ಮೈಸೂರು,ಫೆ.18- ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಕಟ್ಟಡವನ್ನು ತೆರವುಗೊಳಿಸಲಾಗಿದೆ.ಮೈಸೂರಿನ ನಜರ್ಬಾದ್ನಲ್ಲಿರುವ ಮಿನಿ ವಿಧಾನಸೌಧ ಹಿಂಭಾಗದ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ತಲೆಯೆತ್ತಿದ್ದ ಕೆಲ ಮಳಿಗೆಗಳನ್ನು ನೆಲಸಮಗೊಳಿಸಲಾಗಿದೆ.
ಹಲವು ವರ್ಷಗಳಿಂದ ಅಕ್ರಮವಾಗಿ ಈ ಕಟ್ಟಡವನ್ನು ನಿರ್ಮಿಸಿ ವಾಣಿಜ್ಯ ಉದ್ದೇಶಕ್ಕಾಗಿ ಬಳಸಲಾಗುತ್ತಿದೆ. ಒಂದೇ ಸೂರಿನಡಿ ಐದು ಮಳಿಗೆಗಳನ್ನು ನಿರ್ಮಿಸಿ ಅದನ್ನು ಪತ್ರ ಬರಹಗಾರರ ಕಚೇರಿ, ಜೆರಾಕ್ಸ್ ಅಂಗಡಿ ಸೇರಿದಂತೆ ಕೆಲ ವಾಣಿಜ್ಯ ಚಟುವಟಿಕೆಗಳಿಗೆ ಬಾಡಿಗೆ ನೀಡಲಾಗಿತ್ತು. ಈ ಅಕ್ರಮ ಕಟ್ಟಡಕ್ಕೆ ಚೆಸ್ಕಾಂನಿಂದ ವಿದ್ಯುತ್ ಸಂಪರ್ಕವನ್ನು ಸಹ ನೀಡಲಾಗಿತ್ತು. ಸರ್ಕಾರಕ್ಕೆ ಸೇರಿದ ಜಾಗದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಿಸಿದ್ದರೂ ಯಾವೊಬ್ಬ ಅಧಿಕಾರಿಯೂ ಸಹ ಈ ಬಗ್ಗೆ ಗಮನಹರಿಸಿರಲಿಲ್ಲ.
ಮಹೇಶ್ ಕುಮಾರ್ ಅವರು ತಹಸಿಲ್ದಾರ್ ಆಗಿ ಬಂದ ನಂತರ ದಾಖಲೆಗಳನ್ನು ಪರಿಶೀಲಿಸಿ ಪೊಲೀಸರ ಭದ್ರತೆಯಲ್ಲಿ ಈ ಅಕ್ರಮ ಮಳಿಗೆಗಳನ್ನು ಜೆಸಿಬಿ ಮೂಲಕ ನೆಲಸಮಗೊಳಿಸಿದ್ದಾರೆ. ಮತ್ತೊಂದು ವಿಶೇಷ ಎಂದರೆ ತಹಸಿಲ್ದಾರ್ ಕಚೇರಿ, ಲೋಕೋಪಯೋಗಿ ಇಲಾಖೆ, ಭೂಮಾಪನಾಕಾರಿಗಳ ಕಚೇರಿ ಸೇರಿದಂತೆ ವಿವಿಧ ಸರಕಾರಿ ಕಚೇರಿಗಳ ಮಧ್ಯದಲ್ಲಿಯೇ ಹಲವಾರು ವರ್ಷಗಳಿಂದ ಈ ಅಕ್ರಮ ಕಟ್ಟಡ ತಲೆಯೆತ್ತಿತ್ತು.
ಮಿನಿ ವಿಧಾನಸೌಧ ಹಿಂಭಾಗದಲ್ಲಿ ಅಕ್ರಮವಾಗಿ ಮಳಿಗೆ ನಿರ್ಮಿಸಲಾಗಿದ್ದು, ಖಾಲಿ ಮಾಡಲು ತಿಳಿಸಿದರೂ ತೆರವು ಮಾಡದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ನೆಲಸಮಗೊಳಿಸಲಾಗಿದೆ ಎಂದು ತಹಸಿಲ್ದಾರ್ ಮಹೇಶ್ ಕುಮಾರ್ ತಿಳಿಸಿದ್ದಾರೆ. ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆಯಲ್ಲಿ ರೆವಿನ್ಯೂ ಇನ್ಸ್ಪೆಕ್ಟರ್ ರಾಘವೇಂದ್ರ ನಾಯಕ್, ಗ್ರಾಮ ಆಡಳಿತ ಅಧಿಕಾರಿ ಮಹೇಶ್, ನಾಗೇಶ್ ಕುಮಾರ್, ಅಜೀಮ್ ಖಾನ್, ಸರ್ವೇ ಸೂಪರ್ ವೈಸರ್ ಸುರೇಶ್ ಭಾಗವಹಿಸಿದ್ದರು.