Tuesday, April 30, 2024
Homeರಾಜ್ಯವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಕೆ.ಗೋಪಾಲಯ್ಯಗೆ ಪ್ರಾಣ ಬೆದರಿಕೆ ಪ್ರಕರಣ

ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಕೆ.ಗೋಪಾಲಯ್ಯಗೆ ಪ್ರಾಣ ಬೆದರಿಕೆ ಪ್ರಕರಣ

ಬೆಂಗಳೂರು,ಫೆ.14- ಬಿಬಿಎಂಪಿಯ ಮಾಜಿ ಸದಸ್ಯರೊಬ್ಬರು ಅವಾಚ್ಯ ಶಬ್ದಗಳಿಂದ ಬೆದರಿಸಿ ಪ್ರಾಣಬೆದರಿಕೆ ಹಾಕಿದ್ದು ತಮ್ಮ ಕುಟುಂಬಕ್ಕೆ ರಕ್ಷಣೆ ಒದಗಿಸುವಂತೆ ಮಾಜಿ ಸಚಿವರೂ ಆಗಿರುವ ಬಿಜೆಪಿ ಶಾಸಕ ಕೆ.ಗೋಪಾಲಯ್ಯ ವಿಧಾನಸಭೆಯಲ್ಲಿಂದು ಪ್ರಸ್ತಾಪಿಸಿದ್ದು, ಅದಕ್ಕೆ ಬಿಜೆಪಿಯ ಶಾಸಕರು ಬೆಂಬಲ ವ್ಯಕ್ತಪಡಿಸಿದರು.

ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಬೆದರಿಕೆ ಹಾಕಿದ ಆರೋಪಿಯನ್ನು ಸಂಜೆಯ ಒಳಗೆ ಬಂಧಿಸಬೇಕು. ಇಲ್ಲ ಠಾಣೆಯ ಇನ್ಸ್‍ಪೆಕ್ಟರ್ ಅವರನ್ನು ಅಮಾನತುಪಡಿಸಬೇಕೆಂದು ಖಾರವಾಗಿ ಸೂಚನೆ ನೀಡಿದ ಪ್ರಸಂಗ ನಡೆಯಿತು. ಪ್ರಶ್ನೋತ್ತರದ ಬಳಿಕ ಶೂನ್ಯ ವೇಳೆಯಲ್ಲಿ ಗೋಪಾಲಯ್ಯ ಅವರು ವಿಷಯ ಪ್ರಸ್ತಾಪಿಸಿ ನಿನ್ನೆ ರಾತ್ರಿ 11 ಗಂಟೆ 1 ನಿಮಿಷಕ್ಕೆ ಬಿಬಿಎಂಪಿಯ ಮಾಜಿ ಸದಸ್ಯ ಪದ್ಮರಾಜ್ ತಮಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಆ ಪದಗಳನ್ನು ಇಲ್ಲಿ ಹೇಳಲು ಸಾಧ್ಯವಿಲ್ಲ. ನನಗೆ ಮತ್ತು ನನ್ನ ಕುಟುಂಬಕ್ಕೆ ಪ್ರಾಣ ಬೆದರಿಕೆ ಹಾಕಿದ್ದಾರೆ.

ಬಸವೇಶ್ವರ ನಗರದಲ್ಲಿ ಕ್ಲಬ್ ನಡೆಸುವ ಈ ವ್ಯಕ್ತಿ ರಾತ್ರಿಯಾಗುತ್ತಿದ್ದಂತೆ ಪಾನಮತ್ತನಾಗಿ ಮದವೇರಿ ನನ್ನನ್ನೂ ಸೇರಿದಂತೆ ಕುಟುಂಬದ ಅನೇಕರಿಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾನೆ. ಸುರೇಶ್‍ಕುಮಾರ್ ಅವರಂತಹ ಶಾಸಕರು ಶಕ್ತಿಯಿಲ್ಲದೆ ದೂರು ನೀಡಿಲ್ಲ. ಸದರಿ ವ್ಯಕ್ತಿಯನ್ನು ಬಂಧಿಸಲು ಪೊಲೀಸರು ರಾತ್ರಿಯಿಡೀ ಏಳೆಂಟು ಗಂಟೆ ಅವರ ಮನೆ ಎದುರು ಕಾವಲು ಕಾದಿದ್ದಾರೆ. ಬಾಗಿಲು ತೆರೆದು ಹೊರಬರದೇ ಒಳಗಿದ್ದ ವ್ಯಕ್ತಿ ಬೆಳಿಗ್ಗೆ 10 ಗಂಟೆಗೆ ನಿಶೆ ಇಳಿದ ಮೇಲೆ ಹೊರಹೋಗಿದ್ದಾನೆ. ಇಂತಹವರು ಸಮಾಜಕ್ಕೆ ಬೇಕೇ ಎಂದು ಪ್ರಶ್ನಿಸಿದರು.

ಸದರಿ ವ್ಯಕ್ತಿಯನ್ನು ಬಂಧಿಸಿ 6 ತಿಂಗಳ ಕಾಲ ಗಡಿಪಾರು ಮಾಡಬೇಕು. ತಮ್ಮ ಕುಟುಂಬಕ್ಕೆ ರಕ್ಷಣೆ ನೀಡಬೇಕು. ಬೆಂಗಳೂರಿನಲ್ಲಿ ಅನೈತಿಕವಾಗಿ ನಡೆಯುತ್ತಿರುವ ಕ್ಲಬ್‍ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಬಿಜೆಪಿ ಶಾಸಕ ಸುರೇಶ್‍ಕುಮಾರ್ ಮಾತನಾಡಿ, ಶಾಸಕರಿಗೆ ರಕ್ಷಣೆ ಇಲ್ಲ ಎಂದಾದರೆ ಜನರಿಗೆ ತಪ್ಪು ಸಂದೇಶ ಹೋಗುತ್ತದೆ. ರಾತ್ರಿ ದೂರು ಕೊಟ್ಟರೂ ಈವರೆಗೂ ಏಕೆ ಬಂಧಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸದರಿ ವ್ಯಕ್ತಿಯ ನಡವಳಿಕೆಗೆ ನಾನು ಮತ್ತು ಅಶೋಕ್‍ರವರು ಫಲಾನುಭವಿಗಳಾಗಿದ್ದೇವೆ. ಪೊಲೀಸರು ಆತನ ಮನೆಬಾಗಿಲಿಗೆ ಹೋದಾಗ ಒಳಗಿನಿಂದಲೇ ಆತ ಪ್ರಭಾವಿಗಳಿಗೆ ಕರೆ ಮಾಡಿ ಶಿಫಾರಸ್ಸು ಮಾಡುತ್ತಿದ್ದಾನೆ. ಗೋಪಾಲಯ್ಯ ಅವರಿಗೆ ಬೆದರಿಕೆ ಹಾಕಿದ್ದಾನೆ ಎಂದಾದರೆ ಆತನ ಉದ್ಧಟತನದ ಮಟ್ಟವನ್ನು ಅಂದಾಜಿಸಬಹುದು ಎಂದು ಆರೋಪಿಸಿದರು.

ತೆರಿಗೆ ಅನ್ಯಾಯದ ವಿರುದ್ಧ ಮುಂದುವರೆದ ಕಾಂಗ್ರೆಸ್ ಅಭಿಯಾನ

ಬಿಜೆಪಿಯ ಅರಗ ಜ್ಞಾನೇಂದ್ರ ನಮ್ಮ ಸರ್ಕಾರದಲ್ಲಿ ಕ್ಲಬ್ ಕ್ಯಾಸಿನೋಗಳು ಬಂದ್ ಆಗಿದ್ದವು. ಗೋಪಾಲಯ್ಯ ಅವರಂತಹ ಸಜ್ಜನ ಮನುಷ್ಯರಿಗೆ ಬೆದರಿಕೆ ಹಾಕಿರುವುದು ಖಂಡನೀಯ. ಶಾಸಕರೇ ಅಸಹಾಯಕ ಸ್ಥಿತಿಗೆ ತಲುಪಿದ್ದಾರೆಂದರೆ ಜನಸಾಮಾನ್ಯರ ಪಾಡೇನು? ಯಾವ ಶಕ್ತಿ ಅವನನ್ನು ರಕ್ಷಿಸುತ್ತಿದೆ? ದೂರು ಕೊಟ್ಟರೂ ಏಕೆ ಬಂಧಿಸಿಲ್ಲ? ಎಂದು ಪ್ರಶ್ನಿಸಿದ್ದಲ್ಲದೆ, ಅಕ್ರಮ ಕ್ಲಬ್‍ಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು.

ವಿರೋಧಪಕ್ಷದ ನಾಯಕ ಆರ್.ಅಶೋಕ್, ಬೆದರಿಕೆ ಹಾಕಿದ ವ್ಯಕ್ತಿ ಕುಡಿದಿದ್ದಾನೆ. ಆತನ ನಿಶೆ ಇಳಿಯಲಿ ಎಂದು ಪೊಲೀಸರು ಕಾದು ಕುಳಿತಿರುವುದು ಹಾಸ್ಯಾಸ್ಪದ. ಈ ರೀತಿ ಕಾನೂನಿನಲ್ಲಿ ವಿನಾಯಿತಿ ನೀಡಲು ಅವಕಾಶವಿದೆಯೇ? ಪೊಲೀಸ್ ಠಾಣೆಯಿಂದ ಸ್ವಲ್ಪವೇ ದೂರದಲ್ಲಿದ್ದರೂ ಏಕೆ ಬಂಧಿಸಿಲ್ಲ? ಆರೋಪಿಗಳಿಗೆ ಪೊಲೀಸರು ರಾಜಾತೀಥ್ಯ ನೀಡುವುದು ಅಗತ್ಯವೇ? ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ಶಾಸಕರನ್ನು ಅವಹೇಳನ ಮಾಡಿರುವ ವ್ಯಕ್ತಿ ವಿರುದ್ಧ ಮುಲಾಜಿಲ್ಲದೇ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಸರ್ಕಾರದ ಪರವಾಗಿ ಉತ್ತರಿಸಿದ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ, ಸದಸ್ಯರ ಚರ್ಚೆಗಳನ್ನು ಗೃಹಸಚಿವರ ಗಮನಕ್ಕೆ ತಂದು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಕಾನೂನು ಪಾಲನೆಯ ವಿಷಯದಲ್ಲಿ ನಮ್ಮ ಸರ್ಕಾರ ಯಾವುದೇ ತಾರತಮ್ಯ ಮಾಡುವುದಿಲ್ಲ. ಆ ವ್ಯಕ್ತಿ ಬಿಜೆಪಿಯಲ್ಲಿದ್ದರು, ಕಾಂಗ್ರೆಸ್‍ಗೆ ಬಂದಿದ್ದರು. ಈಗ ಯಾವ ಪಕ್ಷದಲ್ಲಿದ್ದಾರೋ ಗೊತ್ತಿಲ್ಲ. ರಾಜಕೀಯ ಹೊರತಾಗಿ ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.

ಈ ಹಂತದಲ್ಲಿ ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಮಧ್ಯಪ್ರವೇಶಿಸಿ, ನಿನ್ನೆ ರಾತ್ರಿ ಘಟನೆ ನಡೆದರೂ ಇವರನ್ನು ಏಕೆ ಬಂಸಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಆರೋಪಿಯನ್ನು ಇಂದು ಮಧ್ಯಾಹ್ನ ಇಲ್ಲ ಸಂಜೆಯೊಳಗೆ ಬಂಧಿಸಬೇಕು. ಇಲ್ಲವಾದರೆ ಸದರಿ ಠಾಣೆಯ ಇನ್ಸ್‍ಪೆಕ್ಟರ್ ಅನ್ನು ಅಮಾನತು ಮಾಡಿ ಎಂದು ಸೂಚನೆ ನೀಡಿದರು.

ಈ ಹಂತದಲ್ಲಿ ಗೃಹಸಚಿವರು ವಿಧಾನಪರಿಷತ್‍ನಲ್ಲಿದ್ದದ್ದರಿಂದ ಸರ್ಕಾರದಿಂದ ತಕ್ಷಣವೇ ಸ್ಪಷ್ಟನೆ ಸಿಗಲಿಲ್ಲ. ಕೆಲ ಸಮಯದ ಬಳಿಕ ಆರ್.ಅಶೋಕ್‍ರವರು ರಾಜ್ಯದಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ ಹಾಗೂ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ಚರ್ಚೆ ಮಾಡುವಾಗ ಗೃಹಸಚಿವ ಪರಮೇಶ್ವರ್ ಆಗಮಿಸಿದರು. ಆ ಸಂದರ್ಭದಲ್ಲಿ ವಿಚಾರ ಮತ್ತೆ ಗ್ರಾಸವಾಯಿತು. ಉತ್ತರ ನೀಡಿದ ಸಚಿವ ಪರಮೇಶ್ವರ್, ಗೋಪಾಲಯ್ಯ ಅವರ ದೂರು ಆಧರಿಸಿ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಗಣಿಗಾರಿಕೆ : ರಾಜಸ್ಥಾನದ ಹಲವು ಸ್ಥಳಗಳಲ್ಲಿ ED ಶೋಧ

ಆರೋಪಿಯನ್ನು ಬಂಧಿಸಲು ಈಗಲೂ ಅವರ ಮನೆ ಮುಂದೆ ಕಾಯುತ್ತಿದ್ದಾರೆ. ಎಷ್ಟೇ ಬಾಗಿಲು ಬಡಿದರೂ ಬಾಗಿಲು ತೆಗೆಯುತ್ತಿಲ್ಲ. ಅನಿವಾರ್ಯವಾದರೆ ಬಾಗಿಲು ಹೊಡೆದು ಒಳಹೋಗಿ ಬಂಧಿಸಲಾಗುವುದು ಎಂದು ಸ್ಪಷ್ಟಪಡಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸುರೇಶ್‍ಕುಮಾರ್, 1975 ರ ಜೂನ್ 25 ರಂದು ವಾಜಪೇಯಿ, ಮಧುದಂಡವತೆ ಸೇರಿದಂತೆ ಗಣ್ಯ ನಾಯಕರು ಶಾಸಕರ ಭವನದಲ್ಲಿ ತಂಗಿದ್ದರು. ಅವರನ್ನು ಯಾವುದೇ ಮುಲಾಜಿಲ್ಲದೇ ಪೊಲೀಸರು ಬಂಧಿಸಿದ್ದರು. ಈ ವ್ಯಕ್ತಿಗೆ ವಿವಿಐಪಿ ಉಪಚಾರವೇಕೆ. ಇಷ್ಟೊತ್ತಾದರೂ ಬಾಗಿಲು ಕಾಯುತ್ತಿದ್ದಾರೆಂದು ಇದು ಪೊಲೀಸರಿಗೆ ಶೋಭೆ ತರುವುದಿಲ್ಲ. ಅಸಮರ್ಥತೆ ಎಂದಾಗುತ್ತದೆ ಎಂದು ಕಿಡಿಕಾರಿದರು. ಆ ವೇಳೆಗೆ ಅಧಿಕಾರಿಗಳ ಗ್ಯಾಲರಿಯಿಂದ ಬಂದ ಸಂದೇಶ ಪಡೆದು ಸ್ಪಷ್ಟನೆ ನೀಡಿದ ಗೃಹಸಚಿವರು, ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

RELATED ARTICLES

Latest News