ಬೆಂಗಳೂರು,ಫೆ.17- ದೇವಸ್ಥಾನಗಳಿಂದ ಸಂಗ್ರಹಿಸಿದ ಹಣವನ್ನು ಅಲ್ಪಸಂಖ್ಯಾತರ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಖರ್ಚು ಮಾಡುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಪ್ರಮುಖರೊಬ್ಬರಿಗೆ ಮುಜರಾಯಿ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿರುಗೇಟು ನೀಡಿದ್ದು, ಚುನಾವಣೆ ಕಾಲದಲ್ಲಿ ಈ ರೀತಿ ಜನರನ್ನು ದಾರಿ ತಪ್ಪಿಸುವುದು ಪ್ರಯೋಜನಕಾರಿಯಲ್ಲ ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪ್ರಮುಖರೊಬ್ಬರು ಪೋಸ್ಟ್ ಮಾಡಿ, ಕರ್ನಾಟಕ ಸರ್ಕಾರ ತನ್ನ ಬಜೆಟ್‍ನಲ್ಲಿ 330 ಕೋಟಿ ರೂ.ಗಳನ್ನು ವಕ್ ಆಸ್ತಿಗಳ ಅಭಿವೃದ್ಧಿ, ಹಜ್ ಭವನಗಳ ನಿರ್ಮಾಣ ಮತ್ತು ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗೆ ನೀಡಿದೆ. ಕರ್ನಾಟಕ ರಾಜ್ಯಕ್ಕೆ ಎ ಮತ್ತು ಬಿ ದರ್ಜೆಯ ದೇವಸ್ಥಾನಗಳಿಂದ 400 ಕೋಟಿ ಸೇರಿ 450 ಕೋಟಿ ರೂ.ಗೂ ಹೆಚ್ಚು ಆದಾಯ ಧಾರ್ಮಿಕ ದತ್ತಿ ಇಲಾಖೆಗೆ ಬರುತ್ತಿದೆ. ಇದಕ್ಕಾಗಿಯೇ ಹಿಂದೂ ದೇವಾಲಯಗಳನ್ನು ಸರ್ಕಾರದಿಂದ ಮುಕ್ತಗೊಳಿಸುವ ಮಸೂದೆಗೆ ವಿರೋಧ ವ್ಯಕ್ತವಾಗುತ್ತಿದೆ.
ಇದು ಶೇ.101 ರಷ್ಟು ಜಾತ್ಯತೀತತೆ ಎಂದು ಲೇವಡಿ ಮಾಡಿದ್ದರು. ಜೊತೆಗೆ ದಕ್ಷಿಣ ಕನ್ನಡ, ಉಡುಪಿ, ಮಂಗಳೂರು, ಉತ್ತರ ಕನ್ನಡ, ತುಮಕೂರಿನ ಜಿಲ್ಲೆಗಳ ದೇವಾಲಯಗಳ ಸಂಖ್ಯೆ ಮತ್ತು ಅದರಿಂದ ಬರುತ್ತಿರುವ ಆದಾಯದ ಪಟ್ಟಿಯನ್ನು ಲಗತ್ತಿಸಿದ್ದರು.
ಹಳೇ ಹುಬ್ಬಳ್ಳಿ ಗಲಭೆ ಆರೋಪಿಗಳ ಬಿಡುಗಡೆಗೆ ಕಾಂಗ್ರೆಸ್ ಸಹಕರಿಸಿದೆ : ಪ್ರಹ್ಲಾದ್ ಜೋಶಿ
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ರಾಮಲಿಂಗಾರೆಡ್ಡಿ, ಜವಾಬ್ದಾರಿಯುತ ಸ್ಥಾನದಲ್ಲಿರುವವರು ಕನ್ನಡಿಗರು ಹಾಗೂ ದೇಶವನ್ನು ಈ ರೀತಿ ದಾರಿ ತಪ್ಪಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿದ್ದಾರೆ. ನಾನು ಮತ್ತೊಮ್ಮೆ ಪುನರುಚ್ಛರಿಸುತ್ತಿದ್ದೇನೆ, ಧಾರ್ಮಿಕ ದತ್ತಿ ಇಲಾಖೆಯಿಂದ ಸ್ವೀಕರಿಸಲಾಗುತ್ತಿರುವ ಹಣವನ್ನು ಹಿಂದೂ ದೇವಾಲಯಗಳಿಗೆ ಮಾತ್ರವೇ ಬಳಕೆ ಮಾಡಲಾಗುತ್ತಿದೆ. ಒಂದು ಪೈಸೆಯನ್ನೂ ಅನ್ಯ ಧರ್ಮೀಯ ಧಾರ್ಮಿಕ ಕೇಂದ್ರಗಳಿಗೆ ಬಳಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ದೇವಸ್ಥಾನಗಳಿಂದ ಸಂಗ್ರಹವಾಗುವ ಆದಾಯವನ್ನು ಆಯಾ ದೇವಸ್ಥಾನಗಳ ಅಭಿವೃದ್ಧಿಗಾಗಿಯೇ ಬಳಸಲಾಗುತ್ತಿದೆ. ಅಪಪ್ರಚಾರಗಳು ರಾಜಕೀಯ ಷಡ್ಯಂತ್ರವಾಗಿವೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆ ಬಿಜೆಪಿಯ ಮಿತ್ರರು ಈ ರೀತಿ ತಪ್ಪು ದಾರಿಗೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲೂ ಇಂತಹದ್ದೇ ಪ್ರಯತ್ನಗಳ ಮೂಲಕ ಹಿಂದುತ್ವದ ನಾಟಕವಾಡಲಾಗಿತ್ತು. ಆದರೆ ರಾಜ್ಯದ ಜನ ಸತ್ಯ ತಿಳಿದುಕೊಂಡಿದ್ದರು. ಅಪಪ್ರಚಾರಗಳಿಗೆ ಕಿವಿಗೊಡಲಿಲ್ಲ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್ ಜನಸ್ನೇಹಿಯಾಗಿದೆ. ಬಿಜೆಪಿ ಮತ್ತು ವಿಪಕ್ಷಗಳಿಗೆ ಬಜೆಟ್ ವಿರೋಧಿಸಲು ಸಕಾರಣಗಳು ಸಿಗುತ್ತಿಲ್ಲ. ಅದಕ್ಕಾಗಿ ಇಂತಹ ನಾಟಕೀಯ ನಡವಳಿಕೆಯನ್ನು ಅನುಸರಿಸುತ್ತಿದ್ದಾರೆ ಎಂದು ರಾಮಲಿಂಗಾರೆಡ್ಡಿ ಕಿಡಿಕಾರಿದ್ದಾರೆ. ಅಪಪ್ರಚಾರದ ನಡುವೆಯೂ ಬಿಜೆಪಿ ಪಕ್ಷದ 25 ಸಂಸದರು ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲನ್ನು ವಂಚಿಸಿದ್ದೇಕೆ ಎಂದು ಪ್ರಶ್ನೆ ಮಾಡಿ ಎಂದು ಸಚಿವರು ತಿರುಗೇಟು ನೀಡಿದ್ದಾರೆ.