ಬೆಳಗಾವಿ,ಡಿ.11- ರಾಜ್ಯದಲ್ಲಿ ಹೊಸ ಶಾಲಾ ಕೊಠಡಿಗಳ ನಿರ್ಮಾಣಕ್ಕೆ 360 ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ವಿಧಾನಸಭೆಗೆ ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಮಹೇಶ್ ಟೆಂಗಿನಕಾಯಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೊಠಡಿಗಳ ದುರಸ್ಥಿಗೆ 100 ಕೋಟಿ ರೂ., ಶೌಚಾಲಯ ನಿರ್ಮಾಣಕ್ಕೆ 90 ಕೋಟಿ ರೂ. ಮಂಜೂರಾಗಿದೆ. ಪದವಿ ಪೂರ್ವ ಕಾಲೇಜುಗಳಲ್ಲಿ ಹೊಸ ಕಟ್ಟಡ ನಿರ್ಮಾಣ, ದುರಸ್ತಿ ಹಾಗೂ ಶೌಚಾಲಯ ನಿರ್ಮಾಣಕ್ಕಾಗಿ 97 ಕೋಟಿ ರೂ. ಮಂಜೂರಾಗಿದೆ ಎಂದರು.
ಸಚಿವ ಸಂಪುಟ ಸಭೆಯಲ್ಲಿ ಹೊಸ ಕೊಠಡಿ ನಿರ್ಮಾಣ, ದುರಸ್ತಿ ಹಾಗೂ ಶೌಚಾಲಯ ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ. ಆದ್ಯತೆ ಮೇಲೆ ಈ ಕೆಲಸಗಳನ್ನು ಪ್ರಾರಂಭಿಸಲಾಗುವುದು. ಈ ಕಾರ್ಯಗಳಿಗೆ ಹಣದ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಶಾಲಾ ವಿದ್ಯಾರ್ಥಿಗಳಿಗೆ ನೀಡಲಾಗುವ ಶೂ ಮತ್ತು ಸಾಕ್ಸ್ ಗಳಿಗೆ 117 ಕೋಟಿ ರೂ. ಹಣ ಒದಗಿಸಲಾಗಿದ್ದು, ಈಗಾಗಲೇ 97 ಕೋಟಿ ರೂ. ವಿತರಣೆಯಾಗಿದೆ. ಎಸ್‌ಡಿಎಂಸಿ ಸಮಿತಿಗೆ ಹಣ ನೀಡಲಿದ್ದು, ಆ ಸಮಿತಿಗಳೇ ಶೂ ಮತ್ತು ಸಾಕ್‌್ಸಗಳನ್ನು ವಿತರಿಸಲಿವೆ. ಶೂ ಮತ್ತು ಸಾಕ್‌್ಸಗಳಿಗೆ ಹಣದ ಕೊರತೆಯಿಲ್ಲ, ಮಧ್ಯವರ್ತಿಗಳೂ ಇಲ್ಲ. ಒಂದು ವೇಳೆ ಇಲಾಖಾಧಿಕಾರಿಗಳು ತಪ್ಪು ನಿರ್ವಹಣೆ ಮಾಡಿದ್ದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸಂಚಿತ ನಿಧಿಯ ಹಣವನ್ನು ಬಳಸಲು ಸೂಚಿಸಿಲ್ಲ. ಹಾಗೊಂದು ವೇಳೆ ನಿರ್ದೇಶನ ನೀಡಿದ್ದರೆ ಸಂಬಂಧಿಸಿದ ಅಧಿಕಾರಿ ಮೇಲೆ ಕ್ರಮ ಕೈಗೊಳ್ಳುವ ಭರವಸೆಯನ್ನು ಸಚಿವರು ನೀಡಿದರು.
ಇದಕ್ಕೂ ಮುನ್ನ ಮಹೇಶ್ ಟೆಂಗಿನಕಾಯಿ, ಶಾಲಾ ಶೈಕ್ಷಣಿಕ ವರ್ಷ ಮುಗಿಯಲು ಇನ್ನು 3 ತಿಂಗಳು ಮಾತ್ರ ಉಳಿದಿದೆ. ಇನ್ನೂ ಕೂಡ ಶೂ ಮತ್ತು ಸಾಕ್‌್ಸಗಳನ್ನು ವಿದ್ಯಾರ್ಥಿಗಳಿಗೆ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
