಿಕ್ಕಿದೆ. ಶೀಘ್ರದಲ್ಲಿ ನಾನೇ ಕುಮಾರಸ್ವಾಮಿಯವರ ಜೊತೆ ಚರ್ಚಿಸಿ ಅಂತಿಮ ಮಾಡುತ್ತೇವೆ. ಜೆಡಿಎಸ್ ಜೊತೆಗಿನ ಮೈತ್ರಿ ಬಗ್ಗೆ ಕೆಲವರಿಗೆ ಅಸಮಾಧಾನವಿರುವುದು ನನ್ನ ಗಮನಕ್ಕೆ ಬಂದಿದೆ. ಪಕ್ಷದ ಹಿತದೃಷ್ಟಿಯಿಂದ ಇದನ್ನು ಸಹಿಸಿಕೊಳ್ಳಬೇಕೆಂದು ಅಮಿತ್ ಶಾ ಹೇಳಿದ್ದಾರೆ.

ಇನ್ನು ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸಂಬಂಸಿದಂತೆ ಹಾಲಿ ಅಭ್ಯರ್ಥಿ ಸುಮಲತಾ ಅಂಬರೀಶ್‍ಗೆ ಟಿಕೆಟ್ ನೀಡಬೇಕೇ ಇಲ್ಲವೇ ಆ ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಡಬೇಕೇ ಎಂಬುದನ್ನು ನಮಗೇ ಬಿಟ್ಟುಬಿಡಿ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡೇ ತೀರ್ಮಾನ ಮಾಡುತ್ತೇವೆ. ಮೈತ್ರಿ ಕುರಿತಂತೆ ಯಾರೊಬ್ಬರೂ ಅಪಸ್ವರ ತೆಗೆಯಬಾರದೆಂದು ತಾಕೀತು ಮಾಡಿದ್ದಾರೆ.

RELATED ARTICLES

Latest News