ಬೆಂಗಳೂರು, ಫೆ.16- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2024-25ನೇ ಸಾಲಿನ ಆಯವ್ಯಯವನ್ನು ವಿಧಾನ ಸಭೆಯಲ್ಲಿ ಮಂಡಿಸುವಾಗ ಪ್ರತಿಪಕ್ಷ ಬಿಜೆಪಿ ಸದಸ್ಯರು ಬಜೆಟ್‍ನಲ್ಲಿ ಏನಿಲ್ಲ…. ಎಲ್ಲಾ ಸುಳ್ಳು ಎಂದು ಘೋಷಣೆ ಕೂಗಿ ಕೆಲಕಾಲ ಭಿತ್ತಿ ಪತ್ರ ಪ್ರದರ್ಶಿಸಿ ನಂತರ ಸಭಾತ್ಯಾಗ ಮಾಡಿದರು. ಜೆಡಿಎಸ್ ಸದಸ್ಯರು ಕೂಡ ಬಿಜೆಪಿ ಸದಸ್ಯರನ್ನು ಬೆಂಬಲಿಸಿ ಸಭಾತ್ಯಾಗ ಮಾಡಿ ಹೊರ ನಡೆದರು. ಇಂದು ಬೆಳಗ್ಗೆ ಸದನ ಸಮಾವೇಶಗೊಂಡ ಕೂಡಲೇ ಬಿಜೆಪಿ ಶಾಸಕ ಸುನೀಲ್ ಕುಮಾರ್ ಏನಿಲ್ಲಾ… ಏನಿಲ್ಲಾ… ಎಂದು ಹೇಳಿದರು.
ಪ್ರತಿಯಾಗಿ ಆಡಳಿತಾರೂಢ ಕಾಂಗ್ರೆಸ್ ಸದಸ್ಯರು ಆಕ್ಷೇಪವೆತ್ತಲು ಶುರುಮಾಡಿದರು. ಆಗ ಸಿಎಂ ಸಿದ್ದರಾಮಯ್ಯ ಅವರು ನಿಶಬ್ಧವಾಗಿರಲು ಹೇಳಿದರು. ನಂತರ ಸಭಾಧ್ಯಕ್ಷರಾದ ಯು.ಟಿ. ಖಾದರ್ ಅವರ ಅನುಮತಿಯಂತೆ ಬಜೆಟ್ ಮಂಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಾರಂಭಿಸಿ, 15ನೇ ಹಣಕಾಸು ಆಯೋಗವು ಮಧ್ಯಂತರ ವರದಿ ಶಿಫಾರಸ್ಸಿನಂತೆ ರಾಜ್ಯಕ್ಕಾದ ಅನ್ಯಯ ಸರಿಪಡಿಸುವಲ್ಲಿ ಹಿಂದಿನ ಸರ್ಕಾರ ವಿಫಲವಾಯಿತು ಎಂದು ಹೇಳಿದರು.
ಗ್ಯಾರಂಟಿಗಳಿಗೆ ಬಜೆಟ್‍ನಲ್ಲಿ 52 ಸಾವಿರ ಕೋಟಿ ರೂ. ಅನುದಾನ ಮೀಸಲು
ಕೇಂದ್ರದಿಂದ ರಾಜ್ಯಗಳಿಗೆ ಹಂಚಿಕೆಯಾಗುವ ತೆರಿಗೆ ಹಂಚಿಕೆಯಲ್ಲಿ 62098 ಕೋಟಿ ರೂ. ನಷ್ಟವಾಗಿದೆ ಎಂದು ಹೇಳುತ್ತಿದ್ದಂತೆ ಬಿಜೆಪಿ ಸದಸ್ಯರೆಲ್ಲ ಎದ್ದು ನಿಂತು ಏನಿಲ್ಲಾ… ಏನಿಲ್ಲಾ.. ಬಜೆಟ್‍ನಲ್ಲಿ ಏನಿಲ್ಲಾ.. ರೈತ ವಿರೋಧಿ ಸಿದ್ದರಾಮಯ್ಯ, ಎಲ್ಲಾ ಸುಳ್ಳು ಎಂದು ಘೋಷಣೆ ಕೂಗಲು ಪ್ರಾರಂಭಿಸಿದರು. ಬಿಜೆಪಿ ಸದಸ್ಯರ ಘೋಷಣೆ ಗದ್ದಲದ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡಿಸಿದರು.
ಬಿಜೆಪಿ ಸದಸ್ಯರು ಘೋಷಣೆ ಕೂಗುತ್ತಿದ್ದಾಗ ಜೆಡಿಎಸ್‍ನ ಸದಸ್ಯರು ಕೂಡ ಎದ್ದು ನಿಂತು ಬಿಜೆಪಿ ಸದಸ್ಯರನ್ನು ಬೆಂಬಲಿಸಿ ಸಭಾತ್ಯಾಗ ಮಾಡಿದರು. ಆದರೂ ವಿಚಲಿತರಾಗದ ಸಿದ್ದರಾಮಯ್ಯ ಅವರು ತಮ್ಮ ಬಜೆಟ್ ಭಾಷಣ ಮುಂದುವರೆಸಿದರು. ಮುಖ್ಯಮಂತ್ರಿ ಬಜೆಟ್ ಮಂಡಿಸುವಾಗ ಆಡಳಿತ ಪಕ್ಷದ ಶಾಸಕರು ಮೇಜು ಕುಟ್ಟಿ ಸ್ವಾಗತಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಆದಿಯಾಗಿ ಆಡಳಿತ ಪಕ್ಷದ ಸದಸ್ಯರು ಕಾಂಗ್ರೆಸ್ ಪಕ್ಷದ ಶಾಲನ್ನು ಹಾಕಿದ್ದು ವಿಶೇಷವಾಗಿತ್ತು.