Friday, May 24, 2024
Homeರಾಜ್ಯ100 ಎಕರೆಯಲ್ಲಿ ಕ್ರೀಡಾ ವಿಶ್ವವಿದ್ಯಾಲಯ : ಕ್ರೀಡಾ ಸಚಿವ ಬಿ.ನಾಗೇಂದ್ರ

100 ಎಕರೆಯಲ್ಲಿ ಕ್ರೀಡಾ ವಿಶ್ವವಿದ್ಯಾಲಯ : ಕ್ರೀಡಾ ಸಚಿವ ಬಿ.ನಾಗೇಂದ್ರ

ಬೆಂಗಳೂರು,ಫೆ.14- ಯಲಹಂಕ ತಾಲೂಕು ಹೆಸರುಘಟ್ಟ ಹೋಬಳಿಯ ಮಾವಳ್ಳಿಪುರ ಗ್ರಾಮದ ಸರ್ವೆ ನಂ.8 ರಲ್ಲಿ 100 ಎಕರೆಯಲ್ಲಿ ಕ್ರೀಡಾ ವಿಶ್ವವಿದ್ಯಾಲಯ ಮತ್ತು ಸುಸಜ್ಜಿತ ಕ್ರೀಡಾಂಗಣವನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಯುವಜನ ಸಬಲೀಕರಣ ಹಾಗೂ ಕ್ರೀಡಾ ಸಚಿವ ಬಿ.ನಾಗೇಂದ್ರ ತಿಳಿಸಿದ್ದಾರೆ.

ವಿಧಾನಸಭೆಯ ಪ್ರಶ್ನೋತ್ತರದ ಅವಧಿಯಲ್ಲಿ ಯಲಹಂಕ ಕ್ಷೇತ್ರದ ಎಸ್.ಆರ್.ವಿಶ್ವನಾಥ್ ವಿಷಯ ಪ್ರಸ್ತಾಪಿಸಿದಾಗ 60 ಎಕರೆ ಜಮೀನು ಕ್ರೀಡಾ ವಿಶ್ವವಿದ್ಯಾಲಯಕ್ಕಾಗಿ ಮಂಜೂರು ಮಾಡಲು ಕಂದಾಯ ಇಲಾಖೆಗೆ ಪತ್ರ ಬರೆಯಲಾಗಿತ್ತು. ಹೆಚ್ಚುವರಿಯಾಗಿ 40 ಎಕರೆ ಭೂಮಿಯನ್ನು ಮಂಜೂರು ಮಾಡುವಂತೆ ಮನವಿ ಮಾಡಲಾಗಿದೆ. ಒಟ್ಟು 100 ಎಕರೆಯಲ್ಲಿ ಎಲ್ಲಾ ಕ್ರೀಡೆಗಳನ್ನೂ ಒಂದೇ ಸೂರಿನಡಿ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. ಸುಸಜ್ಜಿತವಾದ ಕ್ರೀಡಾಂಗಣ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ವಿಶ್ವನಾಥ್ ಅವರು, ಸಚಿವರು ಕ್ರೀಡಾಂಗಣ ಸ್ಥಾಪನೆ ಮಾಡಿದ ಬಳಿಕ ಉದ್ಘಾಟನೆಯ ದಿನ ಬೆಳ್ಳಿರಥದಲ್ಲಿ ಮೆರವಣಿಗೆ ಮಾಡುವುದಾಗಿ ಹೇಳಿದರು. ಆನೇಕಲ್ ಕ್ಷೇತ್ರದ ಶಿವಣ್ಣ ಅವರು ತಮ್ಮ ಕ್ಷೇತ್ರದಲ್ಲಿ 7 ಲಕ್ಷ ಜನಸಂಖ್ಯೆ ಇದೆ. ಹೀಗಾಗಿ ಆನೇಕಲ್ ಮತ್ತು ಸರ್ಜಾಪುರ ಎರಡೂ ಕಡೆ ಸುಸಜ್ಜಿತ ಕ್ರೀಡಾಂಗಣವನ್ನು ನಿರ್ಮಿಸಿಕೊಡಬೇಕೆಂದು ಮನವಿ ಮಾಡಿದರು.

ತೆರಿಗೆ ಅನ್ಯಾಯದ ವಿರುದ್ಧ ಮುಂದುವರೆದ ಕಾಂಗ್ರೆಸ್ ಅಭಿಯಾನ

ಇದಕ್ಕೆ ಉತ್ತರಿಸಿದ ಸಚಿವ ನಾಗೇಂದ್ರ ಮೊದಲು ಜಿಲ್ಲಾ ಹಾಗೂ ತಾಲೂಕು ಮಟ್ಟದ ಕ್ರೀಡಾಂಗಣ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಆನೇಕಲ್ ತಾಲೂಕಿನ ಕ್ರೀಡಾಂಗಣವನ್ನು ಸುಸಜ್ಜಿತವಾಗಿ ನಿರ್ಮಿಸಲಾಗುವುದು, ತಾವು ಸ್ಥಳಕ್ಕೆ ಭೇಟಿ ನೀಡುವುದಾಗಿ ಭರವಸೆ ನೀಡಿದರು.

5 ಲಕ್ಷಕ್ಕಿಂತ ಮೇಲ್ಪಟ್ಟ ಜನಸಂಖ್ಯೆಯಿರುವ ಪ್ರದೇಶಗಳಲ್ಲಿ 2 ಕ್ರೀಡಾಂಗಣವನ್ನು ನಿರ್ಮಿಸಲು ಮಾರ್ಗಸೂಚಿಯನ್ನು ರೂಪಿಸಲಾಗಿದೆ. ಅದರ ಅನುಸಾರ ಅನುದಾನದ ಲಭ್ಯತೆ ಆಧರಿಸಿ ಕ್ರೀಡಾಂಗಣವನ್ನು ನಿರ್ಮಿಸುವುದಾಗಿ ಭರವಸೆ ನೀಡಿದರು.

RELATED ARTICLES

Latest News