Homeರಾಜ್ಯಸರ್ಕಾರಿ ಶಾಲೆಯ ಮಕ್ಕಳಿಗೆ ಅವಧಿ ಮೀರಿದ ಹಾಲಿನ ಪುಡಿ ವಿತರಿಸಲಾಗುತ್ತಿದೆಯೇ..?

ಸರ್ಕಾರಿ ಶಾಲೆಯ ಮಕ್ಕಳಿಗೆ ಅವಧಿ ಮೀರಿದ ಹಾಲಿನ ಪುಡಿ ವಿತರಿಸಲಾಗುತ್ತಿದೆಯೇ..?

ರಾಯಚೂರು, ಜು.18- ಸರ್ಕಾರಿ ಶಾಲೆಯ ಮಕ್ಕಳಿಗೆ ಅವಧಿ ಮೀರಿದ ಹಾಲಿನ ಪುಡಿಯನ್ನು ವಿತರಿಸಲಾಗುತ್ತಿದೆಯೇ? ಎಂಬ ಅನುಮಾನ ಕಾಡಲಾರಂಭಿಸಿದ್ದು, ಅಧಿಕಾರಿಗಳು ಸಮರ್ಪಕ ಉತ್ತರ ನೀಡಲಾಗದೆ ಪರದಾಡುತ್ತಿದ್ದಾರೆ. 2013ರಲ್ಲಿ ಹಾಲಿನ ಉತ್ಪಾದನೆ ಮಾರುಕಟ್ಟೆ ಬೇಡಿಕೆಗಿಂತಲೂ ಹೆಚ್ಚಾದಾಗ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಕ್ಷೀರಭಾಗ್ಯ ಯೋಜನೆಯನ್ನು ರೂಪಿಸಿತ್ತು. ಹೆಚ್ಚುವರಿ ಹಾಲನ್ನು ದ್ರಾವಣ ರೂಪಕ್ಕೆ ಪರಿವರ್ತಿಸಿ, ಒಂದರಿಂದ ಹತ್ತನೇ ತರಗತಿ ಮಕ್ಕಳಿಗೆ ಆರಂಭದಲ್ಲಿ ವಾರದ ಮೂರು ದಿನ ಕೆನೆ ಭರಿತ ಬಿಸಿ ಹಾಲು ನೀಡಲಾಗುತ್ತಿತ್ತು. 2017ರಲ್ಲಿ ಅದನ್ನು ವಾರದಲ್ಲಿ 5 ದಿನಕ್ಕೆ ವಿಸ್ತರಿಸಲಾಗಿತ್ತು.

ಪ್ರತಿ ಮಗುವಿಗೂ 150ಮಿ.ಲೀ. ಹಾಲು ನೀಡಲು ಕನಿಷ್ಠ 18 ಗ್ರಾಂ. ಹಾಲಿನ ಪುಡಿಯನ್ನು ಬಳಸಲು ಸೂಚಿಸಲಾಗಿತ್ತು. ಇದರಿಂದ ಮಕ್ಕಳ ಪೌಷ್ಠಿಕಾಂಶ ಹೆಚ್ಚಾಗುವ ಜೊತೆಗೆ ಹೆಚ್ಚುವರಿ ಹಾಲಿನ ಮೌಲ್ಯವರ್ಧಿತ ಬಳಕೆಯಿಂದ ರೈತರಿಗೂ ಅನಕೂಲವಾಗುತ್ತಿತ್ತು.

ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಪೋಷಣ್‌ ಅಭಿಯಾನ ಮತ್ತು ರಾಜ್ಯ ಸರ್ಕಾರದ ಆರ್ಥಿಕ ನೆರವಿನಲ್ಲಿ ಯೋಜನೆ ಚಾಲ್ತಿಯಲ್ಲಿದೆ. ಜಿಲ್ಲಾ ಪಂಚಾಯಿತಿ ಮೇಲುಸ್ತುವಾರಿಯಲ್ಲಿ ಶಿಕ್ಷಣ ಇಲಾಖೆಯ ಅಕ್ಷರ ದಾಸೋಹ ಘಟಕ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಮಹತ್ವದ ಈ ಯೋಜನೆಯ ಬಗ್ಗೆ ಅಧಿಕಾರಿಗಳು ಮತ್ತು ಕೆಎಂಎಫ್‌ನ ಹೊಣೆಗೇಡಿತನ ಎದ್ದು ಕಾಣುತ್ತಿದೆ.

ಕೊಪ್ಪಳದಲ್ಲಿ ದನದ ಕೊಟ್ಟಿಗೆಯಲ್ಲಿ ಕ್ಷೀರಭಾಗ್ಯ ಯೋಜನೆಯ ಹಾಲಿನ ಪುಡಿಯನ್ನು ಸಂಗ್ರಹಿಸಿರುವುದು ಇತ್ತೀಚೆಗೆ ಪತ್ತೆಯಾಗಿತ್ತು. ಅದಾದ ಬಳಿಕ ಈಗ ರಾಯಚೂರು-ದೇವದುರ್ಗದ ಜಮೀನು ಒಂದರಲ್ಲಿ 39 ಚೀಲ ಹಾಲಿನ ಪುಡಿ ದಾಸ್ತಾನು ಪತ್ತೆಯಾಗಿದೆ. 760ಕೆ.ಜಿ.ಗೂ ಅಧಿಕ ಪ್ರಮಾಣದ ಈ ಹಾಲಿನ ಪುಡಿಯನ್ನು ಸಂಗ್ರಹಿಸುತ್ತಿರುವ ಜಾಗ ಆತಂಕ ಹುಟ್ಟಿಸಿದಂತಿದೆ.

ದನದ ಮೇವು, ತುಕ್ಕು ಹಿಡಿದ ಕೃಷಿ ಪರಿಕರಗಳು ಮತ್ತು ಇತರ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿಟ್ಟಿರುವ ಹಳೆಯ ಮುರುಕಲು ಶೆಡ್‌ನಲ್ಲಿ ಮಕ್ಕಳಿಗೆ ನೀಡಲಾಗುವ ಹಾಲಿನ ಪುಡಿಯನ್ನು ಶೇಖರಿಸಲಾಗಿದೆ. ಅದರಲ್ಲಿ ಎರಡು ಚೀಲಗಳನ್ನು ತೆರೆದು ಭಾಗಶಃ ಹಾಲಿನ ಪುಡಿಯನ್ನು ತೆಗೆದುಕೊಳ್ಳಲಾಗಿದೆ.

ಆತಂಕಕಾರಿ ವಿಚಾರವೆಂದರೆ ಈ ದಾಸ್ತಾನಿನಲ್ಲಿ ಒಂದೆರಡು ಚೀಲಗಳ ಹಾಲಿನ ಪುಡಿ ಅವಧಿ ಮೀರಿರುವುದು ಕಂಡು ಬಂದಿದೆ. ನಾಲ್ಕೈದು ತಿಂಗಳಷ್ಟು ಗಡುವು ಮೀರಿದ ಹಾಲಿನ ಪುಡಿಯನ್ನು ಸಂಗ್ರಹಿಸಿಟ್ಟಿರುವುದು ತೀವ್ರ ಕುತೂಹಲ ಕೆರಳಿಸಿದೆ. ಮಕ್ಕಳಿಗೆ ಉಳಿದ ಹಾಲಿನ ಪುಡಿಯ ಜೊತೆಗೆ ಅವಧಿ ಮೀರಿದ ಹಾಲಿನ ಪುಡಿಯನ್ನು ಸೇರಿಸಿ ಪೂರೈಸಲಾಗುತ್ತಿದೆಯೇ ಎಂಬ ಅನುಮಾನಗಳು ವ್ಯಕ್ತವಾಗಿದೆ.

ಕೊಪ್ಪಳ, ರಾಯಚೂರು ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಪೌಷ್ಠಿಕತೆ ತಾಂಡವವಾಡುತ್ತಿದೆ. ಮಕ್ಕಳ ಆರೋಗ್ಯ ಸುಧಾರಣೆಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹಲವಾರು ಯೋಜನೆಗಳನ್ನು ರೂಪಿಸಿ ವ್ಯವಸ್ಥೆ ಸುಧಾರಿಸಲು ಹರಸಾಹಸ ಪಡುತ್ತಿವೆ. ಆದರೆ ಕೆಳ ಹಂತದಲ್ಲಿ ಅಧಿಕಾರಿಗಳ ಉದಾಸೀನತೆ, ಬೇಜವಾಬ್ದಾರಿತನದಿಂದ ಪ್ರಮುಖವಾದ ಯೋಜನೆ ಹಳ್ಳ ಹಿಡಿಯುವಂತಾಗಿದೆ.

ಹಾಲಿನ ಪುಡಿ ಕಳಪೆ ದಾಸ್ತಾನಿನ ಬಗ್ಗೆ ತಾವು ಹೊಣೆಗಾರರಲ್ಲ ಎಂದು ಅಕ್ಷರ ದಾಸೋಹ ಯೋಜನೆಯ ಅಧಿಕಾರಿಗಳು ನುಣಚಿಕೊಳ್ಳುತ್ತಿದ್ದಾರೆ. ಹಾಲಿನ ಪುಡಿ ದಾಸ್ತಾನು ಮತ್ತು ಪೂರೈಕೆ ಕೆಎಂಎಫ್‌ನ ಜವಾಬ್ದಾರಿ. ರಾಯಚೂರು ಜಿಲ್ಲೆಯ ಶಾಲೆಗಳಿಗೆ ಪೂರೈಕೆಯಾಗಬೇಕಿದ್ದ ಹಾಲಿನ ಪುಡಿಯ ದಾಸ್ತಾನು ನೋಡಿದರೆ ತಮಗೆ ಬೇಸರವಾಗುತ್ತಿದೆ. ಇದು ಸೂಕ್ತವಾದ ಜಾಗವಲ್ಲ, ಈ ಬಗ್ಗೆ ಕೆಎಂಎಫ್‌ ಅಧಿಕಾರಿಗಳೇ ಉತ್ತರ ನೀಡಬೇಕಿದೆ ಎಂದು ಹೇಳಿದ್ದಾರೆ.

RELATED ARTICLES

Latest News