ಬೆಂಗಳೂರು,ಜು.21-ಸಣ್ಣ ಸಣ್ಣ ಚಾಕಲೇಟ್ ಬಾಕ್ಸ್ ಗಳಲ್ಲಿ ಕೊಕೇನ್ ಎಂಬ ಮಾದಕ ವಸ್ತು ಇಟ್ಟು ಮರೆಮಾಚಿ ಮಾರಾಟ ಮಾಡುತ್ತಿದ್ದ ಉತ್ತರ ಪ್ರದೇಶದ ಡ್ರಗ್ ಪೆಡ್ಲರ್‌ನನ್ನು ಚಾಮರಾಜಪೇಟೆ ಠಾಣೆ ಪೊಲಿಸರು ಬಂಧಿಸಿ 1.6 ಕೋಟಿ ಮೌಲ್ಯದ 116 ಗ್ರಾಂ ಕೊಕೇನ್,ಕಾರು ವಶಪಡಿಸಿಕೊಂಡಿದ್ದಾರೆ.
ಜು.19 ರಂದು ಮಧ್ಯರಾತ್ರಿ ಚಾಮರಾಜಪೇಟೆಯ ಕನ್ಸರ್‌ವೆನ್ಸಿ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಮಾದಕ ವಸ್ತು ಮಾರಾಟ ಮಾಡುತ್ತಿದ್ದಾನೆಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ಈ ಖಚಿತ ಮಾಹಿತಿ ಮೇರೆಗೆ ಪಿಎಸ್‌ಐ ಗುರುಸ್ವಾಮಿ ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ದಾವಿಸಿದಾಗ ಸಿಲ್ವರ್ ಬಣ್ಣದ ಕಾರನ್ನು ನಿಲ್ಲಿಸಿಕೊಂಡು ಅಕ್ರಮವಾಗಿ ಕೊಕೇನ್ ಮಾರಾಟ ಮಾಡುತ್ತಿದ್ದುದ್ದು ಕಂಡು ಬಂದಿದೆ.
ಮಾದಕ ವಸ್ತುವಿದ್ದ ಬಾಕ್‌್ಸ ಪರಿಶೀಲಿಸಿದಾಗ ಸಣ್ಣ ಸಣ್ಣ ಚಾಕಲೇಟ್ ಬಾಕ್‌್ಸಗಳಲ್ಲಿ ಕೊಕೇನ್ ಬಚ್ಚಿಟ್ಟು ಮಾರಾಟ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ರಾಜು (30) ಎಂಬಾತನನ್ನು ಬಂಧಿಸಿದ್ದಾರೆ.
ಮತ್ತೊಬ್ಬ ಆರೋಪಿ ಅಕ್ಷಿತ್ ತಲೆಮರೆಸಿಕೊಂಡಿದ್ದು, ಆತನ ಪತ್ತೆಕಾರ್ಯ ಮುಂದುವರೆದಿದೆ.ಕೋರಮಂಗಲ, ಬಾಣಸವಾಡಿ, ವೈಟ್‌ಫೀಲ್ಡ್ , ಮಲ್ಲೇಶ್ವರಂ ಹಾಗೂ ಪುಲಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಮಾದಕ ವಸ್ತು ಮಾರಾಟದ ವಿರುದ್ಧ ಕಾರ್ಯಾಚರಣೆ ಕೈಗೊಂಡು 9 ಮಂದಿ ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ.
ಕೋರಮಂಗಲ ಠಾಣೆ ಪೊಲೀಸರು 62.80 ಲಕ್ಷ ಮೌಲ್ಯದ 157 ಗ್ರಾಂ ಹೆರಾಯಿನ್, ಬಾಣಸವಾಡಿ ಠಾಣೆ ಪೊಲೀಸರು 48 ಲಕ್ಷ ಮೌಲ್ಯದ 240 ಗ್ರಾಂ ಎಂಡಿಎಂಎ, ವೈಟ್‌ಫೀಲ್ಡ್ ಠಾಣೆ ಪೊಲೀಸರು 12 ಲಕ್ಷ ಮೌಲ್ಯದ 12 ಕೆಜಿ ಗಾಂಜಾ, ಮಲ್ಲೇಶ್ವರಂ ಠಾಣೆ ಪೊಲೀಸರು 10 ಲಕ್ಷ ಮೌಲ್ಯದ 9 ಕೆಜಿ 960 ಗ್ರಾಂ ಗಾಂಜಾ ಹಾಗೂ ಪುಲಕೇಶಿನಗರ ಠಾಣೆ ಪೊಲೀಸರು 9 ಲಕ್ಷ ಮೌಲ್ಯದ 5 ಗ್ರಾಂ ಕೊಕೇನ್, 4ಕೆಜಿ 92 ಗ್ರಾಂ ಗಾಂಜಾ ವಶಪಡಿಸಿಕೊಂಡಿ ದ್ದಾರೆ.
ವಶಕ್ಕೆ ಪಡೆದ ಒಟ್ಟು 10 ಮಂದಿ ಡ್ರಗ್ ಪೆಡ್ಲರ್‌ಗಳನ್ನು ವಿಚಾರಣೆಗೊಳಪಡಿಸಿದಾಗ, ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ಹೊರ ರಾಜ್ಯದ ಹಾಗೂ ರಾಜ್ಯದ ಅಪರಿಚಿತ ವ್ಯಕ್ತಿಗಳಿಂದ ನಿಷೇಧಿತ ಮಾದಕ ವಸ್ತುಗಳನ್ನು ಕಡಿಮೆ ಬೆಲೆಗೆ ಖರೀದಿಸಿಕೊಂಡು ಬಂದು ಸಾರ್ವಜನಿಕರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದುದಾಗಿ ಬಾಯ್ಬಿಟ್ಟಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
