Homeಇದೀಗ ಬಂದ ಸುದ್ದಿವರ್ಷ ಕಳೆದರೂ ಮುಗಿಯದ ಡಾ.ರಾಜ್‌ಕುಮಾರ್‌ ರಸ್ತೆಯ ವೈಟ್‌ ಟಾಪಿಂಗ್‌ ಕಾಮಗಾರಿ, ಗೋಳು ತೋಡಿಕೊಂಡ ವರ್ತಕರು

ವರ್ಷ ಕಳೆದರೂ ಮುಗಿಯದ ಡಾ.ರಾಜ್‌ಕುಮಾರ್‌ ರಸ್ತೆಯ ವೈಟ್‌ ಟಾಪಿಂಗ್‌ ಕಾಮಗಾರಿ, ಗೋಳು ತೋಡಿಕೊಂಡ ವರ್ತಕರು

ಬೆಂಗಳೂರು, ಜು.15- ಏನ್ರೀ ಕರ್ಮ ಇದು… ಬರೋಬ್ಬರಿ ಒಂದು ವರ್ಷ ಆಯ್ತು, ವೈಟ್‌ ಟಾಪಿಂಗ್‌ ರಸ್ತೆ ಕಾಮಗಾರಿ ಮುಗಿಲೇ ಇಲ್ಲ, ನಮ್‌ ಗೋಳು ತಪ್ಲೇ ಇಲ್ಲ, ನಾವ್ಯಾಕೆ ಟ್ಯಾಕ್ಸ್ ಕಟ್ಬೇಕು, ರಸ್ತೆ ಕಾಮಗಾರಿ ವಿಳಂಬದಿಂದ ನಮ್ಗೇನಾದ್ರೂ ಟ್ಯಾಕ್ಸ್ ಕಟ್‌ ಮಾಡ್ತಾರಾ? ಎಂದು ಡಾ.ರಾಜ್‌ಕುಮಾರ್‌ ರಸ್ತೆ ವರ್ತಕರು ಅಳಲು ತೋಡಿಕೊಂಡಿದ್ದಾರೆ.

ಮೈಸೂರು ಸ್ಯಾಂಡಲ್‌ ಸೋಪ್‌ ಫ್ಯಾಕ್ಟರಿಯಿಂದ ಹಿಡಿದು ಪ್ರಸನ್ನ ಥಿಯೇಟರ್‌ವರೆಗೆ ಇರುವ ಡಾ.ರಾಜ್‌ಕುಮಾರ್‌ ರಸ್ತೆಯಲ್ಲಿ ದೊಡ್ಡ ದೊಡ್ಡ ಕಟ್ಟಡಗಳು, ಆಸ್ಪತ್ರೆಗಳು, ಕಲ್ಯಾಣ ಮಂಟಪಗಳು, ಮಾಲ್‌ಗಳು, ನರ್ಸಿಂಗ್‌ ಹೋಂಗಳು, ಡಯಾಗ್ನೆಸ್ಟಿಕ್‌ ಸೆಂಟರ್‌ಗಳು, ಬಾರ್‌ ಅಂಡ್‌ ರೆಸ್ಟೋರೆಂಟ್‌ಗಳು, ಐಟಿ ಕಂಪೆನಿಗಳು, ಮಾಧ್ಯಮ ಕಚೇರಿಗಳು, ಬ್ಯಾಂಕ್‌ಗಳು, ಸ್ಟಾರ್‌ ಹೋಟೆಲ್‌ಗಳು, ಎಲ್‌.ಐ.ಸಿ ಕಚೇರಿ, ಚಲನಚಿತ್ರ ಮಂದಿರಗಳು, ಪೆಟ್ರೋಲ್‌ಬಂಕ್‌ಗಳು, ಸಲೂನ್‌ಗಳು, ಬ್ಯೂಟಿಪಾರ್ಲರ್‌ಗಳು, ದ್ವಿಚಕ್ರ ವಾಹನ ಶೋರೂಂಗಳು, ಕಾರು ಶೋರೂಂಗಳು, ಸರ್ವೀಸ್‌‍ ಸೆಂಟರ್‌ಗಳು, ಗ್ಯಾರೇಜ್‌ಗಳು, ಸಣ್ಣಪುಟ್ಟ ಅಂಗಡಿ ಮಳಿಗೆಗಳು ಸೇರಿದಂತೆ ಸಾವಿರಾರು ಅಂಗಡಿಮುಂಗಟ್ಟುಗಳಿವೆ. ಕೋಟ್ಯಂತರ ರೂಪಾಯಿ ಜಿಬಿಎಗೆ ತೆರಿಗೆ ಸಂದಾಯವಾಗುತ್ತದೆ.

ಕಳೆದ ಎರಡು ವರ್ಷಗಳಿಂದ ಈ ರಸ್ತೆಯಲ್ಲಿ ವೈಟ್‌ ಟಾಪಿಂಗ್‌ ಕಾಮಗಾರಿ ಪ್ರಾರಂಭವಾಗಿದ್ದು, ಮತ್ತೆ ಕೆಲವೆಡೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ವೈಟ್‌ ಟ್ಯಾಪಿಂಗ್‌ ರಸ್ತೆ ಕಾಮಗಾರಿ ವಿಳಂಬ ಧೋರಣೆಯಿಂದ ಈ ರಸ್ತೆಯಲ್ಲಿ ಸಂಚಾರ ಅಡಚಣೆ, ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಿದ್ದು, ವ್ಯಾಪಾರ ವಹಿವಾಟುಗಳು ಎಂದಿನಂತೆ ನಡೆಯುತ್ತಿಲ್ಲ. ಹೀಗಾಗಿ ಸಾಕಷ್ಟು ಜನ ಬೇಸತ್ತು ವರ್ತಕರು ಇಲ್ಲಿಂದ ಸ್ಥಳಾಂತರಗೊಂಡಿದ್ದಾರೆ. ಇನ್ನೂ ಹಲವರು ಸ್ಥಳಾಂತರಗೊಳ್ಳಲು ಸಜ್ಜಾಗುತ್ತಿದ್ದಾರೆ.

ಇನ್ನೂ ಹಲವು ಅಂಗಡಿ ಮಳಿಗೆ, ವಾಣಿಜ್ಯ ಕಟ್ಟಡಗಳಲ್ಲಿ ವ್ಯಾಪಾರ ವಹಿವಾಟುಗಳಿಲ್ಲದೆ ಬಣಗುಡುತ್ತಿವೆ. ಬೆಂಗಳೂರಿನ ಪ್ರತಿಷ್ಠಿತ ರಸ್ತೆ ಡಾ.ರಾಜ್‌ಕುಮಾರ್‌ ರಸ್ತೆಯಲ್ಲಿ ಇರುವುದು ಒಂದು ಕಾಲದಲ್ಲಿ ಹೆಮೆಯ ಸಂಗತಿಯಾಗಿತ್ತು. ಆದರೆ ಈಗ ಆಗುತ್ತಿರುವ ತೊಂದರೆಗಳನ್ನು ಗಮನಿಸಿದರೆ ಇಲ್ಲಿ ಯಾಕಾದರೂ ಇರಬೇಕು, ಪ್ರತಿದಿನ ಆಗುತ್ತಿರುವ ನಷ್ಟಗಳನ್ನು ಅನುಭವಿಸಿಕೊಂಡು ತಮಗಾಗುವ ಲಾಭ ಏನು? ಎಂದು ಇಲ್ಲಿ ವರ್ತಕರು ಬೇರೆಡೆ ಶಿಫ್‌್ಟ ಆಗುತ್ತಿದ್ದಾರೆ. ಇಲ್ಲಿ ಹಲವು ಆಸ್ಪತ್ರೆಗಳು, ಡಯಾಗ್ನಸ್ಟಿಕ್‌ ಸೆಂಟರ್‌ಗಳಿವೆ.

ಆ್ಯಂಬುಲೆನ್ಸ್ ಗಳು ಪ್ರತಿದಿನ ಓಡಾಡಬೇಕಾಗಿದೆ. ವೈಟ್‌ ಟ್ಯಾಪಿಂಕ್‌ ಕಾಮಗಾರಿಯಿಂದ ಆ್ಯಂಬುಲೆನ್ಸ್ ಓಡಾಟಕ್ಕೆ ತೊಂದರೆಯಾಗಿದೆ. ಅನಿವಾರ್ಯವಾಗಿ ಅಲ್ಲಿಇಲ್ಲಿ ಸುತ್ತಾಡಿಕೊಂಡು ಆ್ಯಂಬುಲೆನ್ಸ್ ಮೂಲಕ ರೋಗಿಗಳನ್ನು ಕರೆದುಕೊಂಡು ಬರಬೇಕಾಗಿದೆ.

ನವರಂಗ್‌ ವೃತ್ತದಿಂದ ಸುಜಾತ ವೃತ್ತದ ಸಿಗ್ನಲ್‌ವರೆಗೆ ವೈಟ್‌ ಟಾಪಿಂಗ್‌ ಕಾಮಗಾರಿ ಕಳೆದ ಜೂನ್‌ನಿಂದ ಪ್ರಾರಂಭವಾಯಿತು. ಈ ಕಾಮಗಾರಿಗಾಗಿ ರಸ್ತೆ, ಫುಟ್‌ಪಾತ್‌ನ್ನೆಲ್ಲಾ ಅಗೆದು ರಂಪ ಮಾಡಲಾಗಿದೆ. ರಸ್ತೆ ಕಾಂಕ್ರಿಟ್‌ ಕಾಮಗಾರಿ ಮುಗಿದಿದೆಯಾದರೂ, ಫುಟ್‌ಪಾತ್‌ ಕಾಮಗಾರಿ ಮತ್ತು ಪೈಪ್‌ಲೈನ್‌ ಕಾಮಗಾರಿ ಇನ್ನೂ ಮುಗಿದಿಲ್ಲ.

ಈ ಕುರಿತು ಕೆಲಸ ಉಸ್ತುವಾರಿ ವಹಿಸಿರುವ ಮೇಸ್ತ್ರಿಗಳನ್ನು ಕೇಳಿದರೆ ನಮ ವೆಹಿಕಲ್‌ಗಳಿಗೆ ಡೀಸೆಲ್‌ ಇಲ್ಲ, ಕಾಮಗಾರಿಗಳಿಗೆ ಕ್ವಾರಿಗಳು ಬಂದ್‌ ಆಗಿರುವುದರಿಂದ ಜೆಲ್ಲಿಕಲ್ಲು ಸಪ್ಲೈ ಆಗುತ್ತಿಲ್ಲ ಎಂದು ಕುಂಟುನೆಪ ಹೇಳುತ್ತಿದ್ದಾರೆ.

ಫುಟ್‌ಪಾತ್‌ ಅಲ್ಲಿ ಜನ ಓಡಾಡಲಾಗದೇ ಜನ ಪರಿತಪಿಸುತ್ತಿದ್ದಾರೆ. ಹಲವರು ಕೈಕಾಲು ಮುರಿದುಕೊಂಡು ಆಸ್ಪತ್ರೆ ಸೇರುತ್ತಿದ್ದಾರೆ. ಸಂಬಂಧಿಸಿದವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಜನರ ಸಿಟ್ಟು ರಟ್ಟೆಗೆ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ.

RELATED ARTICLES

Latest News