ಬೆಂಗಳೂರು, ಜು.21-ಶಿವಾಜಿ ನಗರದಲ್ಲಿ ಪುಟ್ ಪಾತ್ ತೆರವು ಕಾರ್ಯಾಚರಣೆ ವೇಳೆ ಜಿ.ಬಿ.ಎ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ಪೆಪ್ಪರ್ ಸ್ಪ್ರೇ ಮಾಡಿ ಗೂಂಡಾಗಿರಿ, ದೌರ್ಜನ್ಯ ನಡೆಸಿರುವ ಕೇಡಿಗಳ ಮೇಲೆ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಬೇಕು ಎಂದು ವಿಧಾನ ಪರಿಷತ್ ನ ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ ಟಿ.ಎ.ಶರವಣ ಆಗ್ರಹಿಸಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದಂತೆ ಜಿಬಿಎ ಸಿಬ್ಬಂದಿಗಳು ಪುಟ್ ಪಾತ್ ತೆರವು ನಡೆಸಿದ್ದಾರೆ. ಶಿವಾಜಿನಗರದಲ್ಲಿ ಜನಸಾಮಾನ್ಯರ ಓಡಾಟಕ್ಕೆ ದೊಡ್ಡ ಸಮಸ್ಯೆಯಾಗಿ ಜನ ರಸ್ತೆಗೆ ಬಂದು ಅಪಘಾತಗಳು ಸಂಭವಿಸುತ್ತಿವೆ. ಇದನ್ನು ಸರಿ ಮಾಡಲು ಹೋದ ಅಧಿಕಾರಿಗಳ ಮೇಲೆ ದಾಳಿ ನಡೆಸಿರುವುದು ಖಂಡನಾರ್ಹ ಎಂದು ಅವರು ಹೇಳಿದ್ದಾರೆ.
ಇಂಥ ಹಲ್ಲೆಗಳನ್ನು ಹೀಗೆ ಬಿಟ್ಟರೆ ಕಿಡಿಗೇಡಿಗಳು ಇದನ್ನೇ ಪರಿಪಾಠ ಮಾಡಿಕೊಳ್ಳುತ್ತಾರೆ. ಜೊತೆಗೆ ಅಧಿಕಾರಿಗಳು ಧೈರ್ಯದಿಂದ ಕಾರ್ಯನಿರ್ವಹಿಸಲು ಹಿಂದೇಟು ಹಾಕುವಂಥ ಪರಿಸ್ಥಿತಿ ಬರುತ್ತದೆ. ಆದ್ದರಿಂದ ಹಲ್ಲೆ ನಡೆಸಿದ ವ್ಯಕ್ತಿಗಳ ವಿರುದ್ಧ ಕಠೋರ ಕ್ರಮ ಕೈಗೊಳ್ಳಬೇಕು. ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುವ ಅಧಿಕಾರಿಗಳಿಗೆ ಸೂಕ್ತ ರಕ್ಷಣೆ ಕೊಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಈ ಸಂಬಂಧಿಸಿದಂತೆ ಜಿಬಿಎ ಕಮಿಷನರ್ ಮಹೇಶ್ವರ ರಾವ್ ಜೊತೆ ಕರೆ ಮಾಡಿ, ಜಿಬಿ ಅಧಿಕಾರಿಗಳಿಗೆ ಸೂಕ್ತ ರಕ್ಷಣೆಯನ್ನು ನೀಡಿ ಪ್ರತಕ್ಷಣ ಎಲ್ಲಾ ತಪ್ಪಿತಸ್ಥರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.
