ಬೆಂಗಳೂರು, ಜು.18-ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕುಟುಂಬವು 2001ರಲ್ಲಿ ದೊಡ್ಡ ಆಘಾತಕ್ಕೆ ಈಡಾಗಿತ್ತು. ಹರದನಹಳ್ಳಿಯಲ್ಲಿ ಗೌಡರ ಪೂರ್ವಜರ ಕಾಲದಿಂದ ಪೂಜೆ ಮಾಡಿಕೊಂಡು ಬಂದಂತಹ ಈಶ್ವರನ ದೇವಸ್ಥಾನದಲ್ಲಿ, 2001ರ ಫೆಬ್ರವರಿ 21ರಂದು ಮಹಾಶಿವರಾತ್ರಿಯ ದಿನ ಗೌಡರ ಪತ್ನಿ ಚೆನ್ನಮ್ಮನವರು ಆ್ಯಸಿಡ್ ದಾಳಿಗೆ ಒಳಗಾದರು.
ಈ ದುಷ್ಕೃತ್ಯ ಮಾಡಿದ್ದು ಗೌಡರ ತಮ್ಮ ಹೆಚ್.ಡಿ. ಬಸವೇಗೌಡರ ಮಗ ಲೋಕೇಶ್. ಈ ದಾಳಿಯಲ್ಲಿ ಗೌಡರ ಸೊಸೆ ಹಾಗೂ ಮಾಜಿ ಸಚಿವ ಹೆಚ್.ಡಿ.ರೇವಣ್ಣನವರ ಪತ್ನಿ ಭವಾನಿಯವರ ಮೇಲೂ ಆ್ಯಸಿಡ್‌ಎಸೆಯಲು ಪ್ರಯತ್ನಿಸಲಾಯಿತು.
ಆದರೆ ಅವರು ಆದೃಷ್ಟವಶಾತ್ ಸ್ವಲ್ಪದರಲ್ಲೇ ಪಾರಾಗಿದ್ದರು. ನೇರ ಆಕ್ರಮಣಕ್ಕೆ ಒಳಗಾದ ಚೆನ್ನಮ್ಮನವರು ಶೇ.70ದಷ್ಟು ಸುಟ್ಟಗಾಯಗಳಿಗೆ ತುತ್ತಾಗಿ, ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದರು. ಮಾಜಿ ಪ್ರಧಾನಮಂತ್ರಿಗಳ ಪತ್ನಿಯಾದ ಚೆನ್ನಮ್ಮನವರು ಎಸ್ ಪಿಜಿ ರಕ್ಷಣೆಯಲ್ಲಿದ್ದರೂ ಲೋಕೇಶ್ ಅವರನ್ನುಬಗೌಡರ ನಿಕಟ ಸಂಬಂಧಿ ಎಂಬ ಕಾರಣಕ್ಕೆ ಅವರನ್ನು ಅನುಮಾನಿಸುವುದಾಗಲಿ, ತಪಾಸಣೆಗೆ ಒಳಪಡಿಸುವುದಾಗಲಿ ಮಾಡಿರಲಿಲ್ಲ.
ಅಷ್ಟೇ ಅಲ್ಲದೆ, ಚೆನ್ನಮ್ಮನವರಿಗಿಂತ ಮೊದಲು ಬಂದಿದ್ದ ಲೋಕೇಶ್ ಅವರ ತಾಯಿ ಕೂಡ ಅದೇ ಹೊತ್ತಿಗೆ ದೇವಸ್ಥಾನದಲ್ಲಿ ಅರ್ಚನೆ ಮಾಡಿಸುತ್ತಿದ್ದು, ಚೆನ್ನಮ್ಮ ಮತ್ತು ಭವಾನಿಯವರು ಅವರ ಅರ್ಚನೆ ಮುಗಿದು ತಾವು ಅರ್ಚನೆ ಮಾಡಿಸಲು ಅಲ್ಲೇ ಕುಳಿತು ಕಾಯುತ್ತಿದ್ದರು.
ಅವರ ಪಕ್ಕದಲ್ಲಿದ್ದ ನಂದಿ ವಿಗ್ರಹಕ್ಕೆ ನಮಸ್ಕಾರ ಮಾಡುವ ನೆಪದಲ್ಲಿ ಬಗ್ಗಿದ ಲೋಕೇಶ್ ಏಕಾಏಕಿ ಆ್ಯಸಿಡ್ ತುಂಬಿದ ಬಾಟಲಿಯನ್ನು ಹೊರತೆಗೆದು ಚೆನ್ನಮ್ಮನವರ ಮೇಲೆ ಸುರಿದು, ಉಳಿದಿದ್ದನ್ನು ಪಕ್ಕದಲ್ಲಿದ್ದ ಭವಾನಿಯವರ ಮೇಲೆ ಎರಚಲು ಯತ್ನಿಸಿದರು.
ಸಾಮಾನ್ಯವಾಗಿ ದೇವೇಗೌಡರು ತಮ್ಮ ಹುಟ್ಟೂರಿನಲ್ಲಿ ಶಿವರಾತ್ರಿ ಪೂಜೆಯನ್ನು ತಪ್ಪಿಸಿಕೊಳ್ಳುವವರಲ್ಲ. ಆದರೆ ಅಂದು ಮಾತ್ರ ಅವರು ಬರಲಿಕ್ಕಾಗಿರಲಿಲ್ಲ. ಆದರೆ, ಅವತ್ತು ಗೌಡರು ಬಂದಿದ್ದರೂ ಕೂಡ ಲೋಕೇಶ್ ಅವರನ್ನು ಗುರಿಯಾಗಿಸುತ್ತಿರಲಿಲ್ಲ.
ಈ ದುಷ್ಕೃತ್ಯದ ಹಿಂದೆ ಕೌಟುಂಬಿಕ ವೈಷಮ್ಯ ಮತ್ತು ಸೇಡು ತೀರಿಸಿಕೊಳ್ಳುವ ಹುನ್ನಾರ ಕೆಲಸ ಮಾಡಿದೆ ಎಂದು ಹೇಳಲಾಗುತ್ತದೆ.
ಸುದೀರ್ಘ ಚಿಕಿತ್ಸೆಯ ನಂತರ ಚೆನ್ನಮ್ಮ ಅವರು ಗುಣಮುಖರಾಗಿದ್ದಾರೆ. ಅವರು ನಂಬಿದ ದೇವರಿಗೆ ಮಾಡಿದ್ದ ಪೂಜಾಫಲ ಅವರನ್ನು ಇಷ್ಟು ದಿನ ಬದುಕಿಸಿತ್ತು ಎಂಬುದು ಅವರ ಕುಟುಂಬದವರ ನಂಬಿಕೆ.
