Friday, May 17, 2024
Homeರಾಜ್ಯಜನರ ಮನೆ ಬಾಗಿಲಿಗೆ ಇ -ಖಾತಾ

ಜನರ ಮನೆ ಬಾಗಿಲಿಗೆ ಇ -ಖಾತಾ

ಬೆಂಗಳೂರು,ಫೆ.18- ಸಾರ್ವ ಜನಿಕರ ಆಸ್ತಿಗಳ ದಾಖಲೆಗಳ ದುರುಪಯೋಗ ವಾಗುವುದನ್ನು ತಡೆಗಟ್ಟಿ, ಮನೆಬಾಗಿಲಿಗೆ ಇ-ಖಾತಾ ದಸ್ತಾವೇಜುಗಳನ್ನು ತಲುಪಿಸ ಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು. ಜ್ಞಾನಭಾರತಿ ಆವರಣದಲ್ಲಿ ರಾಜರಾಜೇಶ್ವರಿ ನಗರ, ಯಶವಂತಪುರ ವಿಧಾನಸಭಾ ಕ್ಷೇತ್ರಗಳ ಸಾರ್ವಜನಿಕರ ಸಮಸ್ಯೆ ಆಲಿಸಲು ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ ಜನಸ್ಪಂದನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಖಾತೆಗಳ ವಿಚಾರದಲ್ಲಿ ಐತಿಹಾಸಿಕ ತೀರ್ಮಾನ ತೆಗೆದುಕೊಳ್ಳಲಾಗಿದೆ. ಬೆಂಗಳೂರಿನ ಆಸ್ತಿಗಳ ಖಾತೆ ಸೇರಿದಂತೆ ಎಲ್ಲಾ ದಾಖಲಾತಿಗಳನ್ನು ದುರುಪಯೋಗ ವಾಗದಂತೆ ಸರಿಪಡಿಸಲಾಗುವುದು.

ಇ-ಖಾತೆ ಮಾಡಿಸುವ ಮೂಲಕ ಅದನ್ನು ಜನರ ಮನೆ ಬಾಗಿಲಿಗೆ ತಲುಪಿಸುತ್ತೇವೆ ಎಂದರು.
ಬೆಂಗಳೂರಿನಲ್ಲಿ ಸರಿಯಾಗಿ ತೆರಿಗೆ ಪಾವತಿಯಾಗಿಲ್ಲ. 2020 ರಲ್ಲಿ ಬಿಜೆಪಿ ಸರ್ಕಾರ ದುಬಾರಿ ದಂಡ ವಿಸುವ ನಿಯಮ ರೂಪಿಸಿತ್ತು. ಅದನ್ನು ಸರಿಪಡಿಸಲು ಒಂದು ಅವಗೆ ಸರಳೀಕರಣ ಮಾಡುವ ತೀರ್ಮಾನ ತೆಗೆದುಕೊಳ್ಳುತ್ತಿದ್ದೇವೆ. ಈಗಾಗಲೇ ಸಂಪುಟದಲ್ಲಿ ಚರ್ಚಿಸಲಾಗಿದ್ದು, ವಿಧಾನಮಂಡಲದಲ್ಲಿ ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದು ಹೇಳಿದರು.

ನ್ಯಾಯಯುತವಾದ ಹಾಗೂ ವೈಜ್ಞಾನಿಕವಾದ ತೆರಿಗೆ ನಿರ್ಧರಣೆಗೆ ಜನಸಾಮಾನ್ಯರಿಗೆ ಅವಕಾಶ ಕಲ್ಪಿಸಲಾಗುವುದು. ಅಧಿಕಾರಿಗಳ ಬಳಿ ಬಂದು ಸಾರ್ವಜನಿಕರು ಸ್ವಯಂ ಘೋಷಣೆ ಮಾಡಿಕೊಂಡು ತಪ್ಪನ್ನು ಸರಿಪಡಿಸಿಕೊಳ್ಳಲು ಅವಕಾಶ ನೀಡಿದ್ದೇವೆ ಎಂದರು.
ಸಂಸದ ಡಿ.ಕೆ.ಸುರೇಶ್ ಜನರ ಮನೆಬಾಗಿಲಿಗೆ ಹೋಗಿ ಸೇವೆ ಮಾಡುತ್ತಿದ್ದಾರೆ. ಪಂಚಾಯಿತಿ ಸದಸ್ಯರಂತೆ ರಸ್ತೆರಸ್ತೆ ಸುತ್ತಿದ್ದಾರೆ. ಇಂತಹ ಸಂಸದರನ್ನು ಹಿಂದೆಂದೂ ಜನ ನೋಡಿಲ್ಲ.

ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದೆ. ಜನ ಅವರನ್ನು ಬೆಂಬಲಿಸಿ ಋಣ ತೀರಿಸಬೇಕು. ಬಿಜೆಪಿಯವರು ಟಿವಿಯಲ್ಲಿ ಅಬ್ಬರಿಸುತ್ತಿದ್ದಾರೆ. ನಾವು ಜನರ ಪರವಾಗಿ ಕೆಲಸ ಮಾಡುತ್ತಿದ್ದೇವೆ. ಪಂಚಖಾತ್ರಿಗಳ ಮೂಲಕ ಜನರ ಜೀವನವನ್ನು ಸುಧಾರಿಸುವಂತೆ ಮಾಡಿದ್ದೇವೆ. ಹಿಂದೆ ಯಾವ ಸರ್ಕಾರವೂ ಈ ರೀತಿಯ ಯೋಜನೆಗಳನ್ನು ರೂಪಿಸಿರಲಿಲ್ಲ ಎಂದು ಹೇಳಿದರು.
ಮನೆಯ ಮೇಲೆ ಸೌರಶಕ್ತಿ ಫಲಕಗಳನ್ನು ಅಳವಡಿಸಿಕೊಳ್ಳಲು ಸಬ್ಸಿಡಿ ನೀಡಲಾಗುತ್ತಿದೆ. ಇದರಿಂದ ಮತ್ತಷ್ಟು ಉಳಿತಾಯ ಸಾಧ್ಯವಾಗಲಿದೆ ಎಂದರು.

ನಾವು ಭಾವನೆಗಳ ಮೇಲೆ ರಾಜಕಾರಣ ಮಾಡುತ್ತಿಲ್ಲ, ಬದುಕಿನ ಮೇಲೆ ರಾಜಕಾರಣ ಮಾಡುತ್ತಿದ್ದೇವೆ. ಬೆಲೆ ಏರಿಕೆ ನಿಯಂತ್ರಿಸಿ ಜನರಿಗೆ ಅನುಕೂಲ ಮಾಡಿಕೊಡಲು ಯತ್ನಿಸುತ್ತಿದ್ದೇವೆ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಹಳೆಯ ಬೋರ್ವೆಲ್ಗಳನ್ನು ಮತ್ತೆ ರೀಡ್ರಿಲ್ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗುವುದು. ಮೇ ವೇಳೆಗೆ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲಾಗುವುದು. ಮೇಕೆದಾಟು ನಿರ್ಮಾಣವಾದರೆ ಇನ್ನಷ್ಟು ಅನುಕೂಲವಾಗಲಿದೆ ಎಂದು ಹೇಳಿದರು.

ಆರಂಭದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಮುನಿರತ್ನ ಹಾಗೂ ಸೋಮಶೇಖರ್ ಕಾಂಗ್ರೆಸ್ ಪಕ್ಷದ ಭದ್ರ ಬುನಾದಿಯಾಗಿದ್ದರು ಎಂದು ಹೇಳಿದಾಗ ಮುನಿರತ್ನ ಹುಸಿನಗು ನಕ್ಕು ಸ್ಪಂದಿಸಿದರು. ವೇದಿಕೆಯ ಎಡಭಾಗದಲ್ಲಿ ಕೆಲವರು ಗಲಾಟೆ ಮಾಡುತ್ತಿದ್ದಾಗ ಡಿ.ಕೆ.ಶಿವಕುಮಾರ್ ಅವರನ್ನು ಗದರಿದರು. ಸಂಸದ ಡಿ.ಕೆ.ಸುರೇಶ್ ಎದ್ದು ಬಂದು ಅರ್ಜಿ ನೀಡುವ ನಿಗದಿತ ಸ್ಥಳಕ್ಕೆ ಹೋಗಿ ನಿಂತುಕೊಳ್ಳಿ, ಗಲಾಟೆ ಮಾಡಬೇಡಿ ಎಂದು ಸಮಾಧಾನ ಮಾಡಿದರು.

ನಂತರ ಮಾತು ಮುಂದುವರೆಸಿದ ಡಿ.ಕೆ.ಶಿವಕುಮಾರ್, ಕಾರ್ಯಕರ್ತರು, ಪೊಲೀಸ್ ಅಧಿಕಾರಿಗಳು ಇಲ್ಲಿ ನಿಲ್ಲುವ ಅಗತ್ಯವಿಲ್ಲ . ಹಿರಿಯ ನಾಗರಿಕರು ಹಾಗೂ ವಿಕಲ ಚೇತನರಿದ್ದಲ್ಲಿಯೇ ನಾನು ಮೊದಲು ಬಂದು ಸಮಸ್ಯೆ ಕೇಳುತ್ತೇನೆ. ಈಗಾಗಲೇ 12 ಕ್ಷೇತ್ರಗಳಲ್ಲಿ ಜನಸ್ಪಂದನ ನಡೆಸಿದ್ದು, 20 ಸಾವಿರ ಅರ್ಜಿಗಳು ನೋಂದಣಿ ಮಾಡಿಸಲಾಗಿದೆ. ಮುಖ್ಯಮಂತ್ರಿಯವರು 2 ಜನಸ್ಪಂದನ ಮಾಡಿದ್ದು, ಅಲ್ಲಿಯೂ ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ. ಇದಕ್ಕೆಲ್ಲಾ ಪರಿಹಾರ ದೊರಕಿಸಲು ಅಧಿಕಾರಿಗಳ ಪ್ರತ್ಯೇಕ ತಂಡ ರಚಿಸಲಾಗುತ್ತದೆ. ನಾನು ಖುದ್ದು ನಿಗಾ ವಹಿಸುತ್ತೇನೆ ಎಂದರು.

ಜನಸಾಮಾನ್ಯರು ಸಚಿವರ, ಶಾಸಕರ ಮನೆಬಾಗಿಲಿಗೆ ಅಲೆಯಬಾರದು ಎಂಬ ಕಾರಣಕ್ಕೆ ಸರ್ಕಾರವೇ ನಿಮ್ಮ ಬಾಗಿಲಿಗೆ ಬಂದಿದೆ ಎಂದು ಹೇಳಿದರು. ಸರ್ಕಾರ ಜನಸಾಮಾನ್ಯರ ಜೊತೆಗಿದೆ. ಎಲ್ಲರ ಸಮಸ್ಯೆಗಳನ್ನೂ ಒಮ್ಮೆಲೆ ಬಗೆಹರಿಸಲಾಗುವುದಿಲ್ಲ. ಆದರೆ ಅರ್ಜಿ ಕೊಟ್ಟವರಿಗೆ ಖಂಡಿತಾ ಸ್ಪಂದಿಸಲಾಗುವುದು. ಈಗಾಗಲೇ ಹಲವು ಬಾರಿ ಅರ್ಜಿ ಕೊಟ್ಟು ಪರಿಹಾರ ಸಿಗದೆ ತಿರಸ್ಕಾರಗೊಂಡಿರುವವರು ಮತ್ತೆ ಮತ್ತೆ ಅರ್ಜಿ ಕೊಡುತ್ತಿರುವುದು ಕಂಡುಬರುತ್ತಿದೆ. ಪ್ರತಿಯೊಂದು ಜನಸ್ಪಂದನದಲ್ಲೂ 3 ರಿಂದ 4 ಸಾವಿರ ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ನೋಂದಣಿಯಾಗಿ ರಶೀದಿ ಪಡೆದ ಅರ್ಜಿಗಳಿಗೆ ಪ್ರತಿಕ್ರಿಯೆ ಸಿಕ್ಕೇ ಸಿಗುತ್ತದೆ ಎಂದು ಭರವಸೆ ನೀಡಿದರು.

RELATED ARTICLES

Latest News