ಬೆಂಗಳೂ : ಕಳೆದ ಹಲವಾರು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ಪತ್ನಿ ಚೆನ್ನಮ್ಮ(85) ಅವರು ನಿಧನರಾಗಿದ್ದಾರೆ. ಅವರ ನಿಧನದಿಂದ ಒಂದು ಯುಗಾಂತ್ಯದಂತಾಗಿದ್ದು, ದೇವೇಗೌಡರ ಬದುಕಿನ ಅತ್ಯಂತ ಭದ್ರವಾದ ಆಧಾರಸ್ತಂಭ ಕಳಚಿದಂತಾಗಿದೆ.
ಚೆನ್ನಮ್ಮ ದೇವೇಗೌಡ ಅವರ ನಿಧನಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್, ಪ್ರಧಾನಮಂತ್ರಿ ನರೇಂದ್ರ ಮೋದಿ ,ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, , ಕೇಂದ್ರ ಸಚಿವರಾದ ರಾಜ್ ನಾಥ್ ಸಿಂಗ್ ,ಅಮಿತ್ ಶಾ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ,ಸಿದ್ದರಾಮಯ್ಯ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಸೇರಿದಂತೆ ಅನೇಕ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಮೃತರು ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ, ಪುತ್ರರಾದ ಎಚ್.ಡಿ.ಬಾಲಕೃಷ್ಣಗೌಡ, ಹೆಚ್.ಡಿ ರೇವಣ್ಣ , ಎಚ್ .ಡಿ. ಕುಮಾರಸ್ವಾಮಿ, ಅಳಿಯ ಡಾ. ಸಿ.ಎನ್. ಮಂಜುನಾಥ್ ಪುತ್ತಿಯರಾದ ಅನಸೂಯ, ಶೈಲಜಾ ಅಳಿಯಂದಿರು ಮೊಮ್ಮಕ್ಕಳು ಸೇರಿದಂತೆ ಬಂಧು, ಬಳಗ, ಅಪಾರ ಅಭಿಮಾನಿಗಳನ್ನು ಬಿಟ್ಟು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಭಾನುವಾರ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಪಡವಲಹಿಪ್ಪೆ ಗ್ರಾಮದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಕಳೆದ ಕೆಲವು ದಿನಗಳಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಚೆನ್ನಮ್ಮ ಅವರನ್ನು ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ
ದಾಖಲಿಸಲಾಗಿತ್ತು.

ಮಣಿಪಾಲ್ ಆಸ್ಪತ್ರೆಯ ನುರಿತ ವೈದ್ಯರಾದ
ಡಾ. ಸತ್ಯನಾರಾಯಣ ಮೈಸೂರು ಹಾಗೂ ಡಾ. ಸುನೀಲ್ ಕಾರಂತ್ ನೇತೃತ್ವದ ತಂಡದಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ತುರ್ತು ಚಿಕಿತ್ಸಾ ಘಟಕದಲ್ಲಿಚಿಕಿತ್ಸೆ ಪಡೆಯುತ್ತಿದ್ದ ಚೆನ್ನಮ್ಮ ಅವರಿಗೆ ಬೆಳಗಿನಿಂದಲೇ ಉಸಿರಾಟದಲ್ಲಿ ತೀರ ತೊಂದರೆ ಕಾಣಿಸಿಕೊಂಡಿತ್ತು. ರಕ್ತದೊತ್ತಡ ಸಹಜ ಸ್ಥಿತಿಯಲ್ಲಿದ್ದರೂ ಉಸಿರಾಟದ ತೊಂದರೆಗೆ ವೈದ್ಯರು ವಿವಿಧ ಚಿಕಿತ್ಸೆಗಳನ್ನು ನೀಡಿದರೂ ಉಳಿಸಿಕೊಳ್ಳುವ ಅವರ ಪ್ರಯತ್ನ ಈಡೇರಲಿಲ್ಲ.ಈ ವೇಳೆ ಆಸ್ಪತ್ರೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವ ಹೆಚ್.ಡಿ. ರೇವಣ್ಣ ಸೇರಿದಂತೆ ಕುಟುಂಬದ ಕೆಲವು ಸದಸ್ಯರು ಅಲ್ಲಿಯೇ ಇದ್ದರು.
ಪದ್ಮನಾಭನಗರದ ನಿವಾಸಕ್ಕೆ ಪಾರ್ಥೀವ ಶರೀರ :
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಧರ್ಮ ಪತ್ನಿ ಚೆನ್ನಮ್ಮರ ಅವರ ಪಾರ್ಥೀವ ಶರೀರವನ್ನು ಪದ್ಮನಾಭನಗರದ ನಿವಾಸಕ್ಕೆ ಇಂದು ರಾತ್ರಿ 9 ಗಂಟೆ ವೇಳೆಗೆ ತರಲಾಗುತ್ತದೆ.ಮನೆಯಲ್ಲಿ ಸಂಪ್ರದಾಯದಂತೆ ವಿಧಿ ವಿಧಾನಗಳನ್ನು ನೆರವೇರಿಸಿದ ಬಳಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ.
ನಾಳೆ ಮಧ್ಯಾಹ್ನದವರೆಗೂ ಚೆನ್ನಮ್ಮ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.ಅನಂತರ ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಗೆ ಪಾರ್ಥಿವ ಶರೀರವನ್ನು ಕೊಂಡೊಯ್ದು ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಸೋಮವಾರ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಗೌಡರ ಕುಟುಂಬದ ಆಪ್ತ ಮೂಲಗಳು ತಿಳಿಸಿವೆ.
ಕಂಬನಿ ನಡೆದ ಪುತ್ರರು
ಚೆನ್ನಮ್ಮ ದೇವೇಗೌಡ ಅವರು ನಿಧನರಾಗಿದ್ದಾರೆ ಎಂದು ವೈದ್ಯರು ಅಧಿಕೃತವಾಗಿ ಘೋಷಣೆ ಮಾಡುತ್ತಿದ್ದಂತೆ ಆಸ್ಪತ್ರೆಯಲ್ಲಿದ್ದ ಪುತ್ರರು ಮತ್ತು ಪುತ್ರಿಯರು ತಮ್ಮ ತಾಯಿಯನ್ನು ನೆನಪಿಸಿಕೊಂಡು ಬಿಕ್ಕಿಬಿಕ್ಕಿ ಅತ್ತರು .
ತಮ್ಮ ಜೀವನದ ಏಳಿಗೆಗಾಗಿ ಇಡೀ ಜೀವನವನ್ನೇ ಮುಡುಪಾಗಿಟ್ಟಿದ್ದ ತಾಯಿಯನ್ನು ಸ್ಮರಿಸಿಕೊಂಡು ದುಃಖ ತಡೆಯಲಾರದೆ ಕಣ್ಣೀರು ಸುರಿಸಿದರು.
ಧೀಮಂತ ನಾಯಕನ ‘ಶಕ್ತಿ’ಯಾಗಿದ್ದ ಚೆನ್ನಮ್ಮ
ಅಧಿಕಾರದ ಉತ್ತುಂಗದಲ್ಲೂ ಸರಳತೆಯ ಸಾಕಾರವಾಗಿದ್ದ ಹೆಚ್. ಡಿ. ದೇವೇಗೌಡರು ಕರ್ನಾಟಕದ ಮುಖ್ಯಮಂತ್ರಿಯಾಗಿ, ನಂತರ ದೇಶದ ಪ್ರಧಾನಿಯಾಗಿ ಉನ್ನತ ಹುದ್ದೆಗಳನ್ನು ಅಲಂಕರಿಸಿದರೂ, ಅವರ ಮನೆಯಲ್ಲಿನ ಸರಳತೆಯನ್ನು ಕಾಯ್ದುಕೊಳ್ಳುವಲ್ಲಿ ಚೆನ್ನಮ್ಮನವರ ಪಾತ್ರ ಹಿರಿದು. ಅಧಿಕಾರದ ಆಮಿಷಗಳಿಗಿಂತ, ಸಂಸಾರಿಕ ಬದ್ಧತೆ ಮತ್ತು ಮೌಲ್ಯಗಳಿಗೇ ಅವರು ಹೆಚ್ಚಿನ ಆದ್ಯತೆ ನೀಡಿದ್ದರು.
ರಾಜಕೀಯದ ಗದ್ದಲಗಳ ನಡುವೆಯೂ ಕುಟುಂಬವನ್ನು ಭದ್ರವಾಗಿ ಹಿಡಿದಿಟ್ಟುಕೊಂಡಿದ್ದ ಅವರು, ದೇವೇಗೌಡರಿಗೆ ದೈಹಿಕ ಮತ್ತು ಮಾನಸಿಕ ನೆಮ್ಮದಿಯ ತಾಣವಾಗಿದ್ದರು.
ದೇವೇಗೌಡರು ಹಳ್ಳಿ ಹಳ್ಳಿಗಳಲ್ಲಿ ಸಂಚರಿಸಿ, ರಾಜಕೀಯದ ಏರಿಳಿತಗಳನ್ನು ಎದುರಿಸುತ್ತಿದ್ದಾಗ, ಮನೆಯ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ ಪತಿಗೆ ಸಂಪೂರ್ಣ ಬೆಂಬಲ ನೀಡಿದವರು ಚೆನ್ನಮ್ಮನವರು.
ಕಷ್ಟದ ದಿನಗಳಲ್ಲಿಯೂ ಧೃತಿಗೆಡದೆ, ಗೌಡರಿಗೆ ಬೆನ್ನೆಲುಬಾಗಿ ನಿಂತು ಅವರ ರಾಜಕೀಯ ಮಹತ್ವಾಕಾಂಕ್ಷೆಗಳಿಗೆ ಬಲ ತುಂಬಿದ್ದರು.
”ನನ್ನ ರಾಜಕೀಯ ಜೀವನದ ಪ್ರತಿ ಹಂತದಲ್ಲೂ ಚೆನ್ನಮ್ಮನವರ ಬೆಂಬಲವಿದೆ. ನನ್ನ ಯಶಸ್ಸಿನ ಹಿಂದೆ ಅವರ ತ್ಯಾಗ ಮತ್ತು ತಾಳ್ಮೆಯ ಪಾತ್ರ ಅತಿ ದೊಡ್ಡದು,” ಎಂದು ಸ್ವತಃ ದೇವೇಗೌಡರೇ ಅನೇಕ ವೇದಿಕೆಗಳಲ್ಲಿ ಹೆಮ್ಮೆಯಿಂದ ಹೇಳಿಕೊಂಡಿದ್ದರು.
ಮೌನ ಸಾಧಕಿ
ಸಾರ್ವಜನಿಕವಾಗಿ ಹೆಚ್ಚಿನ ಪ್ರಚಾರವನ್ನು ಬಯಸದ ಚೆನ್ನಮ್ಮನವರು, ತೆರೆಮರೆಯಲ್ಲಿಯೇ ಕುಟುಂಬದ ಆಧಾರಸ್ತಂಭವಾಗಿ ಕಾರ್ಯನಿರ್ವಹಿಸಿದ್ದರು. ದೇವೇಗೌಡರ ಸುದೀರ್ಘ ರಾಜಕೀಯ ಪಯಣದಲ್ಲಿ ಅವರು ಅನುಭವಿಸಿದ ಕಷ್ಟಗಳು, ತಳಮಳಗಳು ಮತ್ತು ಸವಾಲುಗಳನ್ನು ಮೌನವಾಗಿ ಭರಿಸಿದವರು ಅವರು.
ಭಾರತದ ರಾಜಕಾರಣದಲ್ಲಿ ಅಪರೂಪದ ವ್ಯಕ್ತಿತ್ವಗಳ ಸಾಲಿನಲ್ಲಿ ನಿಲ್ಲುವವರು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು. ಕೇವಲ ಒಬ್ಬ ಸಾಮಾನ್ಯ ಶಾಸಕರಾಗಿ ಆರಂಭವಾದ ಅವರ ಪಯಣ, ದೇಶದ ಉನ್ನತ ಹುದ್ದೆಯಾದ ಪ್ರಧಾನಿ ಪಟ್ಟದವರೆಗೆ ತಲುಪಿದ ಕಥೆಯ ಹಿಂದೆ ಎದ್ದು ಕಾಣುವ ಶಕ್ತಿ ಅವರ ಪತ್ನಿ ಚೆನ್ನಮ್ಮನವರದ್ದು.
ಬೆನ್ನೆಲುಬಾಗಿ ನಿಂತ ಧೈರ್ಯದ ಸಂಕೇತ
ದೇವೇಗೌಡರು ರಾಜಕೀಯದ ಏರಿಳಿತಗಳಲ್ಲಿ, ಸೋಲು-ಗೆಲುವುಗಳ ಸವಾಲುಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾಗ, ಕುಟುಂಬದ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಂಡವರು ಚೆನ್ನಮ್ಮನವರು. ಗೌಡರು ಹಳ್ಳಿ ಹಳ್ಳಿಗಳಲ್ಲಿ ತಿರುಗುತ್ತಾ, ಜನಸೇವೆ ಮತ್ತು ಪಕ್ಷ ಸಂಘಟನೆಯಲ್ಲಿ ಮುಳುಗಿದ್ದಾಗ, ಮನೆಯ ವ್ಯವಸ್ಥೆ, ಮಕ್ಕಳ ವಿದ್ಯಾಭ್ಯಾಸ ಮತ್ತು ಕುಟುಂಬದ ಸ್ಥಿರತೆಯನ್ನು ಕಾಪಾಡುವ ಮೂಲಕ ಅವರು ಗೌಡರಿಗೆ ಬಲವಾದ ಬೆನ್ನೆಲುಬಾಗಿ ನಿಂತರು.

ನನ್ನ ಯಶಸ್ಸಿನ ಹಿಂದೆ ಅವರಿದ್ದಾರೆ
ದೇವೇಗೌಡರೇ ಸ್ವತಃ ಹಲವು ವೇದಿಕೆಗಳಲ್ಲಿ, “ನನ್ನ ರಾಜಕೀಯ ಜೀವನದ ಏಳಿಗೆಯಲ್ಲಿ ಚೆನ್ನಮ್ಮನ ಪಾತ್ರ ಅತಿ ದೊಡ್ಡದು. ನಾನು ರಾಜಕೀಯವಾಗಿ ಇಷ್ಟು ಎತ್ತರಕ್ಕೆ ಬೆಳೆಯಲು ಅವರು ಕೊಟ್ಟ ಬೆಂಬಲ ಮತ್ತು ಮನೆ ನಡೆಸಿದ ರೀತಿ ಕಾರಣ” ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಕಠಿಣ ಸಂದರ್ಭಗಳಲ್ಲಿ, ರಾಜಕೀಯ ಪಿತೂರಿಗಳು ನಡೆದಾಗಲೂ ದೇವೇಗೌಡರಿಗೆ ಮಾನಸಿಕ ಧೈರ್ಯ ತುಂಬುವ ಕೆಲಸವನ್ನು ಚೆನ್ನಮ್ಮನವರು ಮಾಡಿಕೊಂಡು ಬಂದಿದ್ದರು.
ತ್ಯಾಗ ಮತ್ತು ಸಹನೆ
ಅಧಿಕಾರದ ಉತ್ತುಂಗದಲ್ಲಿದ್ದಾಗಲೂ ಪ್ರಚಾರದ ಹಂಗಿಲ್ಲದ, ಸರಳ ಜೀವನ ನಡೆಸುವ ಮೂಲಕ ರಾಜಕೀಯ ಕುಟುಂಬಗಳಿಗೆ ಅವರು ಮಾದರಿಯಾಗಿದ್ದಾರೆ.ಪರಿವಾರದ ಒಗ್ಗಟ್ಟು: ರಾಜಕೀಯ ಒತ್ತಡಗಳ ನಡುವೆಯೂ ಕುಟುಂಬವನ್ನು ಒಗ್ಗೂಡಿಸಿ ಕೊಂಡು ಹೋಗುವ ಕಲೆ ಚೆನ್ನಮ್ಮನವರದ್ದು. ಇದು ಇಂದಿನ ಪೀಳಿಗೆಯ ರಾಜಕಾರಣಿಗಳಿಗೆ ಕುಟುಂಬದ ಮೌಲ್ಯಗಳನ್ನು ಕಲಿಸುತ್ತದೆ.
ಒಬ್ಬ ನಾಯಕನ ಯಶಸ್ಸಿನ ಹಿಂದೆ ಕೇವಲ ಆತನ ವ್ಯಕ್ತಿತ್ವ ಮಾತ್ರವಲ್ಲ, ಆತನಿಗೆ ಆಧಾರಸ್ತಂಭವಾಗಿ ನಿಲ್ಲುವ ಸಹಧರ್ಮಿಣಿಯ ಪಾತ್ರ ಎಷ್ಟು ನಿರ್ಣಾಯಕ ಎಂಬುದನ್ನು ಇವರ ಬದುಕು ಸಾಬೀತುಪಡಿಸುತ್ತದೆ. ಹಿಂದೆ ದೇವೇಗೌಡರು ಪ್ರಧಾನಿಯಾದಾಗ ಅಥವಾ ರಾಜ್ಯ ರಾಜಕಾರಣದಲ್ಲಿ ಬಿಕ್ಕಟ್ಟುಗಳು ಎದುರಾದಾಗ, ಚೆನ್ನಮ್ಮನವರು ಮನೆಯನ್ನು ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದರು. ಅವರು ಸಾರ್ವಜನಿಕವಾಗಿ ಹೆಚ್ಚಾಗಿ ಕಾಣಿಸಿಕೊಳ್ಳದಿದ್ದರೂ, ಪರದೆಯ ಹಿಂದಿನಿಂದ ಕುಟುಂಬವನ್ನು ಮುನ್ನಡೆಸುತ್ತಿದ್ದ ಶಕ್ತಿ ಅವರು. ಕೃಷಿ ಭೂಮಿಯ ಕೆಲಸದಿಂದ ಹಿಡಿದು ರಾಜಕೀಯ ಸಭೆಗಳವರೆಗೆ ಗೌಡರ ಪ್ರತಿಯೊಂದು ನಡೆಯ ಹಿಂದೆಯೂ ಚೆನ್ನಮ್ಮನವರ ಮೌನ ಸಮ್ಮತಿ ಮತ್ತು ಪ್ರೇರಣೆ ಇರುತ್ತಿತ್ತು ಎಂಬುದು ಕುಟುಂಬದ ಆಪ್ತ ವಲಯದ ಮಾತು.
