ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಧರ್ಮಪತ್ನಿ ಚನ್ನಮ್ಮ ಅವರ ನಿಧನಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ಮಾತೃಸ್ವರೂಪಿಯಾಗಿದ್ದ ಚನ್ನಮ್ಮ ಅವರು ಅಪಾರ ದೈವಭಕ್ತೆಯಾಗಿ, ತುಂಬು ಕುಟುಂಬವನ್ನು ಸಾಕಿ-ಸಲಹಿದ ಮಹಾನ್ ತಾಯಿಯಾಗಿದ್ದರು ಎಂದು ಸಿಎಂ ಬಣ್ಣಿಸಿದ್ದಾರೆ.
ದೇವೇಗೌಡರು, ಎಚ್.ಡಿ. ಕುಮಾರಸ್ವಾಮಿ, ಎಚ್.ಡಿ. ರೇವಣ್ಣ ಸೇರಿದಂತೆ ಕುಟುಂಬದ ರಾಜಕೀಯ ಹಾಗೂ ಬದುಕಿನ ಏಳ್ಗೆಯ ಹಿಂದೆ ಚನ್ನಮ್ಮ ಅವರ ಪರಿಶ್ರಮ ಮತ್ತು ತ್ಯಾಗ ಅಡಗಿತ್ತು ಎಂದು ಹೇಳಿದ್ದಾರೆ. ಅವರು ಆಸ್ಪತ್ರೆಯಿಂದ ಗುಣಮುಖರಾಗಿ ಮರಳುತ್ತಾರೆ ಎಂಬ ವಿಶ್ವಾಸ ಎಲ್ಲರಲ್ಲೂ ಇತ್ತು. ಆದರೆ ಆ ನಂಬಿಕೆ ಸುಳ್ಳಾಗಿರುವುದು ತೀವ್ರ ದುಃಖ ತಂದಿದೆ ಎಂದು ತಿಳಿಸಿದ್ದಾರೆ.
ಯಶಸ್ವಿ ಪುರುಷನ ಹಿಂದೆ ಮಹಿಳೆಯ ಪಾತ್ರ ಇರುತ್ತದೆ ಎನ್ನುವ ಮಾತಿಗೆ ಚನ್ನಮ್ಮ ಅವರು ಜೀವಂತ ಉದಾಹರಣೆಯಾಗಿದ್ದರು. ದೇವೇಗೌಡರ ಪ್ರತಿಯೊಂದು ಯಶಸ್ಸಿನ ಹಿಂದೆ ಅವರು ಮೌನವಾಗಿ ನಿಂತಿದ್ದರು. ಕುಟುಂಬ ಸೋತಾಗ ಕುಗ್ಗದೆ, ಗೆದ್ದಾಗ ಹಿಗ್ಗದೆ ಎಲ್ಲ ಏಳು-ಬೀಳುಗಳಲ್ಲಿ ಬೆನ್ನೆಲುಬಾಗಿ ನಿಂತಿದ್ದರು ಎಂದು ಸಿಎಂ ಹೇಳಿದ್ದಾರೆ.
ಮನೆಯ ಜವಾಬ್ದಾರಿಯನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸುವ ಮೂಲಕ ದೇವೇಗೌಡರ ಬದುಕಿನ ನಿಜವಾದ ಶಕ್ತಿಯಾಗಿ ಅವರು ಗುರುತಿಸಿಕೊಂಡಿದ್ದರು. ಯಾವುದೇ ಪ್ರಚಾರ ಬಯಸದೆ, ಮೌನದಿಂದಲೇ ಇಡೀ ಕುಟುಂಬವನ್ನು ಒಗ್ಗೂಡಿಸಿ ಮುನ್ನಡೆಸಿದ ಅಪರೂಪದ ವ್ಯಕ್ತಿತ್ವ ಅವರದ್ದಾಗಿತ್ತು ಎಂದು ಸ್ಮರಿಸಿದ್ದಾರೆ.
ಇಳಿ ವಯಸ್ಸಿನಲ್ಲಿ ಪತ್ನಿಯ ಅಗಲಿಕೆ ದೇವೇಗೌಡರು ಹಾಗೂ ಅವರ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸಿಎಂ ಹೇಳಿದ್ದಾರೆ. ಚನ್ನಮ್ಮ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಅವರ ಕುಟುಂಬದ ಸದಸ್ಯರು, ಬಂಧು-ಬಳಗ ಹಾಗೂ ಹಿತೈಷಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿ ದೊರೆಯಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
