Friday, October 25, 2024
Homeರಾಜ್ಯಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಇನ್ನೂ 5 ದಿನ ಮಳೆ

ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಇನ್ನೂ 5 ದಿನ ಮಳೆ

ಬೆಂಗಳೂರು, ಸೆ.24- ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಸಾಧಾರಣ ಮಳೆಯಾಗಿದ್ದು, ಇನ್ನೂ ಐದು ದಿನಗಳ ಕಾಲ ಮಳೆ ಮುಂದುವರೆಯಲಿದೆ. ನೈರುತ್ಯ ಮುಂಗಾರು ಚೇತರಿಕೆಯಾಗಿರುವುದರಿಂದ ಈ ತಿಂಗಳ ಅಂತ್ಯದವರೆಗೂ ಮಳೆ ನಿರೀಕ್ಷಿಸಬಹುದು.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಇದರ ಪ್ರಭಾವದಿಂದ ರಾಜ್ಯದ ಕರಾವಳಿ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿದ್ದು, ಸಂಜೆ ಹಾಗೂ ರಾತ್ರಿ ವೇಳೆ ಮಳೆ ಬರುವ ಸಂಭವಿದೆ. ವಾಯುಭಾರ ಕುಸಿತ ಪರಿಣಾಮದಿಂದ ರಾಜ್ಯದಲ್ಲಿ ಮಳೆ ಪ್ರಮಾಣ ಹೆಚ್ಚಾಗಲಿದೆ. ಕೆಲವೆಡೆ ತುಂತುರು ಇಲ್ಲವೆ, ಸಾಧಾರಣ ಮಳೆ ಆಗಾಗ್ಗೆ ಬರುವ ನಿರೀಕ್ಷೆ ಇದೆ. ಮಂಗಳವಾರದ ನಂತರ ದಕ್ಷಿಣ ಒಳನಾಡಿನಲ್ಲೂ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ತಜ್ಞರು ಹೇಳಿದ್ದಾರೆ.

ಭಾರತೀಯ ಹವಾಮಾನ ಇಲಾಖೆಯೂ ಮುಂದಿನ ಐದು ದಿನಗಳ ಕಾಲ ರಾಜ್ಯದಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆ ನೀಡಿದೆ. ಕರಾವಳಿ ಭಾಗದಲ್ಲಿ ವ್ಯಾಪಕ ಪ್ರಮಾಣದಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ. ರಾಜ್ಯದ ಒಳನಾಡಿನಲ್ಲಿ ಭಾಗಶಃ ವ್ಯಾಪಕ ಮಳೆಯಾಗುವ ಸಾಧ್ಯತೆಗಳಿವೆ ಎಂದು ತಿಳಿಸಿದೆ.

ಮದ್ಯಭಾಗ್ಯ ನೀಡಿ ಕರ್ನಾಟಕವನ್ನು ‘ಕುಡುಕರ ತೋಟ’ ಮಾಡುತ್ತಿದೆ ಧನಪಿಶಾಚಿ ಸರ್ಕಾರ : ಹೆಚ್ಡಿಕೆ ಆಕ್ರೋಶ

ನೀಗದ ಮಳೆ ಕೊರತೆ:ಆದರೂ ನೈರುತ್ಯ ಮುಂಗಾರಿನ ಅವ ಮುಗಿಯುತ್ತಾ ಬಂದಿದ್ದರೂ ರಾಜ್ಯದಲ್ಲಿ ಮಳೆ ಕೊರತೆಯು ಈತನಕ ನಿವಾರಣೆಯಾಗಿಲ್ಲ. ಆಗಸ್ಟ್ ನಲ್ಲಿ ಪ್ರಾರಂಭವಾದ ಮಳೆ ಕೊರತೆ ಸೆಪ್ಟೆಂಬರ್‍ನಲ್ಲೂ ಮುಂದುವರೆದಿದ್ದು, ಬರದ ತೀವ್ರತೆ ಹೆಚ್ಚತೊಡಗಿದೆ. ಇದರಿಂದ ಬಿತ್ತಿದ ಬೆಳೆ ಹಾನಿಯಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ರಾಜ್ಯದ ಕೆಲವೆಡೆ ಚದುರಿದಂತೆ ಅಲ್ಲಲ್ಲಿ ಮಳೆಯಾಗುತ್ತಿದ್ದರೂ ವ್ಯಾಪಕವಾಗಿ ರಾಜ್ಯಾದ್ಯಂತ ವಾಡಿಕೆ ಪ್ರಮಾಣದ ಮಳೆಯಾಗುತ್ತಿಲ್ಲ. ಹೀಗಾಗಿ ಜಲಾಶಯಗಳಲ್ಲಿನ ಒಳಹರಿವು ಏರಿಕೆಯಾಗುತ್ತಿಲ್ಲ. ಕಳೆದ ವರ್ಷ ಅತಿವೃಷ್ಟಿಯಾಗಿದ್ದರೆ, ಈ ವರ್ಷ ಬರಪರಿಸ್ಥಿತಿ ಎದುರಿಸುವಂತಾಗಿದೆ.

ತಡವಾಗಿ ಆರಂಭವಾದ ಮುಂಗಾರು ಮಳೆಯು ಜೂನ್‍ನಲ್ಲಿ ಕೈಕೊಟ್ಟಿತ್ತು. ಆದರೆ, ಜುಲೈ ಸುಧಾರಿಸಿ ವಾಡಿಕೆಗಿಂತ ಹೆಚ್ಚು ಮಳೆಯಾಗಿ ನಿಟ್ಟುಸಿರು ಬಿಡುವಂತಾಗಿತ್ತು. ಆದರೆ, ಮತ್ತೆ ಆಗಸ್ಟ್‍ನಲ್ಲಿ ಮುಂಗಾರು ಮಳೆ ಕೈಕೊಟ್ಟು ಶತಮಾನದ ದಾಖಲೆ ಮುರಿಯುವಷ್ಟು ಮಳೆ ಕೊರತೆಯಾಗಿದೆ. ಇದರಿಂದ ರಾಜ್ಯ ಬೀಕರ ಬರಗಾಲ ಎದುರಿಸುವಂತಾಗಿದೆ. ಸೆಪ್ಟೆಂಬರ್‍ನಲ್ಲಿ ಮಳೆ ಚೇತರಿಸಿಕೊಳ್ಳಬಹುದೆಂಬ ನಿರೀಕ್ಷೆ ಹುಸಿಯಾಗಿದೆ.

ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ಕಳೆದ ಒಂದು ವಾರದಲ್ಲಿ ಮಳೆ ಕೊರತೆ ಪ್ರಮಾಣ ಹೆಚ್ಚಾಗಿದೆ. ವಾಡಿಕೆ ಪ್ರಮಾಣಕ್ಕಿಂತ ಶೇ.36ರಷ್ಟು ರಾಜ್ಯದಲ್ಲಿ ಮಳೆ ಕಡಿಮೆಯಾಗಿದೆ. ಅದೇ ರೀತಿ ಸೆಪ್ಟೆಂಬರ್ ಒಂದರಿಂದ ನಿನ್ನೆವರೆಗೆ ರಾಜ್ಯದಲ್ಲಿ ವಾಡಿಕೆಗಿಂತ ಶೇ.11 ಕಡಿಮೆ ಮಳೆಯಾಗಿದೆ. ಕೆಲವೆಡೆ ಕೊರತೆ ಪ್ರಮಾಣ ಇನ್ನೂ ಹೆಚ್ಚಿದೆ.

ಮುಂಗಾರು ಹಂಗಾಮಿನ ಅವಯ ಜೂನ್ ಒಂದರಿಂದ ನಿನ್ನೆವರೆಗೆ ರಾಜ್ಯದಲ್ಲಿ ಶೇ.26ರಷ್ಟು ಮಳೆ ಕೊರತೆ ಇದೆ. ಜನವರಿಯಿಂದ ನಿನ್ನೆವರೆಗೆ ಮಳೆ ಪ್ರಮಾಣದಲ್ಲೂ ವಾಡಿಕೆಗಿಂತ ಶೇ. 26ರಷ್ಟು ಕೊರತೆ ಕಂಡುಬಂದಿದೆ. ಅಕ್ಟೋಬರ್‍ನಿಂದ ಹಿಂಗಾರು ಮಳೆ ಆರಂಭವಾಗುವುದು ರೂಢಿ. ನೈರುತ್ಯ ಮುಂಗಾರು ಮಾರುತಗಳು ಮರಳಿದ ಬಳಿಕ ಈಶಾನ್ಯ ಹಿಂಗಾರಿನ ಮಾರುತಗಳು ಪ್ರಾರಂಭವಾಗುತ್ತವೆ. ಹಿಂಗಾರಿನ ಆರಂಭದ ಮುನ್ಸೂಚನೆಯೂ ಅಶಾದಾಯಕವಾಗಿಲ್ಲ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

RELATED ARTICLES

Latest News