ಬೆಂಗಳೂರು, ಜು.13-ಬಿಡದಿ ಟೌನ್ ಶಿಪ್ ಯೋಜನೆ ವಿರೋಧಿಸಿ ನಡೆಸುತ್ತಿರುವ ಶಾಂತಿಯುತ ಹೋರಾಟವನ್ನು ಹತ್ತಿಕ್ಕಲು ರಾಜ್ಯ ಸರ್ಕಾರ ಚಿತಾವಣೆ ನಡೆಸಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಈ ಸಂಬಂಧ ಹೇಳಿಕೆ ನೀಡಿರುವ ಅವರು, ಸರ್ಕಾರದ ಸೂಚನೆಯಂತೆ ಶಾಂತಿಯುತ ಹೋರಾಟ ನಡೆಸುತ್ತಿರುವ ರೈತರ ಮೇಲೆ ದೌರ್ಜನ್ಯ ಎಸಗಿದರೆ, ಸರ್ಕಾರದ ಕೆಟ್ಟ ನಡವಳಿಕೆಯ ಆರೋಪ ನಿಮ್ಮ ಮೇಲೂ ಬರಲಿದೆ ಎಂದು ಎಚ್ಚರಿಸಿದ್ದಾರೆ.ಸರ್ಕಾರದ ಚಿತಾವಣೆಯಿಂದ ಬಿಡದಿ ಬಳಿ ಅಹಿಕರ ಘಟನೆ ಜರುಗಿದೆ ಎಂದ ಅವರು, ಕಳೆದ ಐದುನೂರು ದಿನಗಳಿಂದ ಟೌನ್ ಶಿಪ್ ವಿರೋಧಿಸಿ ಕೃಷಿಕರು ಶಾಂತಿಯುತ ಹೋರಾಟ ಮಾಡುತ್ತಿದ್ದರು. ಮಹಿಳೆಯರು ಹೋರಾಟಕ್ಕೆ ಬೆಂಬಲ ನೀಡಿದ್ದರು. ಸರ್ವೆಗೆ ಬಂದಾಗ ಅಹಿತಕರ ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರೆ.
ಯಾವುದೇ ಕಾರಣಕ್ಕೂ ಕೆಟ್ಟ ಘಟನೆಗೆ ಅವಕಾಶ ಕೊಡದೆ ಶಾಂತಿಯುತ ಹೋರಾಟ ಮುಂದುವರಿಸಿ. ಕಾನೂನು ವ್ಯಾಪ್ತಿಯಲ್ಲಿ ನಿಮಗೆ ನ್ಯಾಯ ಒದಗಿಸಲು ಹಲವರು ಮುಂದೆ ಬಂದಿದ್ದಾರೆ. ನಿಮ್ಮ ನ್ಯಾಯುತ ಹಾಗೂ ಶಾಂತಿಯುತ ಹೋರಾಟಕ್ಕೆ ಬೆಂಬಲ ನೀಡುವುದರ ಜೊತೆಗೆ ಕಾನೂನು ಹೋರಾಟ ಮಾಡುವ ಭರವಸೆಯನ್ನು ಅವರು ನೀಡಿದ್ದಾರೆ.
ನಿಖಿಲ್ ಕುಮಾರಸ್ವಾಮಿ ತೀವ್ರ ಖಂಡನೆ :
ಬೆಂಗಳೂರು, ಜು.13-ಬಿಡದಿ ಟೌನ್ ಶಿಪ್ ವಿಷಯವಾಗಿ ಸರ್ಕಾರ ರೈತರ ಒಪ್ಪಿಗೆ ಇಲ್ಲದೇ ಯಾವುದೇ ರೀತಿಯ ಮಾಹಿತಿ ನೀಡದೆ ಜೆಎಂಸಿ ಸರ್ವೇ ಮಾಡಲು ಹೊರಟಿರುವುದನ್ನು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತೀವ್ರವಾಗಿ ಖಂಡಿಸಿದ್ದಾರೆ.
ರೈತರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ವಿಫಲವಾಗಿರುವ ಸರ್ಕಾರ, ಏನಾದರೂ ಮಾಡಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಹೊರಟಿರುವುದು ದುರ್ದೈವದ ಸಂಗತಿ ಎಂದು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಆರೋಪಿಸಿದ್ದಾರೆ.
ಈ ಕೂಡಲೇ ಸರ್ಕಾರ ವಶಕ್ಕೆ ಪಡೆದಿರುವ ರೈತರನ್ನು ಬಿಡುಗಡೆ ಮಾಡಬೇಕು ಹಾಗೂ ಬಿಡದಿ ಟೌನ್ ಶಿಪ್ ಯೋಜನೆಯನ್ನು ಕೈಬಿಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
