Tuesday, April 30, 2024
Homeರಾಷ್ಟ್ರೀಯಸದನದಲ್ಲಿ ಕಾವೇರಿದ ಹನುಮ ಧ್ವಜ ಕಿಚ್ಚು

ಸದನದಲ್ಲಿ ಕಾವೇರಿದ ಹನುಮ ಧ್ವಜ ಕಿಚ್ಚು

ಬೆಂಗಳೂರು,ಫೆ.14- ಮಂಡ್ಯ ಜಿಲ್ಲೆ ಕೆರೆಗೋಡುವಿನ ಹನುಮ ಧ್ವಜದ ವಿಚಾರ ವಿಧಾನಸಭೆಯಲ್ಲಿ ಇಂದು ಪ್ರತಿಧ್ವನಿಸಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಕಾವೇರಿದ ಧ್ವನಿಯಲ್ಲಿ ವಾಗ್ವಾದ ನಡೆಯಿತು. ನಿಯಮ 69 ರಡಿ ವಿರೋಧ ಪಕ್ಷದ ನಾಯಕ ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಕುರಿತು ಮಾತನಾಡುವಾಗ ಕೆರೆಗೋಡುವಿನ ಹನುಮ ಧ್ವಜದ ವಿಚಾರವನ್ನು ಪ್ರಸ್ತಾಪಿಸಲು ಮುಂದಾದರು. ಆಗ ಆಡಳಿತ ಮತ್ತು ಬಿಜೆಪಿ ಸದಸ್ಯರ ನಡುವೆ ಏರಿದ ಧ್ವನಿಯಲ್ಲಿ ವಾಗ್ವಾದ ನಡೆದು, ಸದನದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಹನುಮ ಧ್ವಜದ ವಿಚಾರವನ್ನು ಪ್ರಸ್ತಾಪಿಸಲು ಮುಂದಾಗುತ್ತಿದ್ದಂತೆ ಕೃಷಿ ಸಚಿವ ಚೆಲುವರಾಯಸ್ವಾಮಿ ಆಕ್ಷೇಪ ವ್ಯಕ್ತಪಡಿಸಿ ರಾಷ್ಟ್ರೀಯ ಧ್ವಜವನ್ನು ತೆಗೆದುಹಾಕಿ ಎಂದು ಹೇಳುತ್ತೀರಾ ಎಂದು ಪ್ರಶ್ನಿಸಿದರು. ಶಾಸಕ ರವಿಕುಮಾರ್ ಮಾತನಾಡಿ, ನಿಮ್ಮ ಹೋರಾಟ ರಾಷ್ಟ್ರಧ್ವಜದ ವಿರುದ್ಧವೇ ಎಂದು ಪ್ರಶ್ನಿಸಿದರು. ನಯನಾ ಮೋಟಮ್ಮ ಮಾತನಾಡಿ, ನಿಮಗೆ ರಾಷ್ಟ್ರಧ್ವಜ ಬೇಕೇ, ಹನುಮ ಧ್ವಜ ಬೇಕೇ ಎಂದು ಕೇಳಿದರು. ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಸಭಾಧ್ಯಕ್ಷ ಯು.ಟಿ.ಖಾದರ್‍ರವರು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಜೈಲಿಗೆ ಹಾಕಿ. ಸರ್ಕಾರ ನಿಮ್ಮದೇ ಅಲ್ಲವೇ ಎಂದು ಹೇಳಿದರು.

ಬಿಜೆಪಿಯ ಸುನಿಲ್‍ಕಮಾರ್ ಮಾತನಾಡಿ, ರಾಷ್ಟ್ರಧ್ವಜದ ಬಗ್ಗೆ ನೀವು (ಕಾಂಗ್ರೆಸ್) ತೋರುತ್ತಿರುವ ಕಳಕಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಹುಬ್ಬಳ್ಳಿಯಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನವಾದಾಗ ಕಾಂಗ್ರೆಸ್‍ಗೆ ಈ ಕಳಕಳಿ ಇರಲಿಲ್ಲವೇ ಎಂದು ತಿರುಗೇಟು ನೀಡಿದರು. ಕೆಲಕಾಲ ಏರಿದ ಧ್ವನಿಯಲ್ಲಿ ಪರಸ್ಪರ ಆರೋಪ, ವಾಗ್ವಾದ ನಡೆದು ಸದನದಲ್ಲಿ ಗೊಂದಲ ಉಂಟಾಯಿತು.

ಸಭಾಧ್ಯಕ್ಷರು ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರನ್ನು ಸಮಾಧಾನಪಡಿಸಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರಿಗೆ ಮಾತನಾಡಲು ಅವಕಾಶ ಮಾಡಿಕೊಟ್ಟರು. ಮಾತು ಮುಂದುವರೆಸಿದ ಅಶೋಕ್, ಕೆರೆಗೋಡಿನಲ್ಲಿ ಹನುಮ ಧ್ವಜ ಹಾರಿಸಲಾಗಿದೆ. ಪಂಚಾಯಿತಿ ಸದಸ್ಯರು ಆಗಸ್ಟ್ 15 ರಂದು ರಾಷ್ಟ್ರಧ್ವಜ ಹಾಗೂ ರಾಜ್ಯೋತ್ಸವದಂದು ನಾಡಧ್ವಜವನ್ನು ಹಾರಿಸುತ್ತಾರೆ. 108 ಅಡಿ ಧ್ವಜ ಸ್ತಂಭವನ್ನು ಸುತ್ತಮುತ್ತಲ ಗ್ರಾಮದವರಿಂದ ಹಣ ಸಂಗ್ರಹಿಸಿ ನಿರ್ಮಿಸಿದ್ದಾರೆ. ಒಂದು ವೇಳೆ ಅಕ್ರಮವಾಗಿ ಧ್ವಜಸ್ತಂಭ ನಿಲ್ಲಿಸಿದ್ದರೆ ಏಕೆ ಅವರ ಮೇಲೆ ಕ್ರಮ ಕೈಗೊಳ್ಳಲಿಲ್ಲ ಎಂದು ಪ್ರಶ್ನಿಸಿದರು.

ಕೆರೆಗೋಡಿಗೆ ನಾನು ಹೋಗುವಾಗ ಎಸ್ಕಾರ್ಟ್ ವಾಹನ ಕೆಟ್ಟುಹೋಯಿತು ಎಂದು ಹೇಳಿದರು ಎಂದಾಗ ಸಭಾಧ್ಯಕ್ಷರು ನನ್ನ ಎಸ್ಕಾರ್ಟ್ ಕೂಡ ನಿಂತುಹೋಗಿತ್ತು ಎಂದು ದನಿಗೂಡಿಸಿದರು. ಆಗ ಅಶೊಕ್‍ರವರು ಸಚಿವ ಚೆಲುವರಾಯಸ್ವಾಮಿಯವರ ಎಸ್ಕಾರ್ಟ್ ಕೂಡ ನಿಂತು ಹೋಗಿತ್ತು ಎಂದು ಅವರು ಹೇಳುತ್ತಿಲ್ಲ, ಸರ್ಕಾರವೇ ಕೆಟ್ಟು ಹೋಗಿದೆ ಎಂದು ಟೀಕಿಸಿದರು.

ತೆರಿಗೆ ಅನ್ಯಾಯದ ವಿರುದ್ಧ ಮುಂದುವರೆದ ಕಾಂಗ್ರೆಸ್ ಅಭಿಯಾನ

ರಾಷ್ಟ್ರಧ್ವಜವನ್ನು ಧ್ವಜಸ್ತಂಭದಲ್ಲಿ ಮಧ್ಯಾಹ್ನ ಹಾರಿಸಿದ್ದಾರೆ. ನಾವು ರಾಷ್ಟ್ರಧ್ವಜಕ್ಕೆ ಗೌರವ ಕೊಡುತ್ತೇವೆ. ರಾಷ್ಟ್ರಧ್ವಜವನ್ನು ಹಾರಿಸಿದಾಗ ಶಿಸ್ತುಪಾಲನೆ ಮಾಡಿಲ್ಲ. ಅದನ್ನು ಹಾರಿಸುವಾಗ ಹೂ ಬಳಸಿಲ್ಲ, ಗೌರವ ಸೂಚಿಸಿಲ್ಲ, ಹನುಮ ಧ್ವಜ ಹಾರಿಸಿದವರಿಗೆ ನೋಟಿಸ್ ಕೊಟ್ಟಿಲ್ಲ. ರಾತ್ರಿ 3 ಗಂಟೆ ಸಮಯದಲ್ಲಿ ಹನುಮ ಧ್ವಜವನ್ನು ಇಳಿಸಿದ್ದಾರೆ ಎಂದು ಆರೋಪಿಸಿದರು.

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗಿರುವ ವೈಮನಸ್ಯದಿಂದ ಹೀಗೆ ಮಾಡಿದ್ದಾರೆ. ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದು ನಾವಲ್ಲಾ, ನೀವು. ರಾಷ್ಟ್ರಧ್ವಜ ಹಾರಿಸುವ ಸಂದರ್ಭದಲ್ಲಿ ರಾಷ್ಟ್ರಗೀತೆ ಹಾಡಿಲ್ಲ. 35 ವರ್ಷದ ಹಿಂದೆ ಹುಬ್ಬಳ್ಳಿಯಲ್ಲಿ ರಾಷ್ಟ್ರಧ್ವಜ ಹಾರಿಸಿದ್ದೇವೆ. ಕಾಶ್ಮೀರದ ಲಾಲ್‍ಚೌಕ್‍ನಲ್ಲಿ ರಾಷ್ಟ್ರಧ್ವಜ ಹಾರಿಸಿದ್ದೇವೆ. ಸ್ವಾತಂತ್ರ್ಯ ಬಂದ 75 ವರ್ಷದ ನಂತರ ಚಾಮರಾಜಪೇಟೆ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸಿದ್ದೇವೆ. ನಾವೆಲ್ಲೂ ರಾಷ್ಟ್ರಧ್ವಜ ಇಳಿಸಿ ಎಂದು ಹೇಳಿಲ್ಲ. ಹನುಮನ, ರಾಮನ ಮೇಲಿನ ದ್ವೇಷಕ್ಕೆ ಈ ರೀತಿ ಮಾಡಿದ್ದಾರೆ ಎಂದು ಆರೋಪಿಸಿದರು.

ಸಭಾಧ್ಯಕ್ಷರು ಅವಕಾಶ ಕೊಟ್ಟರೆ ವಾಸ್ತವ ಸ್ಥಿತಿ ಹೇಳುತ್ತೇನೆ ಎಂದು ಶಾಸಕ ರವಿಕುಮಾರ್ ಹೇಳಿದರು. ಆ ಸಂದರ್ಭದಲ್ಲಿ ಸಭಾಧ್ಯಕ್ಷರು ಅವಕಾಶ ನೀಡದೇ ಇದ್ದಾಗ ಈ ವಿಚಾರಕ್ಕೆ ತೆರೆ ಬಿದ್ದಿತು.

RELATED ARTICLES

Latest News