ಇಂದೋರ್,ಜು. 21- ಮಧ್ಯಪ್ರದೇಶ ಸರ್ಕಾರದ ವಿದ್ಯುತ್ ವಿತರಣಾ ಸಂಸ್ಥೆಯ ಅಧೀಕ್ಷಕ ಎಂಜಿನಿಯರ್ ಮನೆ ,ಕಚೇರಿ ಸೇರಿ ಇತರೆಡೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ 7.16 ಕೋಟಿಗೂ ಅಧಿಕ ಮೌಲ್ಯದ ಆದಾಯಕ್ಕೆ ಮೀರಿದ ಆಸ್ತಿ ಪತ್ತೆಹಚ್ಚಿದ್ದಾರೆ.
ಮಧ್ಯಪ್ರದೇಶ ಪಶ್ಚಿಮ ವಲಯ ವಿದ್ಯುತ್ ವಿತರಣಾ ಕಂಪನಿಯ ಅಧೀಕ್ಷಕ ಎಂಜಿನಿಯರ್ ಶಿವರಾಮ್ ಸೆಮಿಲ್ ಅವರಿಗೆ ಸೇರಿದ ಇಂದೋರ್, ಧಾರ್ ಮತ್ತು ಮೊರೆನಾ ಸೇರಿದಂತೆ ಒಂಬತ್ತು ಸ್ಥಳಗಳಲ್ಲಿ ಏಕಕಾಲಕ್ಕೆ ಶೋಧ ಕಾರ್ಯಾಚರಣೆ ನಡೆಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಂದೋರ್‌ನಲ್ಲಿರುವ ವಿದ್ಯುತ್ ವಿತರಣಾ ಕಂಪನಿಯ ಪ್ರಧಾನ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿವರಾಮ್ ಸೆಮಿಲ್ ವಿರುದ್ಧ ಆದಾಯಕ್ಕೆ ಮೀರಿದ ಆಸ್ತಿ ಹೊಂದಿರುವ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ತನಿಖೆ ನಡೆಸಿ, ಭ್ರಷ್ಟಾಚಾರ ತಡೆ (ತಿದ್ದುಪಡಿ) ಕಾಯ್ದೆ2018ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ರಾಜೇಶ್ ಸಹಾಯ್ ತಿಳಿಸಿದ್ದಾರೆ. ದಾಳಿಯ ವೇಳೆ ಇಂದೋರ್‌ನಲ್ಲಿ ಸುಮಾರು 1.2 ಕೋಟಿ ಮೌಲ್ಯದ ಮೂರು ಅಂತಸ್ತಿನ ಮನೆ ಅವರ ಹೆಸರಿನಲ್ಲಿರುವುದು ಪತ್ತೆಯಾಗಿದೆ.
ಧಾರ್ ಜಿಲ್ಲೆಯ ಪಿಥಾಂಪುರ ಮತ್ತು ಉಜ್ಜೈನಿ ಕೈಗಾರಿಕಾ ಪ್ರದೇಶಗಳಲ್ಲಿ ಟ್ರಾನ್‌್ಸ ಫಾರ್ಮರ್ ಹಾಗೂ ವಿದ್ಯುತ್ ಉಪಕರಣಗಳ ತಯಾರಿಕೆಗೆ ಸಂಬಂಧಿಸಿದ ಕೈಗಾರಿಕಾ ಘಟಕಗಳು, ಜಮೀನುಗಳು ಮತ್ತು ನಿರ್ಮಾಣ ಹಂತದ ಕಾರ್ಖಾನೆಗಳು ಅವರ ಪುತ್ರ, ಸೊಸೆ, ಅಳಿಯ, ಬಾವ ಹಾಗೂ ಇತರ ಆಪ್ತ ಸಂಬಂಧಿಕರ ಹೆಸರಿನಲ್ಲಿ ನೋಂದಾಯಿಸಲ್ಪಟ್ಟಿದ್ದು, ಇವುಗಳಲ್ಲಿ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಲಾಗಿದೆ ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಇದಲ್ಲದೆ, ಇಂದೋರ್‌ನಲ್ಲಿ ಹಲವು ವ್ಯಾಪಾರ ಕಚೇರಿಗಳು, ಮೊರೆನಾದಲ್ಲಿ ಜಮೀನು, ವಿದ್ಯುತ್ ಚಾಲಿತ ಕಾರು ಹಾಗೂ ಎರಡು ಅಂತಸ್ತಿನ ಮನೆ ಕೂಡ ಪತ್ತೆಯಾಗಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.
ಕಳೆದ 33 ವರ್ಷಗಳ ಸರ್ಕಾರಿ ಸೇವೆಯಲ್ಲಿ ಸೆಮಿಲ್ ಅವರ ಒಟ್ಟು ಆದಾಯ ಸುಮಾರು 2 ಕೋಟಿ ಮಾತ್ರವಾಗಿದ್ದು, ಪ್ರಾಥಮಿಕ ತನಿಖೆಯಲ್ಲಿ ಅವರು ಹಾಗೂ ಅವರ ಆಪ್ತ ಸಂಬಂಧಿಕರು 7.16 ಕೋಟಿಗೂ ಅಧಿಕ ಮೊತ್ತವನ್ನು ವೆಚ್ಚ ಮಾಡಿರುವುದು ಪತ್ತೆಯಾಗಿದೆ ಎಂದು ಸಹಾಯ್ ಹೇಳಿದ್ದಾರೆ.ದಾಳಿಯಲ್ಲಿ ವಶಪಡಿಸಿಕೊಳ್ಳಲಾದ ದಾಖಲೆಗಳು, ಹೂಡಿಕೆಗಳು ಹಾಗೂ ಇತರ ಆಸ್ತಿಗಳ ಮೌಲ್ಯಮಾಪನ ನಡೆಯುತ್ತಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಹೇಳಿದ್ದಾರೆ.
