Homeರಾಜ್ಯಸಂಪುಟ ವಿಸ್ತರಣೆ : ಖರ್ಗೆ ಜೊತೆ ಸಿಎಂ-ಡಿಸಿಎಂ ಚರ್ಚೆ

ಸಂಪುಟ ವಿಸ್ತರಣೆ : ಖರ್ಗೆ ಜೊತೆ ಸಿಎಂ-ಡಿಸಿಎಂ ಚರ್ಚೆ

Cabinet expansion: CM-DCM discussion with Kharge

ಬೆಂಗಳೂರು, ಜು.18- ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮತ್ತು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರು ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಸಂಪುಟ ವಿಸ್ತರಣೆ ಕುರಿತು ಮಹತ್ವದ ಚರ್ಚೆ ನಡೆಸಿದ್ದಾರೆ.ಕಳೆದ ಮೂರು ದಿನಗಳಿಂದಲೂ ಮಲ್ಲಿಕಾರ್ಜುನ ಖರ್ಗೆ ಅವರು,ಬೆಂಗಳೂರಿನಲ್ಲೇ ಉಳಿದಿದ್ದಾರೆ.

ಡಿ.ಕೆ.ಶಿವ ಕುಮಾರ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ ಅವರು ಮೊನ್ನೆ ದೆಹಲಿಗೆ ತೆರಳಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್‌, ರಣದೀಪ್‌ಸಿಂಗ್‌ ಸುರ್ಜೇವಾಲ ಅವರನ್ನು ಭೇಟಿ ಮಾಡಿ ಸಚಿವ ಸಂಪುಟ ವಿಸ್ತರಣೆ ಮತ್ತು ಪಕ್ಷ ಸಂಘಟನೆ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದರು.

ಮಲ್ಲಿಕಾರ್ಜುನ ಖರ್ಗೆ ಅವರು ದೆಹಲಿಯಲ್ಲಿ ಇಲ್ಲದೇ ಇದ್ದ ಕಾರಣಕ್ಕೆ ಚರ್ಚೆಗಳು ಅಪೂರ್ಣವಾಗಿದ್ದವು. ನಿನ್ನೆ ತಡ ರಾತ್ರಿ ಬೆಂಗಳೂರಿಗೆ ಆಗಮಿಸಿದ ಡಿ.ಕೆ.ಶಿವಕುಮಾರ್‌ ಅವರು, ಇಂದು ಬೆಳಗ್ಗೆ ಸದಾಶಿವನಗರದಲ್ಲಿರುವ ಖರ್ಗೆ ಅವರ ನಿವಾಸಕ್ಕೆ ಭೇಟಿ ನೀಡಿದರು.
ಕಾಂಗ್ರೆಸ್‌‍ ಹೈಕಮಾಂಡ್‌ನ ನಾಯಕರು ಸಂಪುಟ ವಿಸ್ತರಣೆಗೆ ಹಸಿರು ನಿಶಾನೆ ತೋರಿಸಿದ್ದಾರೆ.

ಆದರೆ ಕೆಲವರ ಹೆಸರುಗಳ ಬಗ್ಗೆ ಅಸಮಾಧಾನಗಳಿವೆ. ಡಿ.ಕೆ.ಶಿವ ಕುಮಾರ್‌, ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್‌ ಪ್ರತ್ಯೇಕವಾದ ಪಟ್ಟಿ ಸಲ್ಲಿಸಿದ್ದರು. ಪ್ರಮುಖ ನಾಯಕರು ನೀಡಿದ್ದ ಸಂಭವನೀಯ ಸಚಿವರ ಕರಡು ಪಟ್ಟಿಗೆ ಹೈಕಮಾಂಡ್‌ ನಾಯಕರು ಅಸಮಾಧಾನ ವ್ಯಕ್ತಪಡಿಸಿದರು. ಬದಲಾಗಿ ಕೆಲ ಮಾನದಂಡಗಳನ್ನು ನಿಗದಿ ಮಾಡಿ ಸಂಪುಟ ವಿಸ್ತರಣೆಯಲ್ಲಿ ಯಾರನ್ನೆಲ್ಲಾ ಪರಿಗಣಿಸಬೇಕು ಎಂಬ ನಿರ್ದೇಶನ ನೀಡಿದರು.

ಅದರನುಸಾರ ಈಗಾಗಲೇ ಡಿ.ಕೆ.ಶಿವ ಕುಮಾರ್‌, ಪರಿಷ್ಕೃತ ಕರಡು ಪಟ್ಟಿಯನ್ನು ಸಿದ್ಧಪಡಿಸಿಕೊಂಡಿದ್ದಾರೆ.ಮಲ್ಲಿಕಾರ್ಜುನ ಖರ್ಗೆಯವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಅವರೊಂದಿಗೆ ಮಾತುಕತೆಯ ಮೂಲಕ ಕೆಲ ನಿರ್ದೇಶನಗಳನ್ನು ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ದೆಹಲಿಯಲ್ಲಾದ ಚರ್ಚೆಗಳ ಕುರಿತು ಖರ್ಗೆ ಅವರಿಗೆ, ಡಿ.ಕೆ.ಶಿವಕುಮಾರ್‌ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಖರ್ಗೆ ಅವರು ಇಂದು ದೆಹಲಿಗೆ ತೆರಳಿದ್ದು, ಡಿ.ಕೆ.ಶಿವಕುಮಾರ್‌ ಅವರು ವಿಮಾನ ನಿಲ್ದಾಣದವರೆಗೂ ಬೀಳ್ಕೊಟ್ಟಿದ್ದಾರೆ.

ದೆಹಲಿಗೆ ತೆರಳಿದ ಬಳಿಕ ಖರ್ಗೆ ಅವರು, ರಾಹುಲ್‌ ಗಾಂಧಿ, ಕೆ.ಸಿ.ವೇಣುಗೋಪಾಲ್‌, ರಣದೀಪ್‌ ಸಿಂಗ್‌ ಸುರ್ಜೇವಾಲ ಅವರ ಜೊತೆ ಚರ್ಚೆ ಮಾಡಲಿದ್ದಾರೆ ಎಂದು ಹೇಳಲಾಗಿದೆ.
ಒಂದು ವೇಳೆ ಈವರೆಗಿನ ಚರ್ಚೆಯಲ್ಲಿ ಅಖೈರುಗೊಂಡಿರುವ ಪಟ್ಟಿಯೇ ಸಮರ್ಪಕವಾಗಿದೆ ಎನಿಸಿದರೆ, ಹೈಕಮಾಂಡ್‌ ನಾಯಕರು ಸಂಪುಟ ವಿಸ್ತರಣೆಗೆ ಹಸಿರು ನಿಶಾನೆ ನೀಡಲಿದ್ದಾರೆ ಅಥವಾ ಮತ್ತಷ್ಟು ಚರ್ಚೆಗಳು ಅಗತ್ಯ ಎನಿಸಿದರೆ, ಮುಂದಿನ ವಾರದೊಳಗೆ ಮುಖ್ಯಮಂತ್ರಿಯವರನ್ನು ದೆಹಲಿಗೆ ಆಹ್ವಾನಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ನಿನ್ನೆ ದೆಹಲಿಯಲ್ಲಿ ಡಿ.ಕೆ.ಶಿವಕುಮಾರ್‌ ಅವರು ಸಚಿವ ಸ್ಥಾನ ಆಕಾಂಕ್ಷಿಗಳ ಜೊತೆ ಚರ್ಚೆ ನಡೆಸಿದ್ದರು. ಹೈಕಮಾಂಡ್‌ ಹೊಸ ಮುಖಗಳಿಗೆ ಮಣೆ ಹಾಕಬೇಕೆಂದು ಸ್ಪಷ್ಟ ನಿರ್ದೇಶನ ನೀಡಿರುವುದರಿಂದ ಹಿರಿಯ ನಾಯಕರು ಅಸಮಾಧಾನಗೊಳ್ಳುವ ಸಾಧ್ಯತೆ ಇದೆ.
ಒಂದು ವೇಳೆ ಅಸಮಾಧಾನ, ಅತೃಪ್ತಿಗಳು ತೀವ್ರಗೊಂಡರೆ ಅದನ್ನು ನಿರ್ವಹಿಸುವ ಕುರಿತು ಡಿ.ಕೆ.ಶಿವಕುಮಾರ್‌ ಸಮಾಲೋಚನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

RELATED ARTICLES

Latest News